ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 2.2 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದೆ. ಇದರ ಸಂಪತ್ತು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ಒಟ್ಟು ಸಂಪತ್ತಿಗಿಂತಲೂ ಹಲವು ಪಟ್ಟು ಹೆಚ್ಚಾಗಿದೆ. ಐಪಿಎಲ್ ಮತ್ತು ವಾಣಿಜ್ಯ ಒಪ್ಪಂದಗಳಿಂದ ಬಿಸಿಸಿಐ ಈ ಬೃಹತ್ ಆದಾಯವನ್ನು ಗಳಿಸುತ್ತಿದೆ.

ಬೆಂಗಳೂರು: ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿಯೆಂದರೇ ಅದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಎನ್ನುವ ವಿಚಾರ ಸದ್ಯ ಗುಟ್ಟಾಗಿಯೇನೂ ಉಳಿದಿಲ್ಲ. ಬಿಸಿಸಿಐನ ಒಟ್ಟು ಸಂಪತ್ತು ಸುಮಾರು 2.2 ಬಿಲಿಯನ್ ಡಾಲರ್. ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 20,840 ಕೋಟಿ ರುಪಾಯಿಗಳು. ಬಿಸಿಸಿಐ ಎಷ್ಟು ಶ್ರೀಮಂತ ಕ್ರಿಕೆಟ್ ಮಂಡಳಿಯೆಂದರೇ, ಬಿಸಿಸಿಐ ನಂತರ ಇರುವ ಮೂರು ಕ್ರಿಕೆಟ್ ಮಂಡಳಿಗಳ ಒಟ್ಟು ಸಂಪತ್ತಿನ 11 ಪಟ್ಟು ಹೆಚ್ಚಿಗೆ ಸಂಪತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಬಳಿಯಿದೆ. ಇದೇ ಕಾರಣಕ್ಕೆ ಬಿಸಿಸಿಯ ಮಾತಿಗೆ ಐಸಿಸಿ ಕೂಡಾ ಕೆಲವೊಮ್ಮೆ ಸಮ್ಮತಿ ಸೂಚಿಸುತ್ತಾ ಇರುತ್ತದೆ.

ಬಿಸಿಸಿಐ ಮುಂದೆ ಆಸೀಸ್, ಪಾಕ್, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಡಮ್ಮಿ

ಬಿಸಿನೆಸ್ ಸ್ಟ್ಯಾಂಡರ್ಡ್‌ ವರದಿಯ ಪ್ರಕಾರ, ಕ್ರಿಕೆಟ್ ಆಸ್ಟ್ರೇಲಿಯಾ 79 ಯುಎಸ್‌ ಮಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದೆ. ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು ಎರಡನೇ ಸ್ಥಾನದಲ್ಲಿದೆ. ಇನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಬೋರ್ಡ್ ಬಳಿ 59 ಮಿಲಿಯನ್ ಡಾಲರ್ ಸಂಪತ್ತು ಇದೆ. ನೆರೆಯ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಬಳಿ ಕೇವಲ 55 ಮಿಲಿಯನ್ ಡಾಲರ್ ಇದೆ. ಈ ಮೂರೂ ಕ್ರಿಕೆಟ್ ಮಂಡಳಿಯ ಒಟ್ಟು ಸಂಪತ್ತು ಲೆಕ್ಕಾಹಾಕಿದರೆ 193 ಮಿಲಿಯನ್ ಡಾಲರ್ ಆಗಲಿದೆ. ಈ ಮೂರು ಕ್ರಿಕೆಟ್ ಮಂಡಳಿಗಳ ಒಟ್ಟು ಸಂಪತ್ತಿಗಿಂತ 3 ಬಿಲಿಯನ್ ಡಾಲರ್ ಹೆಚ್ಚಿಗೆ ಸಂಪತ್ತು ಬಿಸಿಸಿಐ ಬಳಿಯಿದೆ.

ಇದು ಬಿಸಿಸಿಐ ಎಷ್ಟೊಂದು ಶ್ರೀಮಂತ ಕ್ರಿಕೆಟ್ ಮಂಡಳಿ ಎನ್ನುವುದನ್ನು ತೋರಿಸುತ್ತದೆ. ಇತರ ಕ್ರಿಕೆಟ್ ಮಂಡಳಿಗಳು ಅಂತರರಾಷ್ಟ್ರೀಯ ಪಂದ್ಯಗಳು, ಪ್ರಸಾರ ಒಪ್ಪಂದಗಳು, ಪ್ರಾಯೋಜಕತ್ವದ ಒಪ್ಪಂದಗಳು ಮತ್ತು ದೇಶೀಯ ಸ್ಪರ್ಧೆಗಳ ಸಂಯೋಜನೆಯನ್ನು ಅವಲಂಬಿಸಿವೆ; ಆದರೆ ಬಿಸಿಸಿಐ (BCCI) ಕಾರ್ಯನಿರ್ವಹಿಸುವ ಮಾರುಕಟ್ಟೆಯಲ್ಲಿ, ಅಲ್ಲಿನ ವೀಕ್ಷಕರ ಬೃಹತ್ ಸಂಖ್ಯೆಯು ಅದರ ವಾಣಿಜ್ಯ ಆಸ್ತಿಗಳಿಗೆ ಗಮನಾರ್ಹ ಅನುಕೂಲವನ್ನು ಒದಗಿಸುತ್ತದೆ.

ಜಗತ್ತಿನ ಟಾಪ್ 10 ಶ್ರೀಮಂತ ಕ್ರಿಕೆಟ್ ಮಂಡಳಿಗಳು ಹಾಗೂ ಮತ್ತರ ನಿವ್ವಳ ಸಂಪತ್ತು ಎಷ್ಟು?

ಬಿಸಿನೆಸ್ ಸ್ಟ್ಯಾಂಡರ್ಡ್‌ ವರದಿಯ ಪ್ರಕಾರ, ಸೆಪ್ಟೆಂಬರ್ 05, 2026ರ ವೇಳೆಗೆ ಜಗತ್ತಿನ ಟಾಪ್ 10 ಶ್ರೀಮಂತ ಕ್ರಿಕೆಟ್ ಮಂಡಳಿಗಳು ಯಾವುವು ಎನ್ನುವುದನ್ನು ನೋಡೋಣ ಬನ್ನಿ.

1. ಬಿಸಿಸಿಐ(ಭಾರತ): ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಎಂದು ಕರೆಸಿಕೊಳ್ಳುವ ಬಿಸಿಸಿಐ ಒಟ್ಟಾರೆ 2.2 ಬಿಲಿಯನ್ ಡಾಲರ್ ಸಂಪತ್ತು ಹೊಂದಿದೆ. ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 20,840 ಕೋಟಿ ರುಪಾಯಿ. ಐಪಿಎಲ್ ಹಾಗೂ ಕಮರ್ಷಿಯಲ್ ಪೋರ್ಟ್‌ಪೋಲಿಯೋಗಳಿಂದ ಬಿಸಿಸಿಐ ಹೆಚ್ಚಿನ ಆದಾಯ ಸಂಪಾದಿಸುತ್ತಿದೆ.

2. ಕ್ರಿಕೆಟ್ ಆಸ್ಟ್ರೇಲಿಯಾ(ಆಸ್ಟ್ರೇಲಿಯಾ) ಸುಮಾರು 79 ಯುಎಸ್ ಮಿಲಿಯನ್ ಡಾಲರ್(₹674 ಕೋಟಿ) ಹೊಂದಿರುವ ಇದು, ಅಂತಾರಾಷ್ಟ್ರೀಯ ಕ್ರಿಕೆಟ್, ಬ್ರಾಡ್‌ಕಾಸ್ಟ್ ಪಾರ್ಟ್ನರ್‌ಶಿಪ್ ಹಾಗೂ ಬಿಗ್‌ ಬ್ಯಾಷ್ ಲೀಗ್ ಮೂಲಕ ಆದಾಯ ಗಳಿಸುತ್ತಿದೆ.

3. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್(ಇಸಿಬಿ): ಸುಮಾರು 59 ಮಿಲಿಯನ್ ಡಾಲರ್(₹503 ಕೋಟಿ) ಸಂಪತ್ತು ಹೊಂದಿರುವ ಇದು, ಮುಖ್ಯವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್, ದಿ ಹಂಡ್ರೆಡ್, ದೇಶಿ ಕ್ರಿಕೆಟ್ ಟೂರ್ನಿಗಳಿಂದ ಆದಾಯ ಗಳಿಸುತ್ತಿದೆ.

4. ಪಾಕಿಸ್ತಾನ ಕ್ರಿಕೆಟ್ ಬೋರ್ಡ್(ಪಾಕಿಸ್ತಾನ): ಸುಮಾರು 55 ಮಿಲಿಯನ್ ಡಾಲರ್(₹469 ಕೋಟಿ), ಸಂಪತ್ತು ಹೊಂದಿದ್ದು, ಪಾಕಿಸ್ತಾನ್ ಸೂಪರ್ ಲೀಗ್‌ನಿಂದ ಹೆಚ್ಚಿನ ಆದಾಯ ಗಳಿಸುತ್ತಿದೆ.

5. ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್(ಬಾಂಗ್ಲಾದೇಶ): ಸುಮಾರು 51 ಮಿಲಿಯನ್ ಡಾಲರ್(₹469 ಕೋಟಿ) ಸಂಪತ್ತು ಹೊಂದಿದ್ದು, ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಿಂದ ಹೆಚ್ಚಿನ ಆದಾಯ ಗಳಿಸುತ್ತಿದೆ.

6. ಕ್ರಿಕೆಟ್ ಸೌಥ್ ಆಫ್ರಿಕಾ(ದಕ್ಷಿಣ ಆಫ್ರಿಕಾ): ಸುಮಾರು 47 ಮಿಲಿಯನ್ ಡಾಲರ್(₹401 ಕೋಟಿ) ಸಂಪತ್ತು ಹೊಂದಿದೆ.

7. ಜಿಂಬಾಬ್ವೆ ಕ್ರಿಕೆಟ್(ಜಿಂಬಾಬ್ವೆ): ಸುಮಾರು 38 ಮಿಲಿಯನ್ ಡಾಲರ್(₹324 ಕೋಟಿ) ಸಂಪತ್ತು ಹೊಂದಿದ್ದು, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ನ್ಯೂಜಿಲೆಂಡ್‌ಗಿಂದ ಹೆಚ್ಚಿಗೆ ಸಂಪತ್ತು ಹೊಂದಿದೆ.

8. ಶ್ರೀಲಂಕಾ ಕ್ರಿಕೆಟ್(ಶ್ರೀಲಂಕಾ): ಸುಮಾರು 20 ಮಿಲಿಯನ್ ಡಾಲರ್(₹171 ಕೋಟಿ) ಹೊಂದಿದ್ದು, ಲಂಕಾ ಪ್ರೀಮಿಯರ್ ಲೀಗ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಹೆಚ್ಚಿನ ಆದಾಯ ಗಳಿಸುತ್ತಿದೆ.

9. ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್(ವೆಸ್ಟ್ ಇಂಡೀಸ್): ಸುಮಾರು 15 ಮಿಲಿಯನ್ ಡಾಲರ್(₹128 ಕೋಟಿ) ಸಂಪತ್ತು ಹೊಂದಿದ್ದು, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಿಂದ ಹೆಚ್ಚಿನ ಸಂಪತ್ತು ಗಳಿಸುತ್ತಿದೆ.

10. ನ್ಯೂಜಿಲೆಂಡ್ ಕ್ರಿಕೆಟ್(ನ್ಯೂಜಿಲೆಂಡ್): ಈ ಲಿಸ್ಟ್‌ನಲ್ಲಿ 10ನೇ ಸ್ಥಾನ ಪಡೆದುಕೊಂಡ ಕ್ರಿಕೆಟ್ ಮಂಡಳಿಯೆಂದರೇ ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್. ಇದು ಕೇವಲ 9 ಮಿಲಿಯನ್ ಡಾಲರ್(₹77 ಕೋಟಿ) ಸಂಪತ್ತು ಹೊಂದಿದೆ.