ಅಪ್ಪನಂತಲ್ಲ ಮಗ, ತನ್ನದೇ ದಾರಿ ತುಳಿಯುತ್ತಿದ್ದಾನೆ ದ್ರಾವಿಡ್ ಪುತ್ರ ಸಮಿತ್..!
ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಇದೀಗ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ತನ್ನದೇ ಆದ ಹೆಜ್ಜೆಗುರುತು ದಾಖಲಿಸುವತ್ತ ದಿಟ್ಟ ಹೆಜ್ಜೆಯಿಡುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
- ಸುದರ್ಶನ್, ಸುವರ್ಣ ನ್ಯೂಸ್
ಸರಿಯಾಗಿ ನೆನಪಿಲ್ಲ. ಬಹುಶಃ 2016 ಅಥವಾ 2017 ಇರಬೇಕು. ಗೆಳೆಯನೊಬ್ಬನ ಜೊತೆ ಬೆಂಗಳೂರಿನ ಮಡಿವಾಳದ ಬಳಿ ಇರುವ ಸೇಂಜ್ ಜಾನ್ಸ್ ಕ್ರೀಡಾಂಗಣಕ್ಕೆ ಹೋಗಿದ್ದೆ. ಅಲ್ಲೊಂದು ಸ್ಕೂಲ್ ಟೂರ್ನಮೆಂಟ್ ನಡೆಯುತ್ತಿತ್ತು. ಕನ್ನಡಕ ಹಾಕಿದ್ದ ಹುಡುಗನೊಬ್ಬ ಮೀಡಿಯಂ ಪೇಸ್ ಬೌಲಿಂಗ್ ಮಾಡುತ್ತಿದ್ದ.
ಮೊದಲ ನೋಟದಲ್ಲೇ ಹುಡುಗ ಗಮನ ಸೆಳೆದು ಬಿಟ್ಟ. ನೋಡುತ್ತಾ ನಿಂತೆ. ಆದಾಗಲೇ ಸೆಂಚುರಿ ಬಾರಿಸಿದ್ದ ಹುಡುಗ ನನ್ನ ಕಣ್ಣ ಮುಂದೆಯೇ ಎರಡು ವಿಕೆಟ್’ಗಳನ್ನು ಹಾರಿಸಿ ಬಿಟ್ಟ. ಪಂದ್ಯ ಮುಗಿಯಿತು.. ಹುಡುಗನ ಬಳಿ ಹೋಗಿ ನಿನ್ನ ಹೆಸರೇನೆಂದು ಕೇಳಿದೆ. ‘ಸಮಿತ್’ ಎಂದ. ಸಮಿತ್..? ಎಂದು ಪ್ರಶ್ನಾರ್ಥಕವಾಗಿ ಹುಡುಗನನ್ನು ನೋಡಿದಾಗ, “ಸಮಿತ್ ದ್ರಾವಿಡ್” ಎಂದು ಬಿಟ್ಟ.
ಆ ದಿನ ನಾನು ಮಾತನಾಡಿಸಿದ್ದ ಆ ಹುಡುಗ ಕರ್ನಾಟಕದ ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಅವರ ಹಿರಿಮಗ. ಅದೇ ಹುಡುಗ ಈಗ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರ ಆಡುತ್ತಿದ್ದಾನೆ. ಮೊನ್ನೆ ಒಂದೊಳ್ಳೆ ಇನ್ನಿಂಗ್ಸ್ ಆಡಿ ಗಮನ ಸೆಳೆದಿದ್ದಾನೆ. ದ್ರಾವಿಡ್ ಮಗನ ಆಟವನ್ನು ನೋಡಿದವರು, “ಅಪ್ಪನಂತೆ ಮಗ” ಎಂದು ಉದ್ಘರಿಸುತ್ತಿದ್ದಾರೆ.
ಅಂಥವರಿಗೊಂದು ಮಾತು. ರಾಹುಲ್ ದ್ರಾವಿಡ್ ಅವರ ಹಿರಿಮಗ ಸಮಿತ್ ಅಪ್ಪನಂತೆ ಅಲ್ಲವೇ ಅಲ್ಲ. ಅಪ್ಪ ಇಡೀ ಜಗತ್ತೇ ಮೆಚ್ಚಿದ ಬ್ಯಾಟ್ಸ್’ಮನ್. ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್’ಮನ್’ಗಳಲ್ಲಿ ಒಬ್ಬರು. ಆದರೆ ಮಗ ಆಲ್ರೌಂಡರ್. ಬಲಗೈ ಮಧ್ಯಮ ವೇಗದ ಬೌಲರ್, ಬಲಗೈ ಬ್ಯಾಟರ್.
ಈಗಿನ ಕಾಲದಲ್ಲಿ higher level ಕ್ರಿಕೆಟ್ ಆಡಬೇಕೆಂದರೆ, multi talented ಆಗಿರಲೇಬೇಕು. ಬ್ಯಾಟಿಂಗ್ ಜೊತೆ ಬೌಲಿಂಗ್ ಮಾಡಬೇಕು ಅಥವಾ ಬೌಲಿಂಗ್ ಜೊತೆ ಬ್ಯಾಟಿಂಗ್ ಕೌಶಲ್ಯ ಗೊತ್ತಿರಬೇಕು. ಮೀಡಿಯಂ ಪೇಸ್ ಆಲ್ರೌಂಡರ್ ಆಗಿದ್ದರೆ ಅಂಥಾ ಆಟಗಾರನ ತೂಕವೇ ಬೇರೆ. ರಾಹುಲ್ ದ್ರಾವಿಡ್ ತಮ್ಮ ಹಿರಿಮಗನನ್ನು ಹಾಗೆಯೇ ಬೆಳೆಸಿದ್ದಾರೆ.
ಒಂದು ಓವರ್‌ನಲ್ಲಿ 39 ರನ್: ಇಂಟರ್‌ನ್ಯಾಷನಲ್ ಕ್ರಿಕೆಟ್‌ನಲ್ಲಿ 17 ವರ್ಷದ ಯುವರಾಜ್ ಸಿಂಗ್ ರೆಕಾರ್ಡ್ ನುಚ್ಚುನೂರು..!
ಈಗಾಗಲೇ ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿರುವ ಸಮಿತ್ ದ್ರಾವಿಡ್, ಈ ವರ್ಷ ಕೂಚ್ ಬೆಹಾರ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದ್ದ ಕರ್ನಾಟಕ ತಂಡದಲ್ಲಿದ್ದ.
KSCA ಅಂಡರ್-19 ಟೂರ್ನಿಗಳಲ್ಲಿ ಮಗ ಆಡುತ್ತಿದ್ದರೆ.. ದ್ರಾವಿಡ್ ಮೈದಾನದ ಮೂಲೆಯಲ್ಲಿ ಕುಳಿತು ಇಡೀ ದಿನ ಪಂದ್ಯ ವೀಕ್ಷಿಸುತ್ತಾರೆ. ಅದು ನೆಲದ ಮೇಲಾದರೂ ಸರಿ, ಮೆಟ್ಟಿಲುಗಳ ಮೇಲಾದರೂ ಸರಿ. ದ್ರಾವಿಡ್ ಅವರ ಕಿರಿಮಗ ಅನ್ವಯ್ ದ್ರಾವಿಡ್ ಅಪ್ಪನ ಪಡಿಯಚ್ಚಿನಂತಿರುವ ವಿಕೆಟ್ ಕೀಪರ್ ಬ್ಯಾಟ್ಸ್’ಮನ್. ಕರ್ನಾಟಕ ಅಂಡರ್-14 ತಂಡದ ನಾಯಕ ಕೂಡ.
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರನಿಗೆ ಕ್ರಿಕೆಟ್ ಒಗ್ಗಿದಂತೆ ಕಾಣುತ್ತಿಲ್ಲ.. ಮತ್ತೊಬ್ಬ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ ಅವರ ಮಗ ಭಾರತ ಪರ ಆಡಿದರೂ ಅಪ್ಪನ ಪ್ರಭಾವಳಿಯ ಮುಂದೆ ಆತ ನಿಲ್ಲಲೇ ಇಲ್ಲ. ದ್ರಾವಿಡ್ ಅವರ ಮಕ್ಕಳು ಹಾಗಾಗದಿರಲಿ.. ಅಪ್ಪನಂತೆ ಮಕ್ಕಳಿಗೂ ಕ್ರಿಕೆಟ್ ದೇವತೆ ಒಲಿಯಲಿ.