ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಿಂದ ಗಾಯಾಳು ಇಶಾನ್ ಕಿಶನ್ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ 15 ವರ್ಷದ ವೈಭವ್ ಸೂರ್ಯವಂಶಿ ತಂಡ ಸೇರುವ ಸಾಧ್ಯತೆಯಿದ್ದು, ಭಾರತದ ಆರಂಭಿಕ ಜೋಡಿ ಯಾರು ಎಂಬ ಕುತೂಹಲ ಮೂಡಿದೆ.

ಕ್ರೈಸ್ಟ್‌ಚರ್ಚ್‌: ಭಾರತ-ನ್ಯೂಜಿಲೆಂಡ್ ನಡುವಿನ ಎರಡನೇ ಟಿ20 ಪಂದ್ಯವು ಅಕ್ಟೋಬರ್ 24ರಂದು ಆರಂಭವಾಗಲಿದೆ. ಎರಡನೇ ಟಿ20 ಪಂದ್ಯಕ್ಕೂ ಮುನ್ನ ಗಾಯದ ಸಮಸ್ಯೆಯಿಂದ ಇಶಾನ್ ಕಿಶನ್ ತಂಡದಿಂದ ಹೊರಬಿದ್ದಿದ್ದಾರೆ. ಕಿವೀಸ್ ಎದುರಿನ ಮೊದಲ ಟಿ20 ಪಂದ್ಯವನ್ನು ಆಡುವ ಸಂದರ್ಭದಲ್ಲಿಯೇ ಇಶಾನ್ ಕಿಶನ್, ತೊಡೆಸಂದಿನ ಸ್ನಾಯ ಸೆಳೆತಕ್ಕೆ ಒಳಗಾಗಿದ್ದರು. ಇದೇ ಕಾರಣಕ್ಕೆ ಬ್ಯಾಟಿಂಗ್‌ ಮಾಡುವ ವೇಳೆ ಇಶಾನ್ ಕಿಶನ್ ಮೂರನೇ ಕ್ರಮಾಂಕದ ಬದಲು ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದಿದ್ದರು. ಇದೀಗ ಇಶಾನ್ ಕಿಶನ್ ಎರಡನೇ ಪಂದ್ಯದಿಂದ ಹೊರಬಿದ್ದಿರುವ ಬೆನ್ನಲ್ಲೇ ಅವರ ಸ್ಥಾನಕ್ಕೆ ವೈಭವ್ ಸೂರ್ಯವಂಶಿ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕರು ಯಾರು ಎನ್ನುವ ಚರ್ಚೆ ಜೋರಾಗಿದೆ.

ಸದ್ಯ ಭಾರತ ಟಿ20 ತಂಡದಲ್ಲಿ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಯಶಸ್ವಿ ಆರಂಭಿಕರಾಗಿ ಗುರುತಿಸಿಕೊಂಡಿದ್ದಾರೆ. 2026ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಓಪನ್ನರ್ಸ್, ಇದೀಗ ಕಿವೀಸ್ ಎದುರಿನ ಮೊದಲ ಏಕದಿನ ಪಂದ್ಯದಲ್ಲೂ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. 226 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಭಾರತಕ್ಕೆ ಅಭಿಷೇಕ್ ಶರ್ಮಾ ಹಾಗೂ ಸಂಜು ಸ್ಯಾಮ್ಸನ್ ಮೊದಲ ವಿಕೆಟ್‌ಗೆ ಕೇವಲ 5.5 ಓವರ್‌ಗಳಲ್ಲಿ 93 ರನ್ ಸಿಡಿಸಿ ಗೆಲುವಿನ ಹಾದಿಯನ್ನು ಸುಲಭ ಮಾಡಿಕೊಟ್ಟಿದ್ದರು. ಅಭಿಷೇಕ್ ಶರ್ಮಾ ಕೇವಲ 12 ಎಸೆತಗಳಲ್ಲಿ 29 ರನ್ ಸಿಡಿಸಿದರೆ, ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ 33 ಎಸೆತಗಳಲ್ಲಿ 67 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು.

ವೈಭವ್ ಸೂರ್ಯವಂಶಿ ಎಂಟ್ರಿಯಿಂದ ಕಾಂಬಿನೇಷನ್ ಬದಲಾಗುತ್ತಾ?

ಅಂದಹಾಗೆ ವೈಭವ್ ಸೂರ್ಯವಂಶಿ, ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯನ್ ಗೇಮ್ಸ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯ ಐದು ಪಂದ್ಯದಲ್ಲೂ 15 ವರ್ಷದ ಈ ಯುವ ಆಟಗಾರ ಬೆಂಚ್ ಕಾಯಿಸಿದ್ದರು. ಇದೀಗ ವೈಭವ್ ಸೂರ್ಯವಂಶಿ ಆಡುವ ಹನ್ನೊಂದರ ಬಳಗ ಕೂಡಿಕೊಂಡರೇ ಓಪನ್ನರ್ಸ್ ಯಾರು ಎನ್ನುವ ಚರ್ಚೆ ಜೋರಾಗಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ, ಆರಂಭಿಕರಾಗಿ ಕಣಕ್ಕಿಳಿದಿದ್ದರು. ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದು ಬ್ಯಾಟ್ ಬೀಸಿದ್ದರು. ವೈಭವ್ ಸೂರ್ಯವಂಶಿ ಆರಂಭಿಕನಾಗಿಯೇ ಯಶಸ್ಸು ಗಳಿಸಿರುವುದರಿಂದ ಒಂದು ವೇಳೆ ನಾಳಿನ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ, ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಆರಂಭಿಕರಾಗಬಹುದು.

ಎರಡನೇ ಟಿ20 ಪಂದ್ಯಕ್ಕೆ ಸಂಭಾವ್ಯ ಬಲಿಷ್ಠ ಭಾರತ ತಂಡ ಹೀಗಿದೆ:

ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್(ನಾಯಕ), ತಿಲಕ್ ವರ್ಮಾ, ನಮನ್ ಧೀರ್, ಶಿವಂ ದುಬೆ, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಶದೀಪ್ ಸಿಂಗ್, ಮಯಾಂಕ್ ಯಾದವ್.