ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಿಂದ ಗಾಯಾಳು ಇಶಾನ್ ಕಿಶನ್ ಅಧಿಕೃತವಾಗಿ ಹೊರಬಿದ್ದಿದ್ದು, ಕುಮಾರ್ ಕುಶಾಗ್ರ ಬ್ಯಾಕ್‌ಅಪ್ ಆಗಿ ತಂಡ ಸೇರಿದ್ದಾರೆ. ಇಶಾನ್ ಅಲಭ್ಯತೆಯಿಂದಾಗಿ 15 ವರ್ಷದ ವೈಭವ್ ಸೂರ್ಯವಂಶಿಗೆ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿದೆ.

ಕ್ರೈಸ್ಟ್‌ಚರ್ಚ್‌: ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ನ್ಯೂಜಿಲೆಂಡ್ ಎದುರಿನ ಎರಡನೇ ಟಿ20 ಪಂದ್ಯದಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಕ್ಷೇತ್ರರಕ್ಷಣೆ ಮಾಡುವ ಸಂದರ್ಭದಲ್ಲಿ ಇಶಾನ್ ಕಿಶನ್ ತೊಡೆ ಸಂದು ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಇದೀಗ ಎರಡನೇ ಪಂದ್ಯದ ಮಟ್ಟಿಗೆ ಬಿಸಿಸಿಐ ಬದಲಿ ಆಟಗಾರನನ್ನು ಘೋಷಿಸಿದ್ದು, ಇಶಾನ್ ಕಿಶನ್ ಸ್ಥಾನಕ್ಕೆ ಮತ್ತೋರ್ವ ವಿಕೆಟ್ ಕೀಪರ್ ಬ್ಯಾಟರ್ ಕುಮಾರ್ ಕುಶಾಗ್ರ ಅವರನ್ನು ಬ್ಯಾಕ್‌ಅಪ್ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ.

ಬಿಸಿಸಿಐ ಈ ವಿಚಾರವನ್ನು ಶುಕ್ರವಾರ ಸಂಜೆ ಅಧಿಕೃತವಾಗಿ ಖಚಿತಪಡಿಸಿದೆ. ಕುಮಾರ್ ಕುಶಾಗ್ರ ಸದ್ಯ ಭಾರತ 'ಎ' ತಂಡದ ಜತೆ ಕ್ರೈಸ್ಟ್‌ಚರ್ಚ್‌ನಲ್ಲಿದ್ದರು. ಇದೀಗ ಎರಡನೇ ಟಿ20 ಪಂದ್ಯಕ್ಕೂ ಮುನ್ನ ಶುಕ್ರವಾರ ಕುಶಾಗ್ರ ಭಾರತ ಸೀನಿಯರ್ಸ್ ತಂಡವನ್ನು ಕೂಡಿಕೊಂಡಿದ್ದಾರೆ. ಇನ್ನು ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ಇಶಾನ್ ಕಿಶನ್ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದೆ.

ಇಶಾನ್ ಕಿಶನ್ ಔಟ್, ಕುಶಾಗ್ರ ಇನ್

ಈ ಕುರಿತಂತೆ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಬಿಸಿಸಿಐ, 'ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ನ್ಯೂಜಿಲೆಂಡ್ ಎದುರಿನ ಮೊದಲ ಟಿ20 ಪಂದ್ಯದ ವೇಳೆಯಲ್ಲಿ ತೊಡೆಸಂದು ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಶನಿವಾರ ನಡೆಯಲಿರುವ ಎರಡನೇ ಟಿ20 ಪಂದ್ಯದಿಂದ ಹೊರಬಿದ್ದಿದ್ದಾರೆ' ಎಂದು ಬಿಸಿಸಿಐ ತಿಳಿಸಿದೆ.

ಮುಂದುವರೆದು, ಬಿಸಿಸಿಐ ಹಿರಿಯರ ಆಯ್ಕೆ ಸಮಿತಿಯು ಇದೀಗ ಕುಮಾರ್ ಕುಶಾಗ್ರ ಅವರನ್ನು ಬ್ಯಾಕ್‌ಅಪ್ ಆಟಗಾರನಾಗಿ ಎರಡನೇ ಟಿ20 ಪಂದ್ಯಕ್ಕೆ ಭಾರತ ತಂಡ ಕೂಡಿಕೊಂಡಿದ್ದಾರೆ. ಕುಶಾಗ್ರ ಸದ್ಯ ಕ್ರೈಸ್ಟ್‌ಚರ್ಚ್‌ನಲ್ಲಿ ಭಾರತ 'ಎ' ತಂಡದ ಜತೆಗಿದ್ದು, ಎರಡನೇ ಟಿ20 ಪಂದ್ಯಕ್ಕೆ ಭಾರತ ತಂಡ ಕೂಡಿಕೊಳ್ಳಲಿದ್ದಾರೆ. ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಕಿಶನ್ ಅವರ ಆರೋಗ್ಯದ ಮೇಲೆ ನಿಗಾಯಿಟ್ಟಿದೆ' ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.

ವೈಭವ್ ಸೂರ್ಯವಂಶಿಗೆ ಚಾನ್ಸ್:

ಇದೀಗ ಇಶಾನ್ ಕಿಶನ್ ಎರಡನೇ ಟಿ20 ಪಂದ್ಯಕ್ಕೆ ಅಲಭ್ಯರಾದ ಹಿನ್ನೆಲೆಯಲ್ಲಿ ಇದೀಗ 15 ವರ್ಷದ ವೈಭವ್ ಸೂರ್ಯವಂಶಿ ಇದೀಗ ಭಾರತ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಏಷ್ಯನ್‌ ಗೇಮ್ಸ್ ಬಳಿಕ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯಲ್ಲಿ ಬೆಂಚ್ ಕಾಯಿಸಿದ್ದ ವೈಭವ್ ಸೂರ್ಯವಂಶಿ, ಇದೀಗ ಕಿವೀಸ್ ಎದುರಿನ ಎರಡನೇ ಟಿ20 ಪಂದ್ಯದಲ್ಲಿ ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇನ್ನು ಟಾಸ್ ವೇಳೆ ಟೀಂ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್, ವೈಭವ್ ಸೂರ್ಯವಂಶಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿಯಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ.