ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಅಫ್ಘಾನಿಸ್ತಾನದ ದಿಗ್ಗಜ ಮೊಹಮ್ಮದ್ ನಬಿ ಮತ್ತು ಅವರ ಪುತ್ರ ಹಸನ್ ಇಸಾಖಿಲ್ ಒಟ್ಟಿಗೆ ಭಾಗವಹಿಸುತ್ತಿದ್ದಾರೆ. ತಂದೆ 41 ಮತ್ತು ಮಗ 20 ವರ್ಷದವರಾಗಿದ್ದು, ಇಬ್ಬರೂ ಒಂದೇ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರು(ನ.25): ಐಪಿಎಲ್ 2027ರ ಮಿನಿ ಹರಾಜು ಡಿಸೆಂಬರ್ 16, 2026ರಂದು ಗೋವಾದಲ್ಲಿ ನಡೆಯಲಿದೆ. ಈ ಹರಾಜಿಗಾಗಿ ಐಪಿಎಲ್ ಅಧಿಕೃತವಾಗಿ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 1,220 ಆಟಗಾರರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು, ಈ ಪಟ್ಟಿಯಲ್ಲಿ ಅಪ್ಪ-ಮಗನ ಜೋಡಿಯೂ ವಿಶೇಷ ಗಮನ ಸೆಳೆಯುತ್ತಿದೆ.

ಅಫ್ಘಾನಿಸ್ತಾನದ ದಿಗ್ಗಜ ಆಲ್‌ರೌಂಡರ್ ಮೊಹಮ್ಮದ್ ನಬಿ ಮತ್ತು ಅವರ ಪುತ್ರ ಹಸನ್ ಇಸಾಖಿಲ್ ಇಬ್ಬರೂ ಐಪಿಎಲ್ ಹರಾಜಿಗೆ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಒಂದೇ ಹರಾಜಿನಲ್ಲಿ ತಂದೆ ಮತ್ತು ಮಗ ಇಬ್ಬರೂ ಆಟಗಾರರಾಗಿ ಕಾಣಿಸಿಕೊಳ್ಳುತ್ತಿರುವುದು ಕುತೂಹಲ ಮೂಡಿಸಿದೆ. ಮೊಹಮ್ಮದ್ ನಬಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಷ್ಟೇ ಅಲ್ಲದೆ, ವಿಶ್ವದ ವಿವಿಧ ಟಿ20 ಲೀಗ್‌ಗಳಲ್ಲಿಯೂ ಆಡಿದ್ದಾರೆ. ಐಪಿಎಲ್‌ನಲ್ಲೂ ಅವರು ಹಲವು ವರ್ಷಗಳ ಕಾಲ ಭಾಗವಹಿಸಿದ್ದಾರೆ.

ನಬಿ 2017ರಿಂದ 2024ರವರೆಗೆ ಐಪಿಎಲ್‌ನಲ್ಲಿ ಆಡಿದ್ದು, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಮತ್ತೊಂದೆಡೆ, ಅವರ ಪುತ್ರ ಹಸನ್ ಇಸಾಖಿಲ್ ಇದೇ ಮೊದಲ ಬಾರಿಗೆ ಐಪಿಎಲ್ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಹಾಗಾದರೆ, ಈ ಅಪ್ಪ-ಮಗನ ಜೋಡಿಯ ವಯಸ್ಸು, ಬೇಸ್ ಪ್ರೈಸ್ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಅನುಭವದಲ್ಲಿ ಎಷ್ಟು ವ್ಯತ್ಯಾಸವಿದೆ ಎನ್ನುವುದನ್ನು ನೋಡೋಣ ಬನ್ನಿ.

ಮೊಹಮ್ಮದ್ ನಬಿ ಮತ್ತು ಹಸನ್ ಇಸಾಖಿಲ್ ವಯಸ್ಸಿನ ವ್ಯತ್ಯಾಸ

ಮೊಹಮ್ಮದ್ ನಬಿ 1985ರ ಜನವರಿ 1ರಂದು ಜನಿಸಿದ್ದು, 2027ರ ಜನವರಿ 1ರಂದು 42ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಹಸನ್ ಇಸಾಖಿಲ್ 2006ರ ಜುಲೈ 28ರಂದು ಜನಿಸಿದ್ದು, 2027ರ ಜುಲೈ 28ರಂದು 21 ವರ್ಷ ಪೂರ್ಣಗೊಳಿಸಲಿದ್ದಾರೆ. ಹೀಗಾಗಿ ಐಪಿಎಲ್ 2027ರ ಹರಾಜಿನ ಸಂದರ್ಭದಲ್ಲಿ ತಂದೆ ಮೊಹಮ್ಮದ್ ನಬಿ 41 ವರ್ಷದವರಾಗಿದ್ದರೆ, ಮಗ ಹಸನ್ ಇಸಾಖಿಲ್ 20 ವರ್ಷದವರಾಗಿರಲಿದ್ದಾರೆ.

ಇಬ್ಬರ ಬೇಸ್ ಪ್ರೈಸ್ ಎಷ್ಟು?

ಐಪಿಎಲ್ 2027ರ ಮಿನಿ ಹರಾಜಿನಲ್ಲಿ ಮೊಹಮ್ಮದ್ ನಬಿ ತಮ್ಮ ಮೂಲ ಬೆಲೆಯನ್ನು ₹1 ಕೋಟಿಗೆ ನಿಗದಿಪಡಿಸಿಕೊಂಡಿದ್ದಾರೆ. ಅವರ ಪುತ್ರ ಹಸನ್ ಇಸಾಖಿಲ್ ₹75 ಲಕ್ಷ ಬೇಸ್ ಪ್ರೈಸ್‌ನೊಂದಿಗೆ ಹರಾಜಿಗೆ ಪ್ರವೇಶಿಸಿದ್ದಾರೆ. ಇಬ್ಬರ ಬೇಸ್ ಪ್ರೈಸ್ ನಡುವೆ ₹25 ಲಕ್ಷ ವ್ಯತ್ಯಾಸವಿದೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಬಿ ಮತ್ತು ಹಸನ್ ನಡುವಿನ ವ್ಯತ್ಯಾಸ

ಮೊಹಮ್ಮದ್ ನಬಿ 2009ರಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಅಫ್ಘಾನಿಸ್ತಾನ ತಂಡದ ಪ್ರಮುಖ ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದು, ಟೆಸ್ಟ್, ಏಕದಿನ ಮತ್ತು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ನಬಿ ಇದುವರೆಗೆ 3 ಟೆಸ್ಟ್, 181 ಏಕದಿನ ಮತ್ತು 155 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮೂಲಕ 33 ರನ್ ಗಳಿಸಿರುವ ಅವರು, ಬೌಲಿಂಗ್‌ನಲ್ಲಿ 8 ವಿಕೆಟ್ ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 157 ಇನಿಂಗ್ಸ್‌ಗಳಲ್ಲಿ 3,801 ರನ್ ಗಳಿಸಿದ್ದು, 181 ವಿಕೆಟ್‌ಗಳನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 143 ಇನಿಂಗ್ಸ್‌ಗಳಲ್ಲಿ 2,509 ರನ್ ಗಳಿಸಿರುವ ನಬಿ, ಬೌಲಿಂಗ್‌ನಲ್ಲಿ 141 ಇನಿಂಗ್ಸ್‌ಗಳಿಂದ 111 ವಿಕೆಟ್ ಪಡೆದಿದ್ದಾರೆ.

ಮತ್ತೊಂದೆಡೆ, ಹಸನ್ ಇಸಾಖಿಲ್ ಅವರ ಅಂತರರಾಷ್ಟ್ರೀಯ ಅನುಭವ ಈಗಷ್ಟೇ ಆರಂಭವಾಗಿದೆ. ಅವರು ಇದುವರೆಗೆ ಕೇವಲ 2 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ಎರಡು ಪಂದ್ಯಗಳಲ್ಲಿನ ಎರಡು ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿ ಒಟ್ಟು 3 ರನ್ ಗಳಿಸಿದ್ದಾರೆ. ಹಸನ್ 2026ರ ಸೆಪ್ಟೆಂಬರ್‌ನಲ್ಲಿ ಆಫ್ಘಾನಿಸ್ತಾನ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅವರ ಚೊಚ್ಚಲ ಪಂದ್ಯ 2026ರ ಏಷ್ಯನ್ ಗೇಮ್ಸ್‌ನಲ್ಲಿ ನಡೆದಿತ್ತು.

ಐಪಿಎಲ್ 2027 ಹರಾಜಿನಲ್ಲಿ ಅಪ್ಪ-ಮಗನ ಮೇಲೆ ಕಣ್ಣಿಟ್ಟಿರುವ ಅಭಿಮಾನಿಗಳು

ಮೊಹಮ್ಮದ್ ನಬಿ ಈಗಾಗಲೇ ಐಪಿಎಲ್ ಮತ್ತು ವಿವಿಧ ಟಿ20 ಲೀಗ್‌ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಹಸನ್ ಇಸಾಖಿಲ್‌ಗೆ ಇದು ಮೊದಲ ಐಪಿಎಲ್ ಹರಾಜಾಗಿದ್ದು, ತಂದೆಯೊಂದಿಗೆ ಒಂದೇ ಹರಾಜಿನ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷವಾಗಿದೆ. ನಬಿ ತಮ್ಮ ಅನುಭವದ ಬಲದಿಂದ ಹರಾಜಿಗೆ ಬಂದಿದ್ದರೆ, ಹಸನ್ ಯುವ ಆಟಗಾರನಾಗಿ ಐಪಿಎಲ್ ತಂಡಗಳ ಗಮನ ಸೆಳೆಯುವ ನಿರೀಕ್ಷೆಯಿದೆ.

ಡಿಸೆಂಬರ್ 16ರಂದು ಗೋವಾದಲ್ಲಿ ನಡೆಯಲಿರುವ ಐಪಿಎಲ್ 2027 ಮಿನಿ ಹರಾಜಿನಲ್ಲಿ ಈ ಅಪ್ಪ-ಮಗನ ಜೋಡಿ ಯಾವ ತಂಡದ ಪಾಲಾಗಲಿದೆ ಎಂಬುದನ್ನು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.