2026-27ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಂಧ್ರ ಪ್ರದೇಶ ವಿರುದ್ಧದ ಪಂದ್ಯಕ್ಕೆ 15 ಸದಸ್ಯರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಯುವ ಆಟಗಾರ ಸ್ಮರಣ್ ಆರ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್‌ವಾಲ್ ಅವರಂತಹ ಅನುಭವಿಗಳು ತಂಡದಲ್ಲಿದ್ದಾರೆ.

ಬೆಂಗಳೂರು (ಅ.1): 2026-27ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಭಾಗವಾಗಿ ಆಂಧ್ರ ಪ್ರದೇಶ ವಿರುದ್ಧ ನಡೆಯಲಿರುವ ಮಹತ್ವದ ಪಂದ್ಯಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) 15 ಸದಸ್ಯರ ಬಲಶಾಲಿ ಕರ್ನಾಟಕ ತಂಡವನ್ನು ಪ್ರಕಟಿಸಿದೆ. ಈ ಪಂದ್ಯವು ಅಕ್ಟೋಬರ್ 11 ರಿಂದ 14 ರವರೆಗೆ ವಿಜಯವಾಡದಲ್ಲಿ ಜರುಗಲಿದೆ. ಈ ಬಾರಿಯ ರಣಜಿ ಪಂದ್ಯಕ್ಕೆ ಯುವ ಹಾಗೂ ಉದಯೋನ್ಮುಖ ಆಟಗಾರ ಸ್ಮರಣ್ ಆರ್ (Smaran R) ಅವರನ್ನು ನಾಯಕನನ್ನಾಗಿ (Captain) ಆಯ್ಕೆ ಮಾಡಲಾಗಿದ್ದು, ತಂಡದಲ್ಲಿ ಕೆ.ಎಲ್. ರಾಹುಲ್, ಮಯಾಂಕ್ ಅಗರ್‌ವಾಲ್ ಹಾಗೂ ಕರುಣ್ ನಾಯರ್ ಅವರಂತಹ ಅನುಭವಿ ಹಾಗೂ ಅಂತಾರಾಷ್ಟ್ರೀಯ ಆಟಗಾರರ ದಂಡೇ ಇದೆ.

ಅನುಭವ ಮತ್ತು ಯುವ ಉತ್ಸಾಹದ ಸಮ್ಮಿಶ್ರಣ

ಕರ್ನಾಟಕ ಆಯ್ಕೆ ಸಮಿತಿಯು ಅತ್ಯಂತ ಸಮತೋಲಿತ ತಂಡವನ್ನು ಆಯ್ಕೆ ಮಾಡಿದೆ. ಅನುಭವಿ ಆರಂಭಿಕ ಆಟಗಾರರಾದ ಮಯಾಂಕ್ ಅಗರ್‌‌ವಾಲ್ ಹಾಗೂ ಕೆ.ಎಲ್. ರಾಹುಲ್ ತಂಡಕ್ಕೆ ಬ್ಯಾಟಿಂಗ್ ಶಕ್ತಿ ನೀಡಲಿದ್ದಾರೆ. ಅವರೊಂದಿಗೆ ಅನುಭವಿ ಮಧ್ಯಮ ಕ್ರಮಾಂಕದ ಬ್ಯಾಟರ್ ಕರುಣ್ ನಾಯರ್ ಹಾಗೂ ಶ್ರೇಯಸ್ ಗೋಪಾಲ್ ಕೂಡ ಸಾಥ್ ನೀಡಲಿದ್ದಾರೆ. ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟರ್‌ಗಳಾಗಿ ಕೃತಿಕ್ ಕೃಷ್ಣ ಹಾಗೂ ಶ್ರೀಜಿತ್ ಕೆ.ಎಲ್. ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಎಂ. ಕೃಷ್ಣ ನೇತೃತ್ವ ವಹಿಸಲಿದ್ದು, ಶಿಖರ್ ಶೆಟ್ಟಿ, ಅಭಿಲಾಷ್ ಶೆಟ್ಟಿ, ಮನ್ವಂತ್ ಕುಮಾರ್ ಎಲ್, ಕುಮಾರ್ ಎಲ್.ಆರ್ ಮತ್ತು ರಿತೇಶ್ ಭಟ್ಕಳ್ ಸಾಥ್ ನೀಡಲಿದ್ದಾರೆ. ಆದರೆ, ಪ್ರಸಿದ್ಧ ಕೃಷ್ಣ ಗಾಯಾಳುವಾಗಿದ್ದು ಪಂದ್ಯದ ವೇಳೆಗೆ ಫಿಟ್‌ ಆಗುವ ನಿರೀಕ್ಷೆ ಇದೆ.

ಕರ್ನಾಟಕ ರಣಜಿ ತಂಡದ 15 ಆಟಗಾರರ ವಿವರ: ಮಯಾಂಕ್ ಅಗರ್‌ವಾಲ್ (ಕೋಲ್ಸ್ ಕ್ರಿಕೆಟ್ ಕ್ಲಬ್ / ಆರ್‌ಬಿಐ) , ರಾಹುಲ್ ಕೆ.ಎಲ್. (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) , ಅನೀಶ್ವರ್ ಗೌತಮ್ (ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ 2), ಕರುಣ್ ನಾಯರ್ (ವಲ್ಚರ್ಸ್ ಕ್ರಿಕೆಟ್ ಕ್ಲಬ್), ಸ್ಮರಣ್ ಆರ್ (ನಾಯಕ) (ವಲ್ಚರ್ಸ್ ಕ್ರಿಕೆಟ್ ಕ್ಲಬ್) , ಅನೀಶ್ ಕೆ.ವಿ. (ಸೋಷಿಯಲ್ ಕ್ರಿಕೆಟರ್ಸ್), ಶ್ರೇಯಸ್ ಗೋಪಾಲ್ (ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ 1) , ಕೃತಿಕ್ ಕೃಷ್ಣ (ವಿಕೆಟ್ ಕೀಪರ್) (ವಲ್ಚರ್ಸ್ ಕ್ರಿಕೆಟ್ ಕ್ಲಬ್ / ಆರ್‌ಡಬ್ಲ್ಯೂಎಫ್‌ಎಸ್‌ಎ) ಶಿಖರ್ ಶೆಟ್ಟಿ (ವಲ್ಚರ್ಸ್ ಕ್ರಿಕೆಟ್ ಕ್ಲಬ್) ಪ್ರಸಿದ್ಧ್ ಎಂ. ಕೃಷ್ಣ (ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ) ಅಭಿಲಾಷ್ ಶೆಟ್ಟಿ (ಸ್ವಾಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ 1 / ಆರ್‌‌ಡಬ್ಲ್ಯೂಎಫ್‌ಎಸ್‌ಎ) ಮನ್ವಂತ್ ಕುಮಾರ್ ಎಲ್. (ಸ್ವಸ್ತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ 2 / ಆರ್‌ಡಬ್ಲ್ಯೂಎಫ್‌ಎಸ್‌ಎ) ಕುಮಾರ್ ಎಲ್.ಆರ್. (ಸರ್ ಸಯ್ಯದ್ ಕ್ರಿಕೆಟರ್ಸ್) ರಿತೇಶ್ ಭಟ್ಕಳ್ (ಪಾಲಾರ್ ಸ್ಪೋರ್ಟ್ಸ್ ಕ್ಲಬ್, ಕೋಲಾರ) ಶ್ರೀಜಿತ್ ಕೆ.ಎಲ್. (ವಿಕೆಟ್ ಕೀಪರ್) (ವಲ್ಚರ್ಸ್ ಕ್ರಿಕೆಟ್ ಕ್ಲಬ್).

ಬಲವಾದ ಕೋಚ್ ಹಾಗೂ ಬೆಂಬಲ ಸಿಬ್ಬಂದಿ ವರ್ಗ

ತಂಡದ ಮುಖ್ಯ ತರಬೇತುದಾರರಾಗಿ (Head Coach) ಭಾರತ ಹಾಗೂ ಕರ್ನಾಟಕದ ಮಾಜಿ ವೇಗಿ ವಿನಯ್ ಕುಮಾರ್ ಆರ್. ಕಾರ್ಯನಿರ್ವಹಿಸಲಿದ್ದಾರೆ. ಸಹಾಯಕ ತರಬೇತುದಾರರಾಗಿ (Assistant Coach) ದೀಪಕ್ ಚೌಗುಲೆ ಹಾಗೂ ಮ್ಯಾನೇಜರ್ ಆಗಿ ಎಸ್. ಬಾಬು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಮುಖ್ಯ ಕೋಚ್: ಆರ್. ವಿನಯ್ ಕುಮಾರ್ , ಸಹಾಯಕ ತರಬೇತುದಾರ: ದೀಪಕ್ ಚೌಗುಲೆ (ಕೆನರಾ ಬ್ಯಾಂಕ್) , ಮ್ಯಾನೇಜರ್: ಎಸ್. ಬಾಬು , ಫಿಸಿಯೋಥೆರಪಿಸ್ಟ್: ಜಾಬಾ ಪ್ರಭು, ಸ್ಟ್ರೆಂತ್ & ಕಂಡೀಷನಿಂಗ್ ಕೋಚ್: ಕೆ.ಸಿ. ಅವಿನಾಶ್, ಪರ್ಫಾರ್ಮೆನ್ಸ್ ಅನಾಲಿಸ್ಟ್: ಗಿರಿ ಪ್ರಸಾದ್ , ಮಸಾಜ್ ಥೆರಪಿಸ್ಟ್ (Masseur): ಸೋಮಸುಂದರ್ ಸಿ.ಎಂ. , ಸೈಡ್ ಆರ್ಮ್ ಸ್ಪೆಷಲಿಸ್ಟ್: ಅಶೋಕ್ ವಿ.