ಬೇಡ ಎಂದರೂ ಕೇಳಲಿಲ್ಲ, ಇಲ್ಲೇ ಸಹಿ ಮಾಡಬೇಕು ಎಂದು ಅಭಿಮಾನಿ ತನ್ನ ಬೋಳು ತಲೆ ತೋರಿಸಿಕೊಟ್ಟಿದ್ದಾರೆ. ಅಭಿಮಾನಿಯ ಮಾತಿಗೆ ಮಣಿದ ಟೀಂ ಇಂಡಿಯಾ ಕ್ರಿಕೆಟಿಗ ಇಶಾನ್ ಕಿಶನ್, ಆತನ ತಲೆ ಮೇಲೆ ಆಟೋಗ್ರಾಫ್ ಹಾಕಿದ್ದಾರೆ.
ಹರಾರೆ (ಜು.26) ಟೀಂ ಇಂಡಿಯಾ ಕ್ರಿಕೆಟಿಗರು ಎಲ್ಲೇ ಹೋದರು ಅಭಿಮಾನಿಗಳಿರುತ್ತಾರೆ. ಸದ್ಯ ಜಿಂಬಾಬ್ವೆಯಲ್ಲಿ ಟಿ20 ಸರಣಿ ಆಡುತ್ತಿರುವ ಟೀಂ ಇಂಡಿಯಾಗೆ ಕ್ರೀಡಾಂಗಣದಲ್ಲಿ ಭರ್ಜರಿ ಅಭಿಮಾನಿಗಳ ಬೆಂಬಲ ವ್ಯಕ್ತವಾಗುತ್ತಿದೆ. ಇದರ ನಡುವೆ ವಿಶೇಷ ಘಟನೆಯೊಂದು ನಡೆದಿದೆ. ಅಭಿಮಾನಿಯೊಬ್ಬರು ಇಶಾನ್ ಕಿಶನ್ ಬಳಿ ಆಟೋಗ್ರಾಪ್ ಪಡೆದಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ಆಟೋಗ್ರಾಫ್ ಪಡೆದುದ್ದು, ಜರ್ಸಿ ಮೇಲೆ, ಪುಸ್ತಕ, ಬ್ಯಾಟ್, ಬಾಲ್ ಯಾವುದೂ ಅಲ್ಲ, ತನ್ನ ಬೋಳು ತಲೆ ಮೇಲೆ.
ಆಟೋಗ್ರಾಫ್ ನೀಡಲು ಹೋದ ಕಿಶನ್‌ಗೆ ಅಚ್ಚರಿ
ಹರಾರೆಯಲ್ಲಿ ನಡೆಯುತ್ತಿರುವ ಟಿ20 ಸರಣಿ ವೇಳೆ ಈ ಘಟನೆ ನಡೆದಿದೆ. ಪೆವಿಲಿಯನ್‌ನತ್ತ ಬರುತ್ತಿದ್ದ ಇಶಾನ್ ಕಿಶನ್ ಕೂಗಿ ಕರೆದ ಅಭಿಮಾನಿ ಆಟೋಗ್ರಾಫ್ ನೀಡುವಂತೆ ಮನವಿ ಮಾಡಿದ್ದಾರೆ. ಸರಿ ಎಂದು ಹತ್ತಿರ ಹೋದಾಗ ಇಶಾನ್ ಕಿಶನ್‌ಗೆ ಅಚ್ಚರಿಯಾಗಿದೆ. ಆಟೋಗ್ರಾಫ್ ಹಾಕಲು ತನ್ನ ಬೋಳು ತಲೆ ತೋರಿಸಿದ ಅಭಿಮಾನಿ, ಇಲ್ಲಿ ಸಹಿ ಮಾಡಿ ಎಂದಿದ್ದಾನೆ. ತಕ್ಷಣವೇ ಇಶಾನ್ ಕಿಶನ್ ಬೇಡ ಎಂದು ನಗುತ್ತಲೇ ಹೇಳಿದ್ದಾರೆ. ಆದರೆ ಅಭಿಮಾನಿ ಮಾತ್ರ ಕೇಳಲೇ ಇಲ್ಲ. ಇಲ್ಲೆ ಆಟೋಗ್ರಾಫ್ ಸಹಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇಶಾನ್ ಕಿಶನ್ ಕೈಹಿಡಿದು ಇಲ್ಲಿ ಸಹಿ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಅಭಿಮಾನಿಯ ಒತ್ತಾಯಕ್ಕೆ ಇಶಾನ್ ಕಿಶನ್ ಬೋಳು ತಲೆ ಮೇಲೆ ಸಹಿ ಮಾಡಿದ್ದಾರೆ. ಅಭಿಮಾನಿಯ ನಡೆ ಇಶಾನ್ ಕಿಶನ್ ಸೇರಿದಂತೆ ಟೀಂ ಇಂಡಿಯಾ ಕ್ರಿಕೆಟಿಗರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡಿತ್ತು. ಇತ್ತ ಬೋಳು ತಲೆ ಮೇಲೆ ಇಶಾನ್ ಕಿಶನ್ ಆಟೋಗ್ರಾಫ್ ಪಡೆದ ಅಭಿಮಾನಿ ಸಂಭ್ರಮಾಚರಿಸಿದ್ದಾರೆ.
2ನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. 44 ಎಸೆತದಲ್ಲಿ 81 ರನ್ ಸಿಡಿಸಿದ್ದರು. ಅದ್ಭುತ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ರೂವಾರಿಯಾದ ಇಶಾನ್ ಕಿಶನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದಿದ್ದರು. ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ 29 ರನ್ ಸಿಡಿಸಿ ಔಟಾಗಿದ್ದರು.
ಜಿಂಬಾಬ್ವೆ ವಿರುದ್ದದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಆರಂಭಿಕ 2 ಪಂದ್ಯ ಗೆದ್ದು ಸರಣಿ ಕೈವಶ ಮಾಡಿದೆ. ಮೂರನೇ ಪಂದ್ಯದಲ್ಲಿ ಜಿಂಬಾಬ್ವೆಗೆ 193 ರನ್ ಟಾರ್ಗೆಟ್ ನೀಡಿದೆ.


