ಕಾರ್ಗಿಲ್ ಯುದ್ಧದಲ್ಲಿ ಟೋಲೋಲಿಂಗ್ ಶಿಖರವನ್ನು ಗೆದ್ದ ನಂತರ, ಭಾರತೀಯ ಸೈನಿಕರು ಆಹಾರ ಮತ್ತು ನೀರಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದರು. ಶತ್ರುಗಳ ಗುಂಡಿನ ದಾಳಿಯ ನಡುವೆಯೂ, ಪಾಕಿಸ್ತಾನಿ ಬಂಕರ್‌ನಲ್ಲಿದ್ದ ಕರಾಚಿ ಹಲ್ವಾ ಮತ್ತು ಖೀರ್‌ನಂತಹ ಆಹಾರವನ್ನು ಸೇವಿಸಿದ್ದಾರೆ. ಆದಿರು ಕಾದಿತ್ತು ವಿಷದ ಆಘಾತ!

ಕಾರ್ಗಿಲ್ ಯುದ್ಧದ ಇತಿಹಾಸದಲ್ಲಿ ಟೋಲೋಲಿಂಗ್ ಶಿಖರವನ್ನು ವಶಪಡಿಸಿಕೊಂಡದ್ದು ಭಾರತೀಯ ಸೇನೆಯ ಮೊದಲ ಮತ್ತು ಮಹತ್ವದ ವಿಜಯವಾಗಿತ್ತು. ಮದ್ದುಗುಂಡುಗಳು ಖಾಲಿಯಾಗಬಾರದು ಎಂಬ ಒಂದೇ ಕಾರಣಕ್ಕೆ ಭಾರತೀಯ ಧೀರ ಯೋಧರು ತಮ್ಮ ಬ್ಯಾಗ್‌ಗಳಲ್ಲಿದ್ದ ಆಹಾರ ಧಾನ್ಯಗಳನ್ನು ಬಗೆದು ಹಾಕಿ, ಅವುಗಳಲ್ಲಿ ಕೇವಲ ಗುಂಡುಗಳು ಹಾಗೂ ಹ್ಯಾಂಡ್ ಗ್ರೆನೇಡ್‌ಗಳನ್ನು ತುಂಬಿಕೊಂಡು ಕಡಿದಾದ ಶಿಖರ ಹತ್ತಿದ್ದರು. ತೀವ್ರ ಹೋರಾಟದ ನಂತರ ಶತ್ರುಗಳನ್ನು ಮಟ್ಟಹಾಕಿ ಟೋಲೋಲಿಂಗ್ ಮೇಲ್ಭಾಗದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಆದರೆ, ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ಭಾರತೀಯ ಯೋಧರಿಗೆ ಪ್ರಾಣಾಪಾಯದ ಮತ್ತೊಂದು ಕಠಿಣ ಸವಾಲು ಎದುರಾಯಿತು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ವಿಷವಾಗಿದ್ದ ಹಿಮ! ಹಸಿವು, ಬಾಯಾರಿಕೆಯ ಕಠಿಣ ಪರೀಕ್ಷೆ!

ಟೋಲೋಲಿಂಗ್ ಶಿಖರ ಹಸ್ತಗತವಾಗುತ್ತಿದ್ದಂತೆ ಹತಾಶಗೊಂಡ ಪಾಕಿಸ್ತಾನಿ ಸೇನೆಯು ಇಡೀ ಬೆಟ್ಟದ ಮೇಲೆ ಸತತವಾಗಿ ಬಾಂಬ್ ಹಾಗೂ ಶೆಲ್ ದಾಳಿ ನಡೆಸಿತು. 48 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಈ ಸತತ ಗುಂಡಿನ ಮಳೆಯಿಂದಾಗಿ, ಹಿಂಭಾಗದಿಂದ ಆಹಾರ ಮತ್ತು ಔಷಧಿಗಳನ್ನು ತರುತ್ತಿದ್ದ ಸೈನಿಕರ ತಂಡ ಮಧ್ಯದಲ್ಲೇ ಸಿಲುಕಿಕೊಂಡಿತು. ಕಳೆದ 24 ಗಂಟೆಗಳಿಂದ ನೀರಿಗಾಗಿ ಪರದಾಡುತ್ತಿದ್ದ ಯೋಧರಿಗೆ ಹಸಿವು ಹಾಗೂ ಬಾಯಾರಿಕೆ ಪ್ರಾಣ ಹಿಂಡುವಂತಾಯಿತು.

ಆ ಕ್ಷಣ ಮೆಲುಕು ಹಾಕಿದ ಸೆಕ್ಷೇನಾ!

ಈ ಯುದ್ಧದಲ್ಲಿ ಭಾಗವಹಿಸಿದ್ದ ಕ್ಯಾಪ್ಟನ್ ಅಖಿಲೇಶ್ ಸಕ್ಸೇನಾ ಆ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ನೂರಾರು ಗ್ರೆನೇಡ್‌ಗಳು ಮತ್ತು ಬಾಂಬ್‌ಗಳು ಸ್ಫೋಟಗೊಂಡಿದ್ದರಿಂದ ಟೋಲೋಲಿಂಗ್ ಶಿಖರದ ಮೇಲಿದ್ದ ಹಿಮವು ಸಂಪೂರ್ಣವಾಗಿ ವಿಷಕಾರಿಯಾಗಿತ್ತು. ಆ ಹಿಮ ಕರಗಿಸಿದ ಕುಡಿಯುವ ಹಾಗೂ ಇರಲಿಲ್ಲ. ಶತ್ರುಗಳ ಗುಂಡಿಗೆ ಬಲಿಯಾಗದ ನಾವು, ಹಸಿವು-ಬಾಯಾರಿಕೆಯಿಂದ ಸತ್ತರೆ ಅದು ದೇಶಕ್ಕೆ ಮಾಡುವ ದೊಡ್ಡ ಅನ್ಯಾಯ ಎಂದು ಭಾವಿಸಿದೆವು. ಕಷ್ಟಪಟ್ಟು ಒಂದಷ್ಟು ಅಡಿಗಳಷ್ಟು ಹಿಮವನ್ನು ಅಗೆದು, ಒಳಗಿದ್ದ ಶುದ್ಧ ಹಿಮವನ್ನು ತುಟಿಗೆ ಹಚ್ಚಿಕೊಂಡು ಪ್ರಾಣ ಉಳಿಸಿಕೊಂಡೆವು ಎಂದು ವಿವರಿಸಿದ್ದಾರೆ.

ಪಾಕಿಸ್ತಾನಿ ಬಂಕರ್‌ನಲ್ಲಿ ಸೈಲೆಂಟ್ ಪಾಯ್ಸನ್ ಖಜಾನೆ!

ಇದೇ ವೇಳೆ ಶತ್ರುಗಳು ಕಳೆದ 3 ತಿಂಗಳಿನಿಂದ ಇಲ್ಲೇ ಬೀಡುಬಿಟ್ಟಿರುವುದರಿಂದ ಅವರ ಬಳಿ ಆಹಾರ ಖಂಡಿತ ಇರಬೇಕೆಂಬ ಆಲೋಚನೆ ಬಂತು. ಎರಡು ಶಿಖರಗಳ ನಡುವೆ ಇದ್ದ ಪಾಕಿಸ್ತಾನಿ ಸೇನೆಯ ರಚನೆಯೊಂದನ್ನು ತಲುಪಲು ಭಾರತೀಯ ಸೈನಿಕರು ನಿರ್ಧರಿಸಿದರು. ಶತ್ರುಗಳು ಎದುರಿನ ಬೆಟ್ಟದಿಂದ ನಿರಂತರ ಗುಂಡು ಹಾರಿಸುತ್ತಿದ್ದರೂ, ಪ್ರಾಣದ ಹದನವನ್ನು ಬದಿಗೊತ್ತಿ ಕ್ಯಾಪ್ಟನ್ ಅಖಿಲೇಶ್ ಸಕ್ಸೇನಾ ಮತ್ತೊಬ್ಬ ಅಧಿಕಾರಿಯೊಂದಿಗೆ ಬೆನ್ನಿಗೆ ಖಾಲಿ ಚೀಲಗಳನ್ನು ಕಟ್ಟಿಕೊಂಡು, ಹೊಗೆ ಬಾಂಬ್ (Smoke Bombs) ಎಸೆಯುತ್ತಾ ಶತ್ರುಗಳ ಅಡಗುತಾಣಕ್ಕೆ ಧಾವಿಸಿದರು.

ಅಡುಗೆ ಮನೆಗೆ ನುಗ್ಗಿದ ಯೋಧರು!

ಶತ್ರುಗಳ ಆ ಬಂಕರ್/ಅಡುಗೆಮನೆಗೆ ನುಗ್ಗಿದ ಭಾರತೀಯ ಯೋಧರಿಗೆ ಅಚ್ಚರಿ ಕಾದಿತ್ತು. ಭಾರತೀಯ ಸೇನೆ ಎಂದಿಗೂ ಈ ಹಂತಕ್ಕೆ ತಲುಪಲು ಸಾಧ್ಯವಿಲ್ಲ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಪಾಕಿಸ್ತಾನಿ ಪಡೆ, ಯುದ್ಧದ ನಂತರ ಆಚರಿಸಲು ಭರ್ಜರಿ ಔತಣಕೂಟವನ್ನು ಸಿದ್ಧಪಡಿಸಿಟ್ಟಿತ್ತು. ಅಲ್ಲಿ ಕೇಸರಿ ಸುವಾಸನೆ ಬೀರುತ್ತಿದ್ದ ಒಣಫಲಗಳ ಖೀರ್, ಕರಾಚಿ ಹಲ್ವಾ, ಬಿರಿಯಾನಿ ಹಾಗೂ ಗಾಯಗೊಂಡವರಿಗೆ ಬೇಕಾದ ಅಗತ್ಯ ಔಷಧಿಗಳ ಸಾಲೇ ಇತ್ತು!

ಶತ್ರುಗಳ ಕಿಚನ್‌ನಲ್ಲೇ ಭಾರತೀಯ ಪಡೆಗೆ ಜಯದ ಔತಣ!

ಆಹಾರ ಕಣ್ಣೆದುರಿಗಿದ್ದರೂ ಅದನ್ನು ಮೇಲಿನ ಶಿಖರದಲ್ಲಿದ್ದ ಸೈನಿಕರಿಗೆ ತಲುಪಿಸುವುದು ಸುಲಭವಾಗಿರಲಿಲ್ಲ. ಬೆನ್ನಿನ ಚೀಲಗಳಲ್ಲಿ ಸಿಕ್ಕಷ್ಟು ಕರಾಚಿ ಹಲ್ವಾ, ಖೀರ್ ಮತ್ತು ಔಷಧಿಗಳನ್ನು ಪ್ಯಾಕ್ ಮಾಡಿಕೊಂಡ ಯೋಧರು, ಮತ್ತೆ ಹೊಗೆ ಬಾಂಬ್ ಸಿಡಿಸಿ ಶತ್ರುಗಳ ಗುಂಡಿನ ಮಳೆಯಿಂದ ತಪ್ಪಿಸಿಕೊಂಡು ತಮ್ಮ ತುಕಡಿಯನ್ನು ತಲುಪಿದರು. ಯುದ್ಧದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಹಪಾಠಿ ಸೈನಿಕರಿಗೆ ಮೊದಲು ಆಹಾರ ಹಾಗೂ ಔಷಧಿಗಳನ್ನು ನೀಡಲಾಯಿತು. ತದನಂತರ, ಪಾಕಿಸ್ತಾನಿ ಪಡೆಯೇ ಸಿದ್ಧಪಡಿಸಿದ್ದ ಕರಾಚಿ ಹಲ್ವಾ ಹಾಗೂ ಖೀರ್ ಸವಿಯುವ ಮೂಲಕ ಭಾರತೀಯ ಯೋಧರು ಟೋಲೋಲಿಂಗ್ ವಿಜಯೋತ್ಸವವನ್ನು ಆಚರಿಸಿದರು! ಹೆಚ್ಚುವರಿ ಸೇನೆ ಹಾಗೂ ಸಾಮಗ್ರಿಗಳು ಆಗಮಿಸುವವರೆಗೆ ಪಾಕಿಸ್ತಾನಿ ಅಡುಗೆಮನೆಯ ಆಹಾರವೇ ಭಾರತೀಯ ಸೈನಿಕರ ಜೀವ ಉಳಿಸಿತು.