ಕೈಯಲ್ಲಿ ಮೈಕ್ ಹಿಡಿದು ಜಗತ್ತನ್ನು ಕುಣಿಸಿದವರು ಮೈಕೆಲ್ ಜಾಕ್ಸನ್; ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸುತ್ತಿರುವವರು ವೈಭವ್ ಸೂರ್ಯವಂಶಿ. ಇಬ್ಬರ ಬದುಕಿನ ಆರಂಭದಲ್ಲಿ ತಂದೆಯ ಕನಸು, ಪರಿಶ್ರಮ ಮತ್ತು ಪ್ರತಿಭೆಯ ಮೇಲಿನ ನಂಬಿಕೆಯೇ ದೊಡ್ಡ ಶಕ್ತಿಯಾಗಿತ್ತು.

ಒಬ್ಬರ ಕೈಯಲ್ಲಿ ಮೈಕ್ ಇದ್ದರೆ, ಮತ್ತೊಬ್ಬರ ಕೈಯಲ್ಲಿ ಬ್ಯಾಟ್ ಇದೆ. ಒಬ್ಬರು ಸಂಗೀತ ಲೋಕದಲ್ಲಿ ಸಂಚಲನ ಸೃಷ್ಟಿಸಿದರೆ, ಮತ್ತೊಬ್ಬರು ಕ್ರಿಕೆಟ್ ಮೈದಾನದಲ್ಲಿ ಬೌಲರ್ಗಳ ನಿದ್ದೆಗೆಡಿಸುತ್ತಿದ್ದಾರೆ. ಇಬ್ಬರ ಬಾಲ್ಯದಲ್ಲೂ ಅಚ್ಚರಿ ಮೂಡಿಸುವಂತಹ ಹಲವು ಕಥೆಗಳಿವೆ. ಮೈಕೆಲ್ ಜಾಕ್ಸನ್ ಅವರನ್ನು ಜಗತ್ತಿನ ಅತಿದೊಡ್ಡ ಮನರಂಜನಾಕಾರನನ್ನಾಗಿ ಮಾಡಬೇಕೆಂಬ ಕನಸು ಅವರ ತಂದೆ ಜೋಸೆಫ್ ಅವರದ್ದಾಗಿತ್ತು. ಅದೇ ರೀತಿ ವೈಭವ್ ಸೂರ್ಯವಂಶಿಯನ್ನು ಕ್ರಿಕೆಟ್ ತಾರೆಯನ್ನಾಗಿ ಮಾಡಬೇಕೆಂದು ಅವರ ತಂದೆ ಸಂಜೀವ್ ತಮ್ಮ ಸರ್ವಸ್ವವನ್ನೇ ಪಣಕ್ಕಿಟ್ಟಿದ್ದರು. ಈ ಇಬ್ಬರ ಬದುಕಿನ ಆರಂಭದ ಪುಟಗಳನ್ನು ತಿರುವಿ ನೋಡಿದರೆ ಹಲವು ಕುತೂಹಲಕಾರಿ ಸಾಮ್ಯತೆಗಳು ಕಾಣಿಸುತ್ತವೆ.

2026ರ ಏಪ್ರಿಲ್ 24ರಂದು ಬಿಡುಗಡೆಯಾದ 'Michael' ಬಯೋಪಿಕ್ ಸಿನಿಮಾದಲ್ಲಿ ಮೈಕೆಲ್ ಜಾಕ್ಸನ್ ಅವರ ಆರಂಭಿಕ ಜೀವನ, ಕುಟುಂಬ, ಜಾಕ್ಸನ್ 5 ತಂಡದ ಪಯಣ ಹಾಗೂ ಅಸಾಧಾರಣ ಕಲಾವಿದನಾಗಿ ಬೆಳೆದ ಕಥೆಯನ್ನು ತೋರಿಸಲಾಗಿದೆ. ಆಂಟೊಯಿನ್ ಫುಕ್ವಾ ನಿರ್ದೇಶನದ ಈ ಸಿನಿಮಾ ಮೈಕೆಲ್ ಅವರ ಬಾಲ್ಯದ ದಿನಗಳನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ಚಿಕ್ಕ ವಯಸ್ಸಿನಲ್ಲೇ ಪ್ರತಿಭೆ ಗುರುತಿಸಿಕೊಂಡಿದ್ದ ಆ ಬಾಲಕನ ಹಿಂದೆ, ಆತನನ್ನು ಜಗತ್ತಿಗೆ ಪರಿಚಯಿಸಲು ಶ್ರಮಿಸಿದ ತಂದೆಯೊಬ್ಬರಿದ್ದರು.

ಇದೇ ರೀತಿಯ ಕಥೆ ಬಿಹಾರದ ಸಮಷ್ಟಿಪುರ ಜಿಲ್ಲೆಯ ತಾಜ್ಪುರದ ಮೊತಿಪುರ ಗ್ರಾಮದಿಂದ ಹೊರಟು ಕ್ರಿಕೆಟ್ನ ದೊಡ್ಡ ವೇದಿಕೆ ತಲುಪಿದ ವೈಭವ್ ಸೂರ್ಯವಂಶಿಯದ್ದೂ ಹೌದು. ಇಲ್ಲಿಯೂ ಮಗನ ಕೈಗೆ ಬ್ಯಾಟ್ ಕೊಟ್ಟು, ಆತನ ಪ್ರತಿಭೆ ಗುರುತಿಸಿ, ಕ್ರಿಕೆಟಿಗನನ್ನಾಗಿ ರೂಪಿಸಲು ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿಕೊಂಡ ತಂದೆಯೊಬ್ಬರಿದ್ದಾರೆ. ಆದರೆ ಮೈಕೆಲ್ ಅವರ ಬಾಲ್ಯ ಸಂಗೀತ ಮತ್ತು ವೇದಿಕೆಯ ಬೆಳಕಿನ ನಡುವೆ ಕಳೆದರೆ, ವೈಭವ್ ಅವರ ಬಾಲ್ಯ ಕ್ರಿಕೆಟ್ ಪಿಚ್, ನೆಟ್ಸ್ನಲ್ಲಿ ಅಭ್ಯಾಸ ಮತ್ತು ಚೆಂಡುಗಳನ್ನು ಬೌಂಡರಿ ಗೆರೆ ದಾಟಿಸುವ ಪ್ರಯತ್ನಗಳ ನಡುವೆ ಕಳೆದಿದೆ.

ಮಗ ಜಗತ್ತಿನ ಅತಿದೊಡ್ಡ ಸ್ಟಾರ್ ಆಗ್ಬೇಕು ಎಂಬುದು ತಂದೆಯ ಕನಸು

ಮೈಕೆಲ್ ಜಾಕ್ಸನ್ ಅವರ ಜೀವನದಲ್ಲಿ ತಂದೆ ಜೋಸೆಫ್ ಜಾಕ್ಸನ್ ಅವರ ಪಾತ್ರ ಬಹಳ ಮಹತ್ವದ್ದು. ಜೋಸೆಫ್ ಅವರಿಗೂ ಸಂಗೀತದಲ್ಲಿ ಆಸಕ್ತಿ ಇತ್ತು. ತಮ್ಮ ಮಕ್ಕಳು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕೆಂದು ಅವರು ಬಯಸಿದ್ದರು. ಹೀಗಾಗಿ ತಮ್ಮ ಐವರು ಮಕ್ಕಳಾದ ಜಾಕಿ, ಟಿಟೊ, ಜರ್ಮೇನ್, ಮಾರ್ಲನ್ ಮತ್ತು ಮೈಕೆಲ್ ಅವರನ್ನು ಸೇರಿಸಿ 'ಜಾಕ್ಸನ್ 5' ಎಂಬ ಸಂಗೀತ ತಂಡವನ್ನು ರಚಿಸಿದರು. ಮೈಕೆಲ್ ಈ ತಂಡದ ಅತ್ಯಂತ ಕಿರಿಯ ಸದಸ್ಯರಾಗಿದ್ದರು. ಆದರೆ ಅವರಲ್ಲಿದ್ದ ಅದ್ಭುತ ಪ್ರತಿಭೆಯಿಂದಾಗಿ ಬಹುಬೇಗ ತಂಡದ ಪ್ರಮುಖ ಆಕರ್ಷಣೆಯಾದರು. ಜೋಸೆಫ್ ಅವರ ತರಬೇತಿ ವಿಧಾನ ಮಾತ್ರ ತುಂಬಾ ಕಠಿಣವಾಗಿತ್ತು. ಮಕ್ಕಳು ಗಂಟೆಗಟ್ಟಲೆ ಅಭ್ಯಾಸ ಮಾಡಬೇಕಿತ್ತು. ರಿಹರ್ಸಲ್ ವೇಳೆ ಸಣ್ಣ ತಪ್ಪು ಮಾಡಿದರೂ ತಂದೆ ಕೋಪಗೊಳ್ಳುತ್ತಿದ್ದರು. ಮೈಕೆಲ್ ತಮ್ಮ ಬಾಲ್ಯದ ಬಗ್ಗೆ ಮಾತನಾಡುವಾಗ, ತಂದೆ ಬೆಲ್ಟ್ನಿಂದ ಹೊಡೆಯುತ್ತಿದ್ದರು ಎಂದು ಹೇಳಿಕೊಂಡಿದ್ದರು. ದೊಡ್ಡ ಕಲಾವಿದರಾಗಬೇಕಾದರೆ ಸಾಮಾನ್ಯ ಮಕ್ಕಳಿಗಿಂತ ಹೆಚ್ಚು ಶ್ರಮಪಡಬೇಕು ಎಂಬುದು ಜೋಸೆಫ್ ಅವರ ನಂಬಿಕೆಯಾಗಿತ್ತು. ತಂದೆಯ ಕಠಿಣ ಶಿಸ್ತು ಮತ್ತು ನಿರಂತರ ಅಭ್ಯಾಸ ಜಾಕ್ಸನ್ 5 ತಂಡಕ್ಕೆ ಸಂಗೀತ ಲೋಕದಲ್ಲಿ ದೊಡ್ಡ ಹೆಸರು ತಂದುಕೊಟ್ಟಿತು.

ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಅವರ ಕಥೆಯೂ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಸಂಜೀವ್ ಅವರಿಗೂ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಇತ್ತು. ತಾವೂ ಕ್ರಿಕೆಟಿಗನಾಗಬೇಕೆಂಬ ಕನಸು ಕಂಡಿದ್ದರು. ಆದರೆ ಮಗನಲ್ಲಿದ್ದ ಪ್ರತಿಭೆಯನ್ನು ಗುರುತಿಸಿದ ಅವರು, ವೈಭವ್ ಏನಾದರೂ ವಿಶೇಷ ಸಾಧನೆ ಮಾಡಬಲ್ಲ ಎಂಬುದನ್ನು ಬಹುಬೇಗ ಅರ್ಥಮಾಡಿಕೊಂಡರು.

ವೈಭವ್ ಕೇವಲ ನಾಲ್ಕು ವರ್ಷದವರಾಗಿದ್ದಾಗಲೇ ಬ್ಯಾಟ್ ಹಿಡಿದಿದ್ದರು. ಮಗನನ್ನು ಸುಮ್ಮನೆ ಕ್ರಿಕೆಟ್ ಆಡಲು ಬಿಡುವುದಕ್ಕಿಂತ, ಉತ್ತಮ ತರಬೇತಿ ಕೊಡಿಸಿ ದೊಡ್ಡ ಕ್ರಿಕೆಟಿಗನನ್ನಾಗಿ ರೂಪಿಸಬೇಕೆಂದು ಸಂಜೀವ್ ನಿರ್ಧರಿಸಿದರು. ಆದರೆ ಈ ಕನಸು ನನಸು ಮಾಡುವುದು ಅಷ್ಟು ಸುಲಭವಾಗಿರಲಿಲ್ಲ. ಸಣ್ಣ ಪಟ್ಟಣದಲ್ಲಿ ಉನ್ನತ ಮಟ್ಟದ ಕ್ರಿಕೆಟ್ ತರಬೇತಿ ಸೌಲಭ್ಯಗಳು ಇರಲಿಲ್ಲ. ಹೀಗಾಗಿ ಮಗನಿಗೆ ಉತ್ತಮ ತರಬೇತಿ ಕೊಡಿಸಲು ಸಂಜೀವ್ ದೂರದ ಪ್ರಯಾಣ ಮಾಡಬೇಕಾಗಿತ್ತು. ಮೊತಿಪುರದಿಂದ ಪಾಟ್ನಾಗೆ ಹೋಗಿ ಬರಲು ಗಂಟೆಗಟ್ಟಲೆ ಸಮಯ ಬೇಕಾಗುತ್ತಿತ್ತು. ಕೆಲವೊಮ್ಮೆ ಐದು ಗಂಟೆಗಳವರೆಗೂ ಪ್ರಯಾಣ ಮಾಡಬೇಕಾಗಿತ್ತು.

ಮಗನ ಅಭ್ಯಾಸ ಮತ್ತು ತರಬೇತಿಗಾಗಿ ಅವರು ತಮ್ಮ ಪೂರ್ವಜರ ಆಸ್ತಿಯನ್ನೇ ಮಾರಾಟ ಮಾಡಿದರು. ವ್ಯಾಪಾರವೂ ಸಾಕಷ್ಟು ತೊಂದರೆ ಅನುಭವಿಸಿತು. ಆದರೂ ವೈಭವ್ ಕ್ರಿಕೆಟಿಗನಾಗಬೇಕೆಂಬ ಕನಸಿನ ವಿಚಾರದಲ್ಲಿ ಅವರು ರಾಜಿ ಮಾಡಿಕೊಳ್ಳಲಿಲ್ಲ.

ಕಾರ್ಟೂನ್ ಇಷ್ಟ

ಬಾಲ್ಯದ ಮತ್ತೊಂದು ಸಾಮ್ಯತೆ ಇಬ್ಬರ ಆಸಕ್ತಿಯಲ್ಲೂ ಕಾಣಿಸುತ್ತದೆ. ಮೈಕೆಲ್ ಜಾಕ್ಸನ್ ಅವರೊಳಗೆ ಚಿಕ್ಕ ವಯಸ್ಸಿನಿಂದಲೇ ಒಬ್ಬ ಕಲಾವಿದ ಬೆಳೆಯುತ್ತಿದ್ದ. ಪ್ರಸಿದ್ಧ ಹಾಸ್ಯನಟ ಚಾರ್ಲಿ ಚಾಪ್ಲಿನ್ ಅವರ ಮೂಕಾಭಿನಯ, ಮುಖದ ಹಾವಭಾವ ಮತ್ತು ದೇಹದ ಚಲನವಲನಗಳು ಮೈಕೆಲ್ ಮೇಲೆ ಪ್ರಭಾವ ಬೀರಿದ್ದವು. ವೈಭವ್ ಅವರು ಕಾರ್ಟೂನ್ ನೋಡಲು ಇಷ್ಟಪಡುತ್ತಾರೆ. ಒತ್ತಡದ ಟೈಮನಲ್ಲಿ ಕಾರ್ಟೂನ್‌ ನೋಡ್ತಾರೆ ವೈಭವ್.‌ ಆದ್ರೆ ವೈಭವ್ ಅವರ ಬ್ಯಾಟಿಂಗ್ ಕೌಶಲವನ್ನು ಹೆಚ್ಚಿಸಲು ತಂದೆ ಅವರಿಗೆ ಬಾಲ್ಯದಲ್ಲಿ ಕ್ರಿಕೆಟ್ ದಿಗ್ಗಜರ ವಿಡಿಯೋಗಳನ್ನು ತೋರಿಸುತ್ತಿದ್ದರು. ಬ್ರಿಯಾನ್ ಲಾರಾ ಮತ್ತು ಯುವರಾಜ್ ಸಿಂಗ್ ವೈಭವ್ ಅವರ ನೆಚ್ಚಿನ ಆಟಗಾರರು.ಇಲ್ಲಿ ಒಂದು ಆಸಕ್ತಿದಾಯಕ ವ್ಯತ್ಯಾಸವಿದೆ. ಮೈಕೆಲ್ ವೇದಿಕೆಯ ಮೇಲಿನ ಅಭಿವ್ಯಕ್ತಿಯನ್ನು ಉತ್ತಮಪಡಿಸಿಕೊಳ್ಳಲು ಚಾರ್ಲಿ ಚಾಪ್ಲಿನ್ ಅವರಿಂದ ಸ್ಫೂರ್ತಿ ಪಡೆದರೆ, ವೈಭವ್ ಬ್ಯಾಟಿಂಗ್ ಕಲೆಯನ್ನು ಸುಧಾರಿಸಿಕೊಳ್ಳಲು ಲಾರಾ ಮತ್ತು ಯುವರಾಜ್ ಅವರ ವಿಡಿಯೋಗಳನ್ನು ನೋಡುತ್ತಿದ್ದರು. ಇಬ್ಬರಿಗೂ ಸ್ಫೂರ್ತಿ ಎಂದರೆ ಬೇರೆಯವರನ್ನು ಅನುಕರಿಸುವುದಲ್ಲ, ತಮ್ಮ ಪ್ರತಿಭೆಗೆ ಹೊಸತನ ಸೇರಿಸಿಕೊಳ್ಳುವುದಾಗಿತ್ತು.

ವಯಸ್ಸಿನ ವಿಚಾರದಲ್ಲೂ ಕುತೂಹಲಕಾರಿ ಕಥೆ

ಮೈಕೆಲ್ ಜಾಕ್ಸನ್, ಮೋಟೌನ್ ರೆಕಾರ್ಡ್ಸ್ಗೆ ಸೇರಿದಾಗ ಸುಮಾರು 10 ವರ್ಷದವರಾಗಿದ್ದರು. ಪ್ರಸಿದ್ಧ ಜೀವನಚರಿತ್ರೆಕಾರ ಜೆ. ರ್ಯಾಂಡಿ ತಾರಾಬೊರೆಲ್ಲಿ ಅವರ ಪ್ರಕಾರ, ಆ ಸಮಯದಲ್ಲಿ ಸಾರ್ವಜನಿಕವಾಗಿ ಮೈಕೆಲ್ ಅವರ ವಯಸ್ಸನ್ನು ಎಂಟು ವರ್ಷ ಎಂದು ಹೇಳಲಾಗಿತ್ತು. ಚಿಕ್ಕ ವಯಸ್ಸಿನ ಬಾಲಕನಾಗಿ ಅವರನ್ನು ತೋರಿಸಿದರೆ ಪ್ರೇಕ್ಷಕರಿಗೆ ಮತ್ತಷ್ಟು ಆಕರ್ಷಕವಾಗಿ ಕಾಣಬಹುದು ಎಂಬುದು ಇದರ ಹಿಂದಿನ ಉದ್ದೇಶವಾಗಿತ್ತು.

ವೈಭವ್ ಸೂರ್ಯವಂಶಿ ಅವರ ವಿಚಾರದಲ್ಲೂ ಕ್ರಿಕೆಟ್ ವೃತ್ತಿಜೀವನದ ಆರಂಭದಿಂದಲೇ ವಯಸ್ಸಿನ ಬಗ್ಗೆ ಚರ್ಚೆಗಳು ನಡೆದಿದ್ದವು. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡುತ್ತಿದ್ದ ಅವರನ್ನು ಕಂಡ ಕೆಲವರು ಅಧಿಕೃತ ದಾಖಲೆಗಳಲ್ಲಿರುವ ವಯಸ್ಸಿಗಿಂತ ನಿಜವಾದ ವಯಸ್ಸು ಹೆಚ್ಚಿರಬಹುದು ಎಂದು ಪ್ರಶ್ನಿಸಿದ್ದರು. ಆದರೆ ಅಧಿಕೃತ ದಾಖಲೆಗಳ ಪ್ರಕಾರ ವೈಭವ್ ಜನಿಸಿದ್ದು 2011ರ ಮಾರ್ಚ್ 27ರಂದು. ಅಂದರೆ ಸದ್ಯ ಅವರಿಗೆ 15 ವರ್ಷ.ಇಬ್ಬರ ವಿಚಾರದಲ್ಲೂ ವಯಸ್ಸು ಅವರ ಗುರುತಿನ ಭಾಗವಾಗಿರುವುದು ವಿಶೇಷ.

ಮೈಕೆಲ್ ಜಾಕ್ಸನ್ ಅವರ ಕಥೆಯಲ್ಲಿ ಕುಟುಂಬದ ಪಾತ್ರ ಕೇವಲ ಅವರನ್ನು ವೇದಿಕೆಗೆ ಪರಿಚಯಿಸುವುದಕ್ಕೆ ಸೀಮಿತವಾಗಿರಲಿಲ್ಲ. ಜೋಸೆಫ್ ಜಾಕ್ಸನ್ ತಮ್ಮ ಐವರು ಮಕ್ಕಳನ್ನು ಸಂಗೀತ ತಂಡವಾಗಿ ರೂಪಿಸಿದ್ದರು. ಜಾಕ್ಸನ್ 5 ತಂಡದ ಆರಂಭದಿಂದ ಇಡೀ ಕುಟುಂಬ ಸಂಗೀತ ಲೋಕದೊಂದಿಗೆ ಗುರುತಿಸಿಕೊಂಡಿತು. ಮೈಕೆಲ್ ಜೊತೆಗೆ ಅವರ ಸಹೋದರರೂ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿದ್ದರು. ಮುಂದೆ ಮೈಕೆಲ್ ಅವರ ಜನಪ್ರಿಯತೆ ಎಷ್ಟರಮಟ್ಟಿಗೆ ಹೆಚ್ಚಾಯಿತೆಂದರೆ, ಅವರು ಕುಟುಂಬದ ಇತರ ಸದಸ್ಯರಿಗಿಂತ ವಿಭಿನ್ನವಾದ ಜಾಗತಿಕ ಗುರುತನ್ನು ಪಡೆದುಕೊಂಡರು.

ವೈಭವ್ ಸೂರ್ಯವಂಶಿ ಕುಟುಂಬದಲ್ಲೂ ಕ್ರಿಕೆಟ್ ಬಗ್ಗೆ ಇದೇ ರೀತಿಯ ಆಸಕ್ತಿ ಕಾಣಿಸುತ್ತದೆ. ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ಸಂಜೀವ್ ಸೂರ್ಯವಂಶಿ ಮಾಡಿದ ಪರಿಶ್ರಮ ಈಗ ಕುಟುಂಬದ ಮತ್ತೊಬ್ಬ ಮಗನಿಗೂ ಪ್ರೇರಣೆಯಾಗಿದೆ. ವೈಭವ್ ಅವರ ಕಿರಿಯ ಸಹೋದರ ಆಶೀರ್ವಾದ್ಗೂ ಕ್ರಿಕೆಟ್ನ ತಂತ್ರಗಳನ್ನು ಕಲಿಸಲಾಗುತ್ತಿದೆ. ಮನೆಯಲ್ಲಿ ಕ್ರಿಕೆಟ್ ವಾತಾವರಣ ಇರಬೇಕು ಮತ್ತು ಮಕ್ಕಳು ಈ ಆಟವನ್ನು ಅರ್ಥಮಾಡಿಕೊಳ್ಳಬೇಕು ಎಂಬುದು ಸಂಜೀವ್ ಅವರ ಬಯಕೆ.

ಗಮನ ಸೆಳೆದ ಸಾಧನೆ

ಮೈಕೆಲ್ ಜಾಕ್ಸನ್ ಮತ್ತು ವೈಭವ್ ಸೂರ್ಯವಂಶಿ ಅವರ ಬಾಲ್ಯದ ಸಾಮ್ಯತೆಗಳೇ ಒಂದು ಕಡೆಯಾದರೆ, ಅವರ ಸಾಧನೆಗಳು ಮತ್ತೊಂದು ಕಡೆ ಗಮನ ಸೆಳೆಯುತ್ತವೆ. ಚಿಕ್ಕ ವಯಸ್ಸಿನಲ್ಲೇ ಸಿಕ್ಕ ಜನಪ್ರಿಯತೆಯನ್ನು ದೊಡ್ಡ ಯಶಸ್ಸಾಗಿ ಪರಿವರ್ತಿಸುವ ಸಾಮರ್ಥ್ಯ ಇಬ್ಬರಲ್ಲೂ ಕಾಣಿಸುತ್ತದೆ. ಸಂಗೀತ ಲೋಕದಲ್ಲಿ ಮೈಕೆಲ್ ಜಾಕ್ಸನ್ 3 ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದಿದ್ದು, 38 ಬಾರಿ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.

ಇನ್ನು ವೈಭವ್ ಸೂರ್ಯವಂಶಿ ಅವರ ಸಾಧನೆಗಳನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ. ಅವರ ವಯಸ್ಸು ಕೇವಲ 15 ವರ್ಷವಾದರೂ ದಾಖಲೆಗಳ ಪಟ್ಟಿ ಅನುಭವಿ ಕ್ರಿಕೆಟಿಗರನ್ನೂ ನಾಚಿಸುವಂತಿದೆ. 12ನೇ ವಯಸ್ಸಿನಲ್ಲಿ ಬಿಹಾರ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದರು. ನಂತರ 14ನೇ ವಯಸ್ಸಿನಲ್ಲಿ ಐಪಿಎಲ್ಗೆ ಪ್ರವೇಶಿಸಿದ್ರು. ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನಲ್ಲಿ ಶತಕ ಗಳಿಸಿದ ಆಟಗಾರ ಎಂಬ ದಾಖಲೆ ಬರೆದರು. 2026ರಲ್ಲಿ ನಡೆದ ಅಂಡರ್-19 ವಿಶ್ವಕಪ್ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ ಸಿಡಿಸಿದರು. ಅಂಡರ್-19 ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಇದು ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆಇಡೀ ಟೂರ್ನಿಯಲ್ಲಿ 439 ರನ್ ಗಳಿಸಿದ ವೈಭವ್ ಸರಣಿಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಅಷ್ಟೇ ಅಲ್ಲ ಒಂದೇ ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಆರೆಂಜ್ ಕ್ಯಾಪ್ ಗೆದ್ದ ಅವರು, ಮೋಸ್ಟ್ ವ್ಯಾಲ್ಯೂಯಬಲ್ ಪ್ಲೇಯರ್ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ ಎಮರ್ಜಿಂಗ್ ಪ್ಲೇಯರ್, ಸೂಪರ್ ಸ್ಟ್ರೈಕರ್ ಮತ್ತು ಸೂಪರ್ ಸಿಕ್ಸಸ್ ಪ್ರಶಸ್ತಿಗಳನ್ನೂ ಗೆದ್ದಿದ್ದಾರೆ.

2026ರ ಜೂನ್ನಲ್ಲಿ ಇಂಡಿಯಾ-ಎ ಮತ್ತು ಶ್ರೀಲಂಕಾ-ಎ ನಡುವಿನ ತ್ರಿಕೋನ ಸರಣಿಯ ಫೈನಲ್ನಲ್ಲಿ ವೈಭವ್ ಕೇವಲ 29 ಎಸೆತಗಳಲ್ಲಿ 94 ರನ್ ಗಳಿಸಿದರು. ಈ ವೇಳೆ ಕೇವಲ 11 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಪುರುಷರ ಲಿಸ್ಟ್-ಎ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಅರ್ಧಶತಕದ 21 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದರು. ಇದಾದ ಬಳಿಕ ಭಾರತ ಹಿರಿಯರ ತಂಡಕ್ಕೂ ಆಯ್ಕೆಯಾಗಿ, 15ನೇ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಈ ಮೂಲಕ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ವೈಭವ್ ಅವರ ಈ ಇನ್ನಿಂಗ್ಸ್ ಬಳಿಕ ಮೈಕೆಲ್ ಜಾಕ್ಸನ್ ಜೊತೆಗಿನ ಹೋಲಿಕೆಗೆ ಮತ್ತೊಂದು ಹೊಸ ಆಯಾಮ ಸಿಕ್ಕಿದೆ. ಮೈಕೆಲ್ ಸಂಗೀತದ ವೇದಿಕೆಯಲ್ಲಿ ತಮ್ಮ ಪ್ರತಿಭೆಯಿಂದ ಜಗತ್ತನ್ನು ಬೆರಗುಗೊಳಿಸಿದ್ದರೆ, ವೈಭವ್ ಕ್ರಿಕೆಟ್ ಮೈದಾನದಲ್ಲಿ ನಿರಂತರವಾಗಿ ಅಸಾಧಾರಣ ಸಾಧನೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಇಬ್ಬರ ಸಾಧನೆಗಳನ್ನು ನೇರವಾಗಿ ಹೋಲಿಕೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅವರ ಕ್ಷೇತ್ರಗಳು, ಕಾಲಘಟ್ಟ ಮತ್ತು ಸ್ಪರ್ಧೆಯ ಸ್ವರೂಪವೇ ಬೇರೆ. ಆದರೂ ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರತಿಭೆಯಿಂದ ಜಗತ್ತಿನ ಗಮನ ಸೆಳೆದಿರುವುದು ಇಬ್ಬರನ್ನೂ ಒಂದೇ ಎಳೆಯಲ್ಲಿ ಬೆಸೆಯುತ್ತದೆ.