ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಫೈನಲ್‌ನಲ್ಲಿ ಹರ್ಯಾಣವನ್ನು 69 ರನ್‌ಗಳಿಂದ ಮಣಿಸಿ ಜಾರ್ಖಂಡ್ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿದೆ. ನಾಯಕ ಇಶಾನ್ ಕಿಶನ್ ಅವರ ಸ್ಫೋಟಕ ಶತಕದ (101) ನೆರವಿನಿಂದ ಜಾರ್ಖಂಡ್ 262 ರನ್‌ಗಳ ದಾಖಲೆಯ ಮೊತ್ತ ಕಲೆಹಾಕಿತು.
ಪುಣೆ: ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಜಾರ್ಖಂಡ್ ಚೊಚ್ಚಲ ಬಾರಿ ಚಾಂಪಿಯನ್ ಆಗಿದೆ. ಗುರುವಾರ ನಡೆದ ಫೈನಲ್‌ನಲ್ಲಿ ಹರ್ಯಾಣ ವಿರುದ್ಧ ಜಾರ್ಖಂಡ್ 69 ರನ್‌ಗಳಿಂದ ಜಯಗಳಿಸಿತು.
ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ 20 ಓವರಲ್ಲಿ 3 ವಿಕೆಟ್‌ಗೆ 262 ರನ್ ಕಲೆಹಾಕಿತು. ನಾಯಕ ಇಶಾನ್ ಕಿಶನ್ 49 ಎಸೆತಗಳಲ್ಲಿ 101 ರನ್ ಸಿಡಿಸಿದರೆ, ಕುಮಾರ್ ಕುಶಾಗ್ರ 38 ಎಸೆತಕ್ಕೆ 81, ಅನುಕೂಲ್ ರಾಯ್ 20 ಎಸೆತಕ್ಕೆ ಔಟಾಗದೆ 40, ರಾಬಿನ್ ಮಿನ್ಜ್ 14 ಎಸೆತಕ್ಕೆ ಔಟಾಗದೆ 31 ರನ್ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಹರ್ಯಾಣ 18.3 ಓವರ್‌ಗಳಲ್ಲಿ 193 ರನ್‌ಗೆ ಆಲೌಟಾಯಿತು.
ಟೀಂ ಇಂಡಿಯಾ ಆಯ್ಕೆ ಸಮಿತಿಗೆ ದೊಡ್ಡ ಸಂದೇಶ ರವಾನಿಸಿದ ಇಶಾನ್ ಕಿಶನ್:
ಹೌದು, ಜಾರ್ಖಂಡ್ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, 2023ರ ನವೆಂಬರ್‌ನಲ್ಲಿ ಕೊನೆಯ ಬಾರಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಹಲವು ಕಾರಣಗಳಿಂದ ಬಿಸಿಸಿಐ ಆಯ್ಕೆ ಸಮಿತಿ ಕೆಂಗಣ್ಣಿಗೆ ಗುರಿಯಾಗಿ ಭಾರತ ತಂಡದಿಂದ ಹೊರಬಿದ್ದಿದ್ದರು. ಇದೀಗ ಹರ್ಯಾಣ ಎದುರು ಕೇವಲ 45 ಎಸೆತಗಳಲ್ಲಿ 10 ಮುಗಿಲೆತ್ತರದ ಸಿಕ್ಸರ್ ಹಾಗೂ 6 ಮನಮೋಹಕ ಬೌಂಡರಿಗಳ ನೆರವಿನಿಂದ ವಿಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದರು. ಈ ಮೂಲಕ ತಾನು ಟೀಂ ಇಂಡಿಯಾ ಟಿ20 ತಂಡಕ್ಕೆ ಆಯ್ಕೆಯಾಗಲು ಎಲ್ಲಾ ರೀತಿಯಿಂದಲೂ ರೆಡಿಯಿದ್ದೇನೆ ಎನ್ನುವ ಸ್ಪಷ್ಟ ಸಂದೇಶವನ್ನು ಇಶಾನ್ ಕಿಶನ್ ರವಾನಿಸಿದ್ದಾರೆ.
ಅಪರೂಪದ ದಾಖಲೆ ಬರೆದ ಇಶಾನ್ ಕಿಶನ್:
ಇನ್ನು ಈ ಶತಕದೊಂದಿಗೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್‌ನಲ್ಲಿ ಶತಕ ಸಿಡಿಸಿದ ಎರಡನೇ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೆ ಇಶಾನ್ ಕಿಶನ್ ಪಾತ್ರರಾಗಿದ್ದಾರೆ. ಈ ಮೊದಲು 2023-24ನೇ ಸಾಲಿನ ಮುಷ್ತಾಕ್ ಅಲಿ ಫೈನಲ್‌ನಲ್ಲಿ ಪಂಜಾಬ್‌ನ ಅನ್ಮೋಲ್‌ಪ್ರೀತ್ ಸಿಂಗ್ ಬರೋಡ ಎದುರು 113 ರನ್ ಸಿಡಿಸಿದ್ದರು. ಇನ್ನು ಇದಷ್ಟೇ ಅಲ್ಲದೇ ಇಶಾನ್ ಕಿಶನ್, ಮುಷ್ತಾಕ್ ಅಲಿ ಟೂರ್ನಿಯ ಫೈನಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟರ್ ಎನ್ನುವ ದಾಖಲೆಯೂ ಇದೀಗ ಎಡಗೈ ಬ್ಯಾಟರ್ ಪಾಲಾಗಿದೆ.
ಇನ್ನು ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಇದು ಇಶಾನ್ ಕಿಶನ್ ಬಾರಿಸಿದ ಐದನೇ ಶತಕ ಎನಿಸಿಕೊಂಡಿದೆ. ಈ ಮೂಲಕ ಈ ಟೂರ್ನಿ ಇತಿಹಾಸದಲ್ಲಿ ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಭಿಷೇಕ್ ಶರ್ಮಾ ಜತೆ ಜಂಟಿ ಅಗ್ರಸ್ಥಾನಕ್ಕೇರಿದ್ದಾರೆ. ಅಭಿಷೇಕ್ ಶರ್ಮಾ 54 ಇನ್ನಿಂಗ್ಸ್‌ಗಳನ್ನಾಡಿ 5 ಶತಕ ಸಿಡಿಸಿದ್ದರೇ, ಇಶಾನ್ ಕಿಶನ್ 62 ಇನ್ನಿಂಗ್ಸ್‌ಗಳನ್ನಾಡಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ 5 ಶತಕ ಸಿಡಿಸಿದ್ದಾರೆ. ಇನ್ನು ಮೂರು ಶತಕ ಸಿಡಿಸಿರುವ ದೇವದತ್ ಪಡಿಕ್ಕಲ್ ಎರಡನೇ ಸ್ಥಾನದಲ್ಲಿದ್ದಾರೆ.
262 ರನ್: ಜಾರ್ಖಂಡ್‌ನ 262 ರನ್ ಮುಷ್ತಾಕ್ ಅಲಿ ಟಿ20 ಫೈನಲ್‌ನಲ್ಲಿ ಗರಿಷ್ಠ. 2023ರ ಫೈನಲ್‌ನಲ್ಲಿ ಬರೋಡಾ ವಿರುದ್ಧ ಪಂಜಾಬ್ 223 ರನ್ ಗಳಿಸಿತ್ತು.


