ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಆಮಿರ್ ಬ್ರಿಟಿಷ್ ಪೌರತ್ವ ಪಡೆದಿದ್ದು, ಇದು ಅವರ ಫ್ರಾಂಚೈಸಿ ಕ್ರಿಕೆಟ್ ಬದುಕಿಗೆ ಹೊಸ ತಿರುವು ನೀಡಿದೆ. ಈ ಪೌರತ್ವದಿಂದಾಗಿ ಐಪಿಎಲ್‌ನಲ್ಲಿ ಆಡಲು ಕಾನೂನುಬದ್ಧವಾಗಿ ಅರ್ಹತೆ ಪಡೆದಿದ್ದರೂ, ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಲಂಡನ್ (ಆ.4): ಬ್ರಿಟಿಷ್ ಪೌರತ್ವ ಪಡೆದುಕೊಂಡ ಬಳಿಕ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆದ 'ಇಂಡಿಯನ್ ಪ್ರೀಮಿಯರ್ ಲೀಗ್' (IPL) ಅಂಗಳಕ್ಕೆ ಕಾಲಿಡಲಿದ್ದಾರೆಯೇ ಎಂಬ ಭಾರಿ ಕುತೂಹಲಕ್ಕೆ ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಆಮಿರ್ ಕೊನೆಗೂ ಮೌನ ಮುರಿದಿದ್ದಾರೆ. ತಾವು ಐಪಿಎಲ್‌ನಲ್ಲಿ ಸ್ಪರ್ಧಿಸುವ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಟೂರ್ನಿಯಲ್ಲಿ 'ಟ್ರೆಂಟ್ ರಾಕೆಟ್ಸ್' ತಂಡವನ್ನು ಸ್ಥಳೀಯ ಆಟಗಾರನಾಗಿ ಪ್ರತಿನಿಧಿಸುತ್ತಿರುವ 34 ವರ್ಷದ ಆಮಿರ್, ಪಂದ್ಯಾವಳಿಯ ಹೊರತಾಗಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಮ್ಮ ಭವಿಷ್ಯದ ಫ್ರಾಂಚೈಸಿ ಕ್ರಿಕೆಟ್ ಯೋಜನೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
"ಬ್ರಿಟಿಷ್ ಪೌರತ್ವ ಸಿಕ್ಕಿರುವುದರಿಂದ 2027ರ ಆವೃತ್ತಿಯಿಂದ ಪಾಕಿಸ್ತಾನ್ ಸೂಪರ್ ಲೀಗ್ (PSL) ಟೂರ್ನಿಯಲ್ಲಿ ನಾನು ವಿದೇಶಿ ಆಟಗಾರನಾಗಿ ಅಂಗಳಕ್ಕಿಳಿಯಲಿದ್ದೇನೆ. ಆದರೆ, ಐಪಿಎಲ್ ವಿಚಾರಕ್ಕೆ ಬಂದರೆ, ನಾನು ಅದರಲ್ಲಿ ಭಾಗವಹಿಸುತ್ತೇನೋ ಇಲ್ಲವೋ ಎಂಬುದರ ಬಗ್ಗೆ ನನಗಿನ್ನೂ ಸ್ಪಷ್ಟತೆ ಇಲ್ಲ. ಈ ಕುರಿತು ಯಾವುದೇ ನಿರ್ಧಾರ ತಳೆದಿಲ್ಲ," ಎಂದು ಆಮಿರ್ ತಿಳಿಸಿದ್ದಾರೆ. 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ದಯನೀಯ ಸೋಲಿಗೆ ಇದೇ ಮೊಹಮದ್ ಆಮೀರ್ ಕಾರಣನಾಗಿದ್ದ.
ಬ್ರಿಟಿಷ್ ಪೌರತ್ವದೊಂದಿಗೆ ಹೊಸ ಅಧ್ಯಾಯ ಆರಂಭ
ಇಂಗ್ಲೆಂಡ್ ನಾಗರಿಕಳಾಗಿರುವ ತಮ್ಮ ಪತ್ನಿ ನರ್ಜಿಸ್ ಖಾನ್ ಅವರ ಮೂಲಕ ಆಮಿರ್ ಬ್ರಿಟನ್ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. ಅಗತ್ಯ ಕಾನೂನು ಪ್ರಕ್ರಿಯೆಗಳು ಹಾಗೂ ಅಲ್ಲಿನ ವಾಸ್ತವ್ಯದ ನಿಬಂಧನೆಗಳನ್ನು ಪೂರೈಸಿದ ನಂತರ, ಈ ಎಡಗೈ ವೇಗಿಗೆ ಬ್ರಿಟಿಷ್ ಪೌರತ್ವ ದೊರೆತಿದೆ. ಇದು ಅವರ ಫ್ರಾಂಚೈಸಿ ಕ್ರಿಕೆಟ್ ಬದುಕಿನಲ್ಲೇ ಹೊಸ ದಾರಿಗಳನ್ನು ತೆರೆದಿದೆ.
ಬ್ರಿಟಿಷ್ ಪೌರತ್ವ ಪಡೆದ ತಕ್ಷಣವೇ ಆಮಿರ್ ಇಂಗ್ಲೆಂಡ್‌ನ 'ಟಿ20 ಬ್ಲಾಸ್ಟ್' ಟೂರ್ನಿಯಲ್ಲಿ 'ನಾಟ್ಸ್ ಔಟ್‌ಲಾಸ್' ತಂಡಕ್ಕೆ ಹಾಗೂ 'ದಿ ಹಂಡ್ರೆಡ್' ಟೂರ್ನಿಯಲ್ಲಿ 'ಟ್ರೆಂಟ್ ರಾಕೆಟ್ಸ್' ತಂಡಕ್ಕೆ ವಿದೇಶಿ ಆಟಗಾರನ ಬದಲಾಗಿ ಸ್ಥಳೀಯ ಇಂಗ್ಲಿಷ್ ಆಟಗಾರನಾಗಿ ಸಹಿ ಹಾಕಿದ್ದಾರೆ. ಇದರರ್ಥ, ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್‌ನಲ್ಲಿ ಅವರು ಇನ್ಮುಂದೆ ವಿದೇಶಿ ಆಟಗಾರನ ಸ್ಲಾಟ್ ಅನ್ನು ಆಕ್ರಮಿಸುವುದಿಲ್ಲ.
ಐಪಿಎಲ್ ಬಾಗಿಲು ತೆರೆದರೂ ನಿರ್ಧಾರ ಮುಂದಕ್ಕೆ
ಪಾಕಿಸ್ತಾನಿ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ನಿಷೇಧವಿದೆ. ಆದರೆ ಬ್ರಿಟಿಷ್ ಪೌರತ್ವ ಪಡೆದಿರುವುದರಿಂದ ಆಮಿರ್ ಈಗ ಬ್ರಿಟಿಷ್ ವಿದೇಶಿ ಆಟಗಾರನಾಗಿ ಐಪಿಎಲ್ ಹರಾಜಿನಲ್ಲಿ ಹೆಸರು ನೋಂದಾಯಿಸಲು ಕಾನೂನುಬದ್ಧವಾಗಿ ಅರ್ಹತೆ ಪಡೆದುಕೊಂಡಿದ್ದಾರೆ. ಹೀಗಿದ್ದೂ, ಅವರು ಸದ್ಯಕ್ಕೆ ಐಪಿಎಲ್ ಪ್ರವೇಶದ ಬಗ್ಗೆ ಆತುರ ಪಡುತ್ತಿಲ್ಲ.
ಪ್ರಸ್ತುತ ಇಂಗ್ಲೆಂಡ್‌ನ ಲೀಗ್‌ಗಳ ಮೇಲೆ ಗಮನ ಹರಿಸಿರುವ ಆಮಿರ್, ನಂತರ ತಮ್ಮ ತಾಯ್ನಾಡಿನ ಪಿಎಸ್‌ಎಲ್ ಟೂರ್ನಿಗೆ ಮರಳಲಿದ್ದಾರೆ. ಆದರೆ ಬ್ರಿಟಿಷ್ ಪೌರತ್ವ ಇರುವ ಕಾರಣ ಅಲ್ಲಿ ಅವರು ಪಾಕಿಸ್ತಾನಿ ಆಟಗಾರನ ಬದಲಾಗಿ 'ವಿದೇಶಿ ಆಟಗಾರ' ಎಂಬ ವರ್ಗೀಕರಣದ ಅಡಿಯಲ್ಲೇ ಕಣಕ್ಕಿಳಿಯಬೇಕಾಗುತ್ತದೆ. 2024ರ ಟಿ20 ವಿಶ್ವಕಪ್ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಆಮಿರ್, ಪಾಕಿಸ್ತಾನ ಪರ 36 ಟೆಸ್ಟ್, 61 ಏಕದಿನ ಹಾಗೂ 62 ಟಿ20 ಪಂದ್ಯಗಳನ್ನು ಆಡಿದ್ದಾರೆ. ತಮ್ಮ ಪೀಳಿಗೆಯ ಅತ್ಯಂತ ಕೌಶಲ್ಯಯುತ ಎಡಗೈ ವೇಗಿಗಳಲ್ಲಿ ಒಬ್ಬರೆನಿಸಿಕೊಂಡಿರುವ ಇವರಿಗೆ ವಿಶ್ವದಾದ್ಯಂತ ವಿವಿಧ ಫ್ರಾಂಚೈಸಿ ಲೀಗ್‌ಗಳಲ್ಲಿ ಭಾರಿ ಬೇಡಿಕೆಯಿದೆ.


