2026ರ ಏಷ್ಯನ್ ಗೇಮ್ಸ್‌ಗಾಗಿ ಬಿಸಿಸಿಐ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ, ಅನುಭವಿ ಮತ್ತು ಯುವ ಆಟಗಾರ್ತಿಯರನ್ನು ಒಳಗೊಂಡ ಈ ತಂಡವು ಟಿ20 ವಿಶ್ವಕಪ್ ನಿರಾಸೆಯ ನಂತರ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಗುರಿ ಹೊಂದಿದೆ.

ಮುಂಬೈ: 2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿನ ನಿರಾಸೆಯ ನಂತರ, ಬಿಸಿಸಿಐ 2026ರ ಏಷ್ಯನ್ ಗೇಮ್ಸ್‌ಗಾಗಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಟೀಂ ಇಂಡಿಯಾ ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಗುರಿಯೊಂದಿಗೆ ಕಣಕ್ಕಿಳಿಯಲಿದೆ.

ಕಳೆದ ಬಾರಿ (2023) ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ಮಹಿಳಾ ತಂಡವು ಶ್ರೀಲಂಕಾವನ್ನು ಸೋಲಿಸಿ ಚಿನ್ನದ ಪದಕ ಗೆದ್ದಿತ್ತು. ಈ ಬಾರಿ ಡಿಫೆಂಡಿಂಗ್ ಚಾಂಪಿಯನ್ ಆಗಿ ಕಣಕ್ಕಿಳಿಯುತ್ತಿರುವ ಹರ್ಮನ್‌ಪ್ರೀತ್ ಕೌರ್ ಪಡೆ, ಚಿನ್ನದ ಪದಕವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಹೊತ್ತಿದೆ. ಸ್ಟಾರ್ ಬ್ಯಾಟರ್ ಸ್ಮೃತಿ ಮಂಧನಾ ಈ ತಂಡದ ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

ಒಟ್ಟು 8 ತಂಡಗಳ ನಡುವೆ ಟಿ20 ಮಾದರಿಯಲ್ಲಿ ಈ ಪಂದ್ಯಾವಳಿ ನಡೆಯಲಿದೆ. ಆಯ್ಕೆಗಾರರು ಅನುಭವಿ ಆಟಗಾರ್ತಿಯರ ಜೊತೆಗೆ, ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದ ಹಲವು ಯುವ ಆಟಗಾರ್ತಿಯರಿಗೆ ಅವಕಾಶ ನೀಡಿದ್ದಾರೆ. ಸ್ಮೃತಿ ಮಂಧನ, ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ನಾಯಕಿ ಹರ್ಮನ್‌ಪ್ರೀತ್ ಕೌರ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಜಿ. ಕಮಲಿನಿ, ಭಾರತಿ ಫುಲ್ಮಾಲಿ, ಶ್ರೀ ಚರಣಿ, ಕ್ರಾಂತಿ ಗೌಡ್ ಮತ್ತು ನಂದಿನಿ ಶರ್ಮಾ ಅವರಿಗೆ ಈ ಮೆಗಾ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಸುವರ್ಣಾವಕಾಶ ಸಿಕ್ಕಿದೆ.

ಸ್ಪಿನ್ ಆಲ್‌ರೌಂಡರ್ ಶ್ರೇಯಾಂಕಾ ಪಾಟೀಲ್ ಅವರನ್ನು 15 ಸದಸ್ಯರ ಮುಖ್ಯ ತಂಡಕ್ಕೆ ಆಯ್ಕೆ ಮಾಡಲಾಗಿದ್ದರೂ, ಅವರ ಆಟವು ಫಿಟ್‌ನೆಸ್ ಕ್ಲಿಯರೆನ್ಸ್ ಮೇಲೆ ಅವಲಂಬಿತವಾಗಿದೆ. ಸದ್ಯ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುವ ಶ್ರೇಯಾಂಕಾಗೆ, ಅಲ್ಲಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಮಾತ್ರ ಅವರು ಜಪಾನ್‌ಗೆ ಪ್ರಯಾಣಿಸಲಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನೆದರ್‌ಲೆಂಡ್ಸ್‌ ಎದುರಿನ ಪಂದ್ಯದ ವೇಳೆಯಲ್ಲಿ ಗಾಯಗೊಂಡು ಮೈದಾನ ತೊರೆದಿದ್ದರು.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯಲಿರುವ ಈ ಏಷ್ಯನ್ ಗೇಮ್ಸ್ ಮಹಿಳಾ ಕ್ರಿಕೆಟ್ ಪಂದ್ಯಾವಳಿಯು 2026ರ ಸೆಪ್ಟೆಂಬರ್ 17ರಿಂದ ಸೆಪ್ಟೆಂಬರ್ 22ರವರೆಗೆ ನಡೆಯಲಿದೆ. ಈ ಹೈ-ವೋಲ್ಟೇಜ್ ಟೂರ್ನಮೆಂಟ್‌ನ ಎಲ್ಲಾ ಪಂದ್ಯಗಳು ನಗೋಯಾದಲ್ಲಿರುವ ಸುಂದರವಾದ ಕೊರೊಜಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ಆಯೋಜನೆಯಾಗಿವೆ. ವಿಶ್ವಕಪ್ ಸೋಲನ್ನು ಮರೆತು ಅಭಿಮಾನಿಗಳಿಗೆ ಮತ್ತೆ ಹುರುಪು ತುಂಬಲು ಈ ಟೂರ್ನಿ ಟೀಂ ಇಂಡಿಯಾಗೆ ಬಹಳ ಮುಖ್ಯವಾಗಿದೆ.

ಏಷ್ಯನ್ ಗೇಮ್ಸ್ 2026ಕ್ಕೆ ಭಾರತೀಯ ಮಹಿಳಾ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ಶಫಾಲಿ ವರ್ಮಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ಕಮಲಿನಿ (ವಿಕೆಟ್ ಕೀಪರ್), ಭಾರತಿ ಫುಲ್ಮಾಲಿ, ಶ್ರೀ ಚರಣಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್, ರಾಧಾ ಯಾದವ್, ನಂದಿನಿ ಶರ್ಮಾ.

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಗ್ರೂಪ್‌ ಹಂತದಲ್ಲಿಯೇ ಹೊರಬಿದ್ದ ಭಾರತ

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ತಂಡವು 2026ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಆರಂಭದ ಹೊರತಾಗಿಯೂ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ಎದುರು ಮುಗ್ಗರಿಸುವ ಮೂಲಕ ಗ್ರೂಪ್ ಹಂತದಲ್ಲೇ ತನ್ನ ಅಭಿಯಾನ ಮುಗಿಸಿತ್ತು. ಇದೀಗ ಏಷ್ಯನ್ ಗೇಮ್ಸ್‌ನಲ್ಲಿ ಟಿ20 ವಿಶ್ವಕಪ್ ಸೋಲಿನ ನೋವು ಮರೆತು ಚಿನ್ನದ ಪದಕ ಗೆಲ್ಲಲು ರೆಡಿಯಾಗಿದೆ.