ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಶುಭ್‌ಮನ್ ಗಿಲ್ ದ್ವಿಶತಕ ಹಾಗೂ ರೋಹಿತ್ ಶರ್ಮಾ ಶತಕ ಸಿಡಿಸಿ ಐತಿಹಾಸಿಕ ಜಯ ತಂದುಕೊಟ್ಟರು. ಇದೇ ಪಂದ್ಯದಲ್ಲಿ ರೋಹಿತ್ ಶರ್ಮಾ 12,000 ರನ್ ಪೂರೈಸಿದ್ದಲ್ಲದೆ, ಸುನೀಲ್ ಗವಾಸ್ಕರ್ ಅವರ ಹಳೆಯ ದಾಖಲೆಯನ್ನು ಮುರಿದರು.

ಗುವಾಹಟಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯವು ಐತಿಹಾಸಿಕ ರನ್‌ ಚೇಸ್‌ಗೆ ಸಾಕ್ಷಿಯಾಯಿತು. ನಾಯಕ ಶುಭ್‌ಮನ್ ಆಕರ್ಷಕ ದ್ವಿಶತಕ ಸಿಡಿಸಿದರೆ, ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಮತ್ತೊಂದು ಶತಕ ಸಿಡಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ 35ನೇ ಸೆಂಚುರಿ ಬಾರಿಸಿ ಸಂಭ್ರಮಿಸಿದರು. ಇದರ ಜತೆಗೆ ರೋಹಿತ್ ಶರ್ಮಾ ಅಪರೂಪದ ದಾಖಲೆ ಬರೆದಿದ್ದಾರೆ. ಇದಷ್ಟೇ ಅಲ್ಲದೇ ಕ್ರಿಕೆಟ್ ಲೆಜೆಂಡ್ ಸುನೀಲ್ ಗವಾಸ್ಕರ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

39 ವರ್ಷದ ರೋಹಿತ್ ಶರ್ಮಾ ಕಳೆದ ಮೂರು ಏಕದಿನ ಪಂದ್ಯಗಳ ಪೈಕಿ ಎರಡನೇ ಶತಕ ಸಿಡಿಸುವ ಮೂಲಕ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ವೆಸ್ಟ್ ಇಂಡೀಸ್ ನೀಡಿದ್ದ 406 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತಕ್ಕೆ ನಾಯಕ ಶುಭ್‌ಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಮೊದಲ ವಿಕೆಟ್‌ಗೆ 255 ರನ್‌ಗಳ ಜತೆಯಾಟವಾಡುವ ಮೂಲಕ ಭದ್ರಬುನಾದಿ ಹಾಕಿಕೊಟ್ಟರು. ನಾಯಕ ಶುಭ್‌ಮನ್ ಗಿಲ್ 133 ಎಸೆತಗಳನ್ನು ಎದುರಿಸಿ 233 ರನ್ ಬಾರಿಸಿದರು. ಇನ್ನು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 75 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 6 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 101 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ 255 ರನ್‌ಗಳ ಮೊದಲ ವಿಕೆಟ್‌ ಜತೆಯಾಟಕ್ಕೆ ತೆರೆ ಬಿದ್ದಿತು. ಇದು ಭಾರತ ಕ್ರಿಕೆಟ್ ತಂಡದ ಪರವಾಗಿ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ಗೆ ದಾಖಲಾದ ಎರಡನೇ ಗರಿಷ್ಠ ಜತೆಯಾಟ ಎನಿಸಿಕೊಂಡಿತು. 2001ರ ಲ್ಲಿ ಕೀನ್ಯಾ ಎದುರು ಸೌರವ್ ಗಂಗೂಲಿ ಹಾಗೂ ಸಚಿನ್ ತೆಂಡೂಲ್ಕರ್ ಜೋಡಿ 258 ರನ್ ಬಾರಿಸಿದ್ದು ಈಗಲೂ ಮೊದಲ ಸ್ಥಾನದಲ್ಲಿಯೇ ಇದೆ.

ಗವಾಸ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ:

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ನೆಲದಲ್ಲಿ ಶತಕ ಸಿಡಿಸಿದ ಅತಿಹಿರಿಯ ಬ್ಯಾಟರ್ ಎನ್ನುವ ದಾಖಲೆ ಇದೀಗ ರೋಹಿತ್ ಶರ್ಮಾ ಪಾಲಾಗಿದೆ. ಗವಾಸ್ಕರ್ ನ್ಯೂಜಿಲೆಂಡ್ ಎದುರು 1987ರಲ್ಲಿ ನಾಗ್ಪುರದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಆಗ ಗವಾಸ್ಕರ್‌ಗೆ 38 ವರ್ಷ 113 ದಿನಗಳಾಗಿದ್ದವು. ಇದೀಗ 39 ವರ್ಷ 153 ದಿನದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸಿ ಸನ್ನಿ ದಾಖಲೆ ಮುರಿದಿದ್ದಾರೆ.

ಏಕದಿನದಲ್ಲಿ ರೋಹಿತ್ ಶರ್ಮಾ 12,000 ರನ್

ಭಾರತದ ಹಿರಿಯ ಕ್ರಿಕೆಟಿಗ ರೋಹಿತ್‌ ಶರ್ಮಾ ಏಕದಿನ ಮಾದರಿಯಲ್ಲಿ 12000 ರನ್‌ ಪೂರ್ಣಗೊಳಿಸಿದ್ದಾರೆ. ಬುಧವಾರ ವಿಂಡೀಸ್‌ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಅವರು ಈ ಮೈಲುಗಲ್ಲು ತಲುಪಿದರು.

291ನೇ ಏಕದಿನ ಪಂದ್ಯವಾಡಿದ ರೋಹಿತ್‌, 35ನೇ ಶತಕ ಪೂರ್ಣಗೊಳಿಸಿದರು. 72 ಎಸೆತಗಳಲ್ಲಿ ಶತಕ ಸಿಡಿಸಿದ ಅವರು 101 ರನ್‌ಗೆ ಔಟಾದರು. ಈ ಮೂಲಕ ಏಕದಿನದಲ್ಲಿ ರನ್‌ ಗಳಿಕೆಯನ್ನು 12028ಕ್ಕೆ ಹೆಚ್ಚಿಸಿದರು. ಅಲ್ಲದೆ, 12 ಸಾವಿರ ರನ್‌ಗಳ ಮೈಲುಗಲ್ಲು ತಲುಪಿದ ಭಾರತ 3ನೇ, ವಿಶ್ವದ 7ನೇ ಕ್ರಿಕೆಟಿಗ ಎನಿಸಿಕೊಂಡರು. ಸಚಿನ್‌ ತೆಂಡುಲ್ಕರ್‌ 18426, ವಿರಾಟ್‌ ಕೊಹ್ಲಿ 15109, ಕುಮಾರ ಸಂಗಕ್ಕರ 14234, ರಿಕಿ ಪಾಂಟಿಂಗ್‌ 13704, ಸನತ್‌ ಜಯಸೂರ್ಯ 13430, ಜಯವರ್ಧನೆ 12650 ರನ್‌ ಕಲೆಹಾಕಿದ್ದಾರೆ.

ಇನ್ನು, ಅತಿ ವೇಗವಾಗಿ 12000 ರನ್‌ ಕಲೆಹಾಕಿದ ಆಟಗಾರರಲ್ಲಿ ರೋಹಿತ್‌ 2ನೇ ಸ್ಥಾನಕ್ಕೇರಿದ್ದಾರೆ. ಅವರು ಇದಕ್ಕಾಗಿ 282 ಇನ್ನಿಂಗ್ಸ್‌ ಆಡಿದ್ದಾರೆ. ವಿರಾಟ್‌ ಕೊಹ್ಲಿ 242 ಇನ್ನಿಂಗ್ಸ್‌ಗಳಲ್ಲೇ ಈ ಸಾಧನೆ ಮಾಡಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.