ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ, ರವಿಶಾಸ್ತ್ರಿಯವರೇ ತಮ್ಮ ನೆಚ್ಚಿನ ಕೋಚ್ ಎಂದು ಬಹಿರಂಗಪಡಿಸಿದ್ದಾರೆ. 2023ರ ವಿಶ್ವಕಪ್ ಸೋಲಿನ ನೋವನ್ನು ಹಂಚಿಕೊಂಡಿರುವ ಅವರು, ಸದ್ಯ ತಂಡದಲ್ಲಿನ ತಮ್ಮ ಭವಿಷ್ಯದ ಬಗ್ಗೆಯೂ ಮಾತನಾಡಿದ್ದಾರೆ.

ಬೆಂಗಳೂರು: ಭಾರತ ಕಂಡ ಅನುಭವಿ ಮಾರಕ ವೇಗಿ ಮೊಹಮ್ಮದ್ ಶಮಿ, ಸದ್ಯ ಟೀಂ ಇಂಡಿಯಾದಿಂದ ಕೊಂಚ ತೆರೆಮರೆಗೆ ಸರಿಯುತ್ತಿದ್ದಾರೆ. 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಶಮಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪದೇ ಪದೇ ವಿಫಲವಾಗುತ್ತಿದ್ದಾರೆ. ಇದೀಗ ಶಮಿ ಟೈಮ್ಸ್ ನೌ ನವಭಾರತ್ ವೆಬ್‌ಸೈಟ್‌ ಜತೆಗಿನ ಮಾತುಕಥೆ ವೇಳೆ ತಮ್ಮ ನೆಚ್ಚಿನ ಕೋಚ್ ಯಾರು ಎನ್ನುವ ಇಂಟ್ರೆಸ್ಟಿಂಗ್ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಮೊಹಮ್ಮದ್ ಶಮಿಯ ಫೇವರೇಟ್ ಕೋಚ್ ಯಾರು?

ಬಂಗಾಳ ಮೂಲದ ಅನುಭವಿ ವೇಗಿ ಮೊಹಮ್ಮದ್ ಶಮಿ, ಟೀಂ ಇಂಡಿಯಾ ಪರ ಆಡುವಾಗ ಅನಿಲ್ ಕುಂಬ್ಳೆ, ರವಿಶಾಸ್ತ್ರಿ, ರಾಹುಲ್ ದ್ರಾವಿಡ್ ಹಾಗೂ ಗೌತಮ್ ಗಂಭೀರ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಪೈಕಿ ನಿಮ್ಮ ಪಾಲಿನ ಫೇವರೇಟ್ ಕೋಚ್ ಯಾರು ಎನ್ನುವ ಪ್ರಶ್ನೆಗೆ ದ್ರಾವಿಡ್, ಕುಂಬ್ಳೆ ಹಾಗೂ ಗಂಭೀರ್ ಅವರನ್ನು ಬಿಟ್ಟು ರವಿಶಾಸ್ತ್ರಿ ನನ್ನ ನೆಚ್ಚಿನ ಕೋಚ್ ಎಂದಿದ್ದಾರೆ. ರವಿಶಾಸ್ತ್ರಿ ತಮಗೆ ಮುಕ್ತವಾಗಿ ಹಾಗೂ ಆಕ್ರಮಣಕಾರಿಯಾಗಿ ಬೌಲಿಂಗ್ ಮಾಡಲು ಪೂರ್ಣ ಸ್ವಾತಂತ್ರ್ಯ ನೀಡುತ್ತಿದ್ದರು ಎಂದು ಹೇಳಿದ್ದಾರೆ.

ಇನ್ನು ತಾವು 2023ರ ಏಕದಿನ ವಿಶ್ವಕಪ್ ಗೆಲ್ಲದೇ ಇರುವುದಕ್ಕೆ ತುಂಬಾ ಬೇಸರವಿದೆ ಎಂದು ಶಮಿ ಹೇಳಿದ್ದಾರೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ 24 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮಿದ್ದರು. ಭಾರತ ತಂಡವು 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. ಆ ಸೋಲಿನ ಬಗ್ಗೆ ಈಗಲೂ ಬೇಸರವಿದೆ ಎಂದು ಹೇಳಿದ್ದಾರೆ.

ರವಿಶಾಸ್ತ್ರಿ ಮಾರ್ಗದರ್ಶನದ ಬಗ್ಗೆ ಮನಬಿಚ್ಚಿ ಮಾತಾಡಿದ ಶಮಿ:

ಎಲ್ಲಾ ಕೋಚ್‌ಗಳನ್ನು ಹೋಲಿಕೆ ಮಾಡುವುದು ಅಷ್ಟು ಸಮಂಜಸವಲ್ಲ. ನಾನು ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಹೆಚ್ಚು ಆಡಿಲ್ಲ. ನಾನು ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಮಾರ್ಗದರ್ಶನದಲ್ಲಿ ಹೆಚ್ಚಿನ ಸಮಯ ಕಳೆದಿದ್ದೇನೆ. ಈ ನಾಲ್ವರ ಪೈಕಿ ಒಬ್ಬ ಕೋಚ್ ಆರಿಸಬೇಕು ಎಂದರೆ ನಾನು ರವಿಶಾಸ್ತ್ರಿಯನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಯಾಕೆಂದರೆ ಅವರು ಕೊಡುತ್ತಿದ್ದ ಸ್ವಾತಂತ್ರ್ಯ ಹಾಗಿತ್ತು. ನಾವು ಮೈದಾನಕ್ಕಿಳಿಯುವಾಗ ಎಲ್ಲರೂ ಆಕ್ರಮಣಕಾರಿ ಆಟವಾಡಬೇಕು ಎಂದು ಬಯಸುತ್ತಿದ್ದರು. ಅದು ಹೊರಗಿನಿಂದ ನೋಡುವವರಿಗೂ ಭಾಸವಾಗುತ್ತಿತ್ತು ಎಂದು ಶಮಿ ಹೇಳಿದ್ದಾರೆ.

ಕವಲು ದಾರಿಯಲ್ಲಿ ಮೊಹಮ್ಮದ್ ಶಮಿ ವೃತ್ತಿಬದುಕು?

ಮೊಹಮ್ಮದ್ ಶಮಿ, ಸರಿಸುಮಾರು 17 ತಿಂಗಳಿನಿಂದ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಈ ವರ್ಷ ಶಮಿ 36ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಇದೀಗ ಲಂಕಾ ಎದುರಿನ ಟೆಸ್ಟ್ ಸರಣಿಗೂ ಮುನ್ನ ಜಸ್ಪ್ರೀತ್ ಬುಮ್ರಾ ಗಾಯಗೊಂಡಿದ್ದರು. ಹೀಗಿದ್ದೂ ಶಮಿಗೆ ಅವಕಾಶ ನೀಡದೇ ಜಮ್ಮು ಕಾಶ್ಮೀರ ವೇಗಿ ಆಕಿಬ್ ನಬಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಶಮಿ, ಮತ್ತೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುತ್ತಾರೋ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.