ಮಾಜಿ ಆಟಗಾರ ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹಿಂಪಡೆದು ಮರಳಲು ಇದು ಸೂಕ್ತ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಅನಿರೀಕ್ಷಿತವಾಗಿ ನಿವೃತ್ತಿ ಘೋಷಿಸಿದ್ದ ಕೊಹ್ಲಿಯ ನಿರ್ಧಾರವನ್ನು ಸಂಜಯ್ ಮಂಜ್ರೇಕರ್ ಟೀಕಿಸಿದ್ದರು.
ಬೆಂಗಳೂರು: ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಿಂದ ಅನಿರೀಕ್ಷಿತವಾಗಿ ನಿವೃತ್ತಿ ಘೋಷಿಸಿದ್ದ ವಿರಾಟ್ ಕೊಹ್ಲಿ, ತಮ್ಮ ನಿವೃತ್ತಿಯನ್ನು ಹಿಂಪಡೆದು ಟೆಸ್ಟ್ ಕ್ರಿಕೆಟ್‌ಗೆ ಮರಳಲು ಇದು ಸೂಕ್ತ ಸಮಯ ಎಂದು ಮಾಜಿ ಭಾರತೀಯ ಆಟಗಾರ ರಾಬಿನ್ ಉತ್ತಪ್ಪ ಹೇಳಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ತರಬೇತಿ ನಡೆಸುತ್ತಿರುವ ವಿರಾಟ್ ಕೊಹ್ಲಿ ಅವರ ಫೋಟೋ ಹಂಚಿಕೊಂಡು ರಾಬಿನ್ ಉತ್ತಪ್ಪ ಈ ರೀತಿ ಕಾಮೆಂಟ್ ಮಾಡಿದ್ದಾರೆ.
ಅವನ ಕಣ್ಣುಗಳೇ ಎಲ್ಲವನ್ನು ಹೇಳುತ್ತಿವೆ
ಅವನ ಕಣ್ಣುಗಳೇ ಎಲ್ಲವನ್ನೂ ಹೇಳುತ್ತಿವೆ, ಖಂಡಿತವಾಗಿಯೂ ನಿವೃತ್ತಿ ಹಿಂಪಡೆದು ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ಮರಳಲು ಇದು ಸರಿಯಾದ ಸಮಯ. ಅವನು ಟೆಸ್ಟ್ ಕ್ರಿಕೆಟ್‌ಗೆ ಮರಳುವುದನ್ನು ನೋಡಲು ಕಾಯುತ್ತಿದ್ದೇನೆ ಎಂದು ಉತ್ತಪ್ಪ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ತಂಡವನ್ನು ಪ್ರಕಟಿಸುವ ಸ್ವಲ್ಪ ಮೊದಲು, ರೋಹಿತ್ ಶರ್ಮಾ ಮತ್ತು ನಂತರ ವಿರಾಟ್ ಕೊಹ್ಲಿ ಟೆಸ್ಟ್‌ನಿಂದ ಅನಿರೀಕ್ಷಿತ ನಿವೃತ್ತಿ ಘೋಷಿಸಿದ್ದರು. ಇತ್ತೀಚಿನ ಕಳಪೆ ಫಾರ್ಮ್‌ನಿಂದಾಗಿ, ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲನ್ನು ದಾಟಲಾಗದೆ ಕೊಹ್ಲಿ ನಿವೃತ್ತಿ ಘೋಷಿಸಿದ್ದರು. ಆಸ್ಟ್ರೇಲಿಯಾ ಪ್ರವಾಸದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಸಾಧಾರಣ ಪ್ರದರ್ಶನ ತೋರಿದ್ದರು. ಪರಿಣಾಮ ಟೀಂ ಇಂಡಿಯಾ 5 ಪಂದ್ಯಗಳ ಟೆಸ್ಟ್ ಸರಣಿಯನ್ನು 1-3 ಅಂತರದಲ್ಲಿ ಸೋಲು ಅನುಭವಿಸಿತ್ತು. ವಿರಾಟ್ ಕೊಹ್ಲಿ ಭಾರತ ಪರ 123 ಟೆಸ್ಟ್ ಪಂದ್ಯಗಳನ್ನಾಡಿ 46.85ರ ಬ್ಯಾಟಿಂಗ್ ಸರಾಸರಿಯಲ್ಲಿ 9230 ರನ್ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿಯ ನಿವೃತ್ತಿ ನಿರ್ಧಾರವು ಅವಸರದ ನಿರ್ಧಾರವಾಗಿತ್ತು ಮತ್ತು ಅದರ ಹಿಂದಿನ ಕಾರಣವನ್ನು ಕೊಹ್ಲಿ ಮಾತ್ರ ಹೇಳಬಲ್ಲರು ಎಂದು ಉತ್ತಪ್ಪ ಕೆಲವು ದಿನಗಳ ಹಿಂದೆ ಹೇಳಿದ್ದರು. ಸುಲಭವಾದ ಫಾರ್ಮ್ಯಾಟ್‌ನಲ್ಲಿ ಮಾತ್ರ ಮುಂದುವರಿಯಲು ನಿರ್ಧರಿಸಿದ ಕೊಹ್ಲಿಯ ನಿರ್ಧಾರವನ್ನು ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಕೂಡ ಇತ್ತೀಚೆಗೆ ಟೀಕಿಸಿದ್ದರು. ಇಂಗ್ಲೆಂಡ್‌ನ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಎತ್ತರವನ್ನು ತಲುಪುತ್ತಿರುವಾಗ, ಕೊಹ್ಲಿ ಟೆಸ್ಟ್ ಅನ್ನು ಬಿಟ್ಟು ಸುಲಭವಾದ ಫಾರ್ಮ್ಯಾಟ್ ಅನ್ನು ಆಯ್ಕೆ ಮಾಡಬಾರದಿತ್ತು ಎಂದು ಮಂಜ್ರೇಕರ್ ಹೇಳಿದ್ದರು.
ಕೊಹ್ಲಿಯನ್ನು ಟೀಕಿಸಿದ್ದ ಮಂಜ್ರೇಕರ್
ಸಂಜಯ್ ಮಂಜ್ರೇಕರ್, 'ವಿರಾಟ್ ಕೊಹ್ಲಿ ಕೇವಲ ಏಕದಿನ ಕ್ರಿಕೆಟ್ ಆಡೋದು ನೋಡೋಕೆ ಆಗ್ತಿಲ್ಲ. ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಕೊಡುವ ಬದಲು ಸಂಪೂರ್ಣ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಕೊಡಬೇಕಿತ್ತು. ಏಕದಿನ ಕ್ರಿಕೆಟ್ ಆಡೋದು ತುಂಬಾ ಸುಲಭ. ಟೆಸ್ಟ್ ಕ್ರಿಕೆಟ್ ನಿಜವಾದ ಕ್ರಿಕೆಟ್ ಆಟ. ಅಲ್ಲಿ ಸತ್ವ ಪರೀಕ್ಷೆಯಾಗುವುದು ಎಂದು ಹೇಳಿದ್ದರು.
ವಿರಾಟ್ ಕೊಹ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಹಾಗೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಮಾತ್ರ ಮುನ್ನಡೆಯುತ್ತಿದ್ದಾರೆ. ಇದೀಗ ಜನವರಿ 11ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ.


