ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮಿಂಚಿದ್ದ ಸಿರಾಜ್ ಅವರನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ ಹಾಡಿ ಹೊಗಳಿದ್ದಾರೆ. ಕಿರ್ಮಾನಿ ಅವರ ಆತ್ಮಕಥೆ ಬಿಡುಗಡೆ ಸಮಾರಂಭದಲ್ಲಿ ಸಿರಾಜ್ ಕೂಡ ಭಾಗವಹಿಸಿದ್ದರು.

ಬೆಂಗಳೂರು: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್, ಇತ್ತೀಚೆಗಷ್ಟೇ ಮುಕ್ತಾಯವಾದ ಇಂಗ್ಲೆಂಡ್ ಎದುರಿನ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು. ಸಿರಾಜ್ ಇಂಗ್ಲೆಂಡ್‌ ಎದುರಿನ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವೇಗಿ ಸಿರಾಜ್ 23 ವಿಕೆಟ್ ಕಬಳಿಸುವ ಮೂಲಕ ಸೀರಿಸ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನಿಸಿಕೊಂಡ್ರು. ಇನ್ನು ಓವಲ್‌ನಲ್ಲಿ ನಡೆದ ಐದನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಸಿರಾಜ್ 9 ವಿಕೆಟ್ ಕಬಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾದ್ರು. ಇದೀಗ ಹೈದರಾಬಾದ್ ಮೂಲದ ವೇಗಿ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಯ್ಯದ್ ಕಿರ್ಮಾನಿ ಅವರ ಜತೆಗಿನ ಮಾತುಕತೆಯ ವೇಳೆ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಆಯೋಜನೆಗೊಂಡಿದ್ದ ಸಯ್ಯದ್ ಕಿರ್ಮಾನಿಯವರ ಆತ್ಮಕತೆ, 'ಸ್ಟಂಪ್ಡ್: ಲೈಫ್ ಬಿಹೈಂಡ್ ಅಂಡ್ ಬಿಯಾಂಡ್‌ ದ ಟ್ವಿಟಿಟು ಯಾರ್ಡ್ಸ್‌' ಕಾರ್ಯಕ್ರಮದಲ್ಲಿ ಸಿರಾಜ್, ಕಿರ್ಮಾನಿ ಅವರನ್ನು ಗುಣಗಾನ ಮಾಡಿದ್ದಾರೆ.

ಸಯ್ಯದ್ ಕಿರ್ಮಾನಿ ಅವರ ಬಯೋಪಿಕ್ ಕುರಿತಾದ ಕಾರ್ಯಕ್ರಮವು ಹೈದರಾಬಾದ್‌ನಲ್ಲಿ ಆರ್ಗನೈಸ್ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ವೇಗಿ ಮೊಹಮ್ಮದ್ ಸಿರಾಜ್, ಸರ್ ನೀವು 1983ರ ಏಕದಿನ ವಿಶ್ವಕಪ್ ಗೆದ್ದಾಗ ನಾವು ಹುಟ್ಟಿಯೇ ಇರಲಿಲ್ಲ. ನೀವು ನಮಗೆಲ್ಲಾ ಸ್ಪೂರ್ತಿಯ ಚಿಲುಮೆಯಾಗಿದ್ದೀರ. ನೀವು ವಿಕೆಟ್ ಹಿಂದೆ ಅದ್ಬುತವಾಗಿ ಕೀಪಿಂಗ್ ಮಾಡುತ್ತಿದ್ರಿ ಎಂದು ನಾನು ಸಾಕಷ್ಟು ಆಟಗಾರರ ಬಾಯಲ್ಲಿ ಕೇಳಿದ್ದೇನೆ. ಭಾರತ ತಂಡಕ್ಕೆ ನೀವು ನೀಡಿದ ಕೊಡುಗೆ ಧನ್ಯವಾದಗಳು.

ಇನ್ನು ಇದಾದ ಬಳಿಕ ಇತ್ತೀಚಿಗಿನ ವರ್ಷಗಳಲ್ಲಿ ಸಿರಾಜ್ ಅವರ ಪ್ರದರ್ಶನವನ್ನು ಸಯ್ಯದ್ ಕಿರ್ಮಾನಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತಮ್ಮ ಉತ್ಸಾಹಭರಿತ ಬೌಲಿಂಗ್ ಪ್ರದರ್ಶನವು ದೇಶದ ಹೆಸರನ್ನು ಉಜ್ವಲಿಸುವಂತೆ ಮಾಡಿದೆ. ನಿಮ್ಮ ಬೌಲಿಂಗ್ ಪ್ರದರ್ಶನಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿಯಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಯುವ ಭಾರತ ತಂಡ ಅನಾಯಾಸವಾಗಿ ಟೆಸ್ಟ್ ಸರಣಿ ಸೋಲಲಿದೆ ಎಂದು ಹಲವು ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ದರು. ಆದರೆ ಗಿಲ್ ನೇತೃತ್ವದ ಟೀಂ ಇಂಡಿಯಾ, ಅತ್ಯದ್ಭುತ ಪ್ರದರ್ಶನ ತೋರುವ ಮೂಲಕ 2-2ರ ಸರಣಿ ಸಮಬಲ ಸಾಧಿಸುವಂತೆ ನೋಡಿಕೊಂಡರು. ಬುಮ್ರಾ ಕೇವಲ 3 ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿದ್ದರು. ಹೀಗಾಗಿ ಐದು ಪಂದ್ಯಗಳಲ್ಲಿ ಟೀಂ ಇಂಡಿಯಾ ಬೌಲಿಂಗ್ ನೇತೃತ್ವ ವಹಿಸಿಕೊಂಡ ಸಿರಾಜ್ 23 ಬಲಿ ಪಡೆಯುವ ಮೂಲಕ ಭಾರತ ದಿಟ್ಟ ಹೋರಾಟ ತೋರುವಲ್ಲಿ ಪ್ರಮುಖ ಪಾತ್ರವಹಿಸಿದರು.

ಸಿರಾಜ್‌ಗೆ ಅದ್ಧೂರಿ ಸ್ವಾಗತ

ಹೈದರಾಬಾದ್‌: ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಭಾರತದ ಪಾಲಿನ ಹೀರೋ ಆಗಿ ಹೊರಹೊಮ್ಮಿದ ವೇಗಿ ಮೊಹಮ್ಮದ್‌ ಸಿರಾಜ್‌ ತವರಿಗೆ ಮರಳಿದ್ದು, ಅಭಿಮಾನಿಗಳು ಅದ್ಧೂರಿ ಸ್ವಾಗತ ಕೋರಿದರು. ಸಿರಾಜ್‌ ಭಾರತದ ಫೀಲ್ಡಿಂಗ್‌ ಕೋಚ್‌ ಟಿ.ದಿಲೀಪ್‌ ಜೊತೆ ಮುಂಬೈಗೆ ಆಗಮಿಸಿದರು. ಅಲ್ಲಿಂದ ಸಿರಾಜ್‌ ಹೈದರಾಬಾದ್‌ಗೆ ಬಂದಿಳಿದರು. ಏರ್‌ಪೋರ್ಟ್‌ನಲ್ಲಿ ನೂರಾರು ಅಭಿಮಾನಿಗಳು ಸಿರಾಜ್‌ರನ್ನು ಭರಮಾಡಿಕೊಂಡರು. ಜೈಕಾರ ಕೂಗಿ, ಭಾರತದ ತ್ರಿವರ್ಣ ಧ್ವಜ, ಸಿರಾಜ್‌ರ ಭಾವಚಿತ್ರಗಳನ್ನು ಹಿಡಿದು, ಸಿಹಿ ಹಂಚಿ ಭವ್ಯ ಸ್ವಾಗತ ಕೋರಿದರು.

ಐಸಿಸಿ ತಿಂಗಳ ಕ್ರಿಕೆಟಿಗ ರೇಸ್‌ನಲ್ಲಿ ನಾಯಕ ಗಿಲ್‌

ದುಬೈ: ಐಸಿಸಿ ಜುಲೈ ತಿಂಗಳ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾರತ ಟೆಸ್ಟ್‌ ತಂಡದ ನಾಯಕ ಶುಭ್‌ಮನ್‌ ಗಿಲ್‌ ನಾಮನಿರ್ದೇಶನಗೊಂಡಿದ್ದಾರೆ. ಅವರ ಜೊತೆ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌, ದ.ಆಫ್ರಿಕಾದ ವಿಯಾನ್‌ ಮುಲ್ಡರ್‌ ಕೂಡಾ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಗಿಲ್‌ ಇಂಗ್ಲೆಂಡ್‌ ಸರಣಿಯಲ್ಲಿ 4 ಶತಕಗಳನ್ನೊಳಗೊಂಡ ಒಟ್ಟು 754 ರನ್‌ ಸಿಡಿಸಿದ್ದರು.