ಐಪಿಎಲ್ 2027ರ ಆಟಗಾರರ ರಿಟೆನ್ಶನ್ ಪಟ್ಟಿ ಬಿಡುಗಡೆಯಾಗಿದ್ದು, ಎಂ.ಎಸ್. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮೆಂಟರ್ ಆಗಿ ಹೊಸ ಜವಾಬ್ದಾರಿ ವಹಿಸಲಿದ್ದಾರೆ. ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರ ಬಿಡುಗಡೆ ಕುತೂಹಲ ಮೂಡಿಸಿದ್ದು, ಡಿಸೆಂಬರ್ 16ರಂದು ಗೋವಾದಲ್ಲಿ ಮಿನಿ ಹರಾಜು ನಡೆಯಲಿದೆ.

ಬೆಂಗಳೂರು(ನ.18): ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) 2027ರ ಆವೃತ್ತಿಗೆ ಸಂಬಂಧಿಸಿದ ತಂಡವಾರು ಆಟಗಾರರ ರಿಟೆನ್ಶನ್‌ ಪಟ್ಟಿಯನ್ನು ನವೆಂಬರ್‌ 17ರ ಮಂಗಳವಾರ ಪ್ರಕಟಿಸಲಾಗಿದೆ. ಹಲವು ಅಚ್ಚರಿಯ ನಿರ್ಧಾರಗಳು ಹಾಗೂ ಪ್ರಮುಖ ಆಟಗಾರರ ಬಿಡುಗಡೆಗಳೊಂದಿಗೆ ಈ ಬಾರಿಯ ರಿಟೆನ್ಶನ್‌ ಪ್ರಕ್ರಿಯೆ ಕ್ರಿಕೆಟ್‌ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ.

ದಿನದ ಅತಿದೊಡ್ಡ ಬೆಳವಣಿಗೆಯೆಂದರೆ, ಐಪಿಎಲ್‌ನ ದಿಗ್ಗಜ ಆಟಗಾರ ಎಂ.ಎಸ್‌. ಧೋನಿ ಅವರ ನಿವೃತ್ತಿ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡದಿಂದ ಬಿಡುಗಡೆಯಾಗಿರುವುದು. ಐಪಿಎಲ್‌ನ ಮೊದಲ ಆವೃತ್ತಿಯಿಂದಲೂ ಆಡುತ್ತಾ ಬಂದಿದ್ದ ಧೋನಿ, ತಮ್ಮ 19 ಆವೃತ್ತಿಗಳ ಸುದೀರ್ಘ ಆಟಗಾರಿಕೆ ಬದುಕಿಗೆ ತೆರೆ ಎಳೆದಿದ್ದಾರೆ.

ಧೋನಿಗೆ CSKಯಲ್ಲಿ ಹೊಸ ಜವಾಬ್ದಾರಿ

ಐಪಿಎಲ್‌ನ ಅತ್ಯುತ್ತಮ ನಾಯಕರಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಎಂ.ಎಸ್‌. ಧೋನಿ, ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ದಾಖಲೆಯ ಐದು ಪ್ರಶಸ್ತಿಗಳತ್ತ ಮುನ್ನಡೆಸಿದ್ದಾರೆ. ಅಲ್ಲದೆ, ತಂಡವು 13 ಬಾರಿ ಪ್ಲೇಆಫ್‌ ಪ್ರವೇಶಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಆಟಗಾರನಾಗಿ ಐಪಿಎಲ್‌ಗೆ ವಿದಾಯ ಹೇಳಿರುವ ಧೋನಿ, ಹಳದಿ ಜೆರ್ಸಿಯ ಚೆನ್ನೈ ತಂಡದಲ್ಲಿ ಮೆಂಟರ್‌ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ತಂಡದ ಹೊಸ ಕೋಚ್‌ ಜಹೀರ್‌ ಖಾನ್‌ ಅವರ ಸಹಾಯಕ ಸಿಬ್ಬಂದಿಯ ಭಾಗವಾಗಿ ಧೋನಿ ಕಾರ್ಯನಿರ್ವಹಿಸಲಿದ್ದಾರೆ ಎನ್ನಲಾಗಿದೆ.

ಟ್ರಾವಿಸ್‌ ಹೆಡ್‌, ಮಿಚೆಲ್‌ ಸ್ಟಾರ್ಕ್‌ ಕೂಡ ಬಿಡುಗಡೆ

ಧೋನಿ ಹೊರತಾಗಿ ಹಲವು ಪ್ರಮುಖ ಆಟಗಾರರು ಕೂಡ ರಿಟೆನ್ಶನ್‌ ಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌ ಮತ್ತು ಮಿಚೆಲ್‌ ಸ್ಟಾರ್ಕ್‌ ಅವರ ಬಿಡುಗಡೆಯೂ ಪ್ರಮುಖ ಬೆಳವಣಿಗೆಯಾಗಿದೆ. ಆಸ್ಟ್ರೇಲಿಯಾ ತಂಡವು ಮೂರು ಮಾದರಿಯ ಕ್ರಿಕೆಟ್‌ನಲ್ಲೂ ನಿರಂತರವಾಗಿ ಪಂದ್ಯಗಳನ್ನು ಆಡುತ್ತಿರುವ ಹಿನ್ನೆಲೆಯಲ್ಲಿ ಆಟಗಾರರ ಕೆಲಸದ ಒತ್ತಡ ನಿರ್ವಹಣೆ (Workload Management) ಮುಖ್ಯವಾಗಿದೆ. ಇದೇ ಕಾರಣಕ್ಕೆ ಟ್ರಾವಿಸ್‌ ಹೆಡ್‌ ಮತ್ತು ಮಿಚೆಲ್‌ ಸ್ಟಾರ್ಕ್‌ ತಮ್ಮ ಕ್ರಿಕೆಟ್‌ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್‌ನಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆ.

ಡಿಸೆಂಬರ್‌ 16ರಂದು ಗೋವಾದಲ್ಲಿ IPL 2027 ಮಿನಿ ಹರಾಜು

ಆಟಗಾರರ ರಿಟೆನ್ಶನ್‌ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಇದೀಗ ಎಲ್ಲರ ಗಮನ ಮಿನಿ ಹರಾಜಿನತ್ತ ನೆಟ್ಟಿದೆ. IPL 2027ರ ಆಟಗಾರರ ಹರಾಜು ಡಿಸೆಂಬರ್‌ 16ರಂದು ಗೋವಾದಲ್ಲಿ ನಡೆಯಲಿದೆ. ಈ ಬಾರಿಯ ಹರಾಜಿಗಾಗಿ ಪ್ರತಿ ತಂಡದ ಒಟ್ಟು ಹಣದ ಮಿತಿಯನ್ನು ₹157 ಕೋಟಿಗೆ ಹೆಚ್ಚಿಸಲಾಗಿದೆ. ತಂಡಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆಟಗಾರರನ್ನು ಖರೀದಿಸಲು ಗರಿಷ್ಠ 25 ಆಟಗಾರರ ತಂಡದ ಮಿತಿಯಿದೆ.

ಯಾವ ತಂಡದ ಬಳಿ ಎಷ್ಟು ಹಣ ಉಳಿದಿದೆ? ಯಾವ ತಂಡಕ್ಕೆ ಎಷ್ಟು ಆಟಗಾರರ ಸ್ಥಾನಗಳು ಖಾಲಿ ಇವೆ? ಎಂಬ ಲೆಕ್ಕಾಚಾರದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ:

1. ಲಖನೌ ಸೂಪರ್ ಜೈಂಟ್ಸ್ ತಂಡವು ಮಿನಿ ಹರಾಜಿಗೂ ಮುನ್ನ 18 ಆಟಗಾರರನ್ನು ಉಳಿಸಿಕೊಂಡಿದ್ದು, ಹರಾಜಿನಲ್ಲಿ 3 ವಿದೇಶಿ ಆಟಗಾರರು ಸೇರಿದಂತೆ ಒಟ್ಟಾರೆ ಗರಿಷ್ಠ 7 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಅಂದಹಾಗೆ ಲಖನೌ ಪರ್ಸ್‌ನಲ್ಲಿ ಅತಿಹೆಚ್ಚು ಅಂದರೆ 47.45 ಕೋಟಿ ರುಪಾಯಿ ಇದೆ.

2. ಮೂರು ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು 17 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಮಿನಿ ಹರಾಜಿನಲ್ಲಿ 3 ವಿದೇಶಿ ಆಟಗಾರರು ಸೇರಿದಂತೆ ಒಟ್ಟಾರೆ ಗರಿಷ್ಠ 7 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಕೆಕೆಆರ್ ಪರ್ಸ್‌ನಲ್ಲಿ 40.15 ಕೋಟಿ ರುಪಾಯಿ ಹಣವಿದೆ.

3. ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 18 ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ 3 ವಿದೇಶಿ ಆಟಗಾರರು ಸೇರಿದಂತೆ 7 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಆರೆಂಜ್ ಆರ್ಮಿ ಬಳಿ 40.15 ಕೋಟಿ ರುಪಾಯಿ ಹಣವಿದೆ.

4. ಡೆಲ್ಲಿ ಕ್ಯಾಪಿಟಲ್ಸ್ ತಂಡವು 16 ಆಟಗಾರರನ್ನು ರೀಟೈನ್ ಮಾಡಿಕೊಂಡಿದೆ. ಇದೀಗ ಮಿನಿ ಹರಾಜಿನಲ್ಲಿ 4 ವಿದೇಶಿ ಆಟಗಾರರು ಸೇರಿದಂತೆ ಒಟ್ಟಾರೆ 9 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಡೆಲ್ಲಿ ಕ್ಯಾಪಿಟಲ್ಸ್‌ ಪರ್ಸ್‌ನಲ್ಲಿ 39.5 ಕೋಟಿ ರುಪಾಯಿ ಹಣವಿದೆ.

5. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು 16 ಆಟಗಾರರನ್ನು ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ ಎರಡು ವಿದೇಶಿ ಆಟಗಾರರು ಸೇರಿದಂತೆ 9 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಮುಂಬೈ ಪರ್ಸ್‌ನಲ್ಲಿ 32.6 ಕೋಟಿ ರುಪಾಯಿ ಹಣವಿದೆ.

6. ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು 19 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಎರಡು ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ 6 ಆಟಗಾರರನ್ನು ಮಿನಿ ಹರಾಜಿನಲ್ಲಿ ಖರೀದಿಸಲು ಅವಕಾಶವಿದೆ. ಸಿಎಸ್‌ಕೆ ಫ್ರಾಂಚೈಸಿಯ ಪರ್ಸ್‌ನಲ್ಲಿ 28.05 ಕೋಟಿ ರುಪಾಯಿ ಹಣವಿದೆ.

7. ಚೊಚ್ಚಲ ಐಪಿಎಲ್ ಸೀಸನ್ ಚಾಂಪಿಯನ್ ರಾಜಸ್ತಾನ ರಾಯಲ್ಸ್ ಫ್ರಾಂಚೈಸಿಯು 19 ಆಟಗಾರನ್ನು ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ 3 ವಿದೇಶಿ ಆಟಗಾರರು ಸೇರಿದಂತೆ 6 ಆಟಗಾರರನ್ನು ಖರೀದಿಸಲು ಅವಕಾಶವಿದೆ. ಇದೀಗ ರಾಯಲ್ಸ್ ಬಳಿ 27.05 ಕೋಟಿ ರುಪಾಯಿ ಹಣವಿದೆ.

8. ಪಂಜಾಬ್ ಕಿಂಗ್ಸ್‌ ತಂಡವು 19 ಆಟಗಾರರನ್ನು ಉಳಿಸಿಕೊಂಡಿದ್ದು, ಮಿನಿ ಹರಾಜಿನಲ್ಲಿ ಎರಡು ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ ಆರು ಆಟಗಾರರನ್ನು ಖರೀದಿಸಲು ಅವಕಾಶವಿದೆ. ಪಂಜಾಬ್ ಕಿಂಗ್ಸ್ ಬಳಿ 18.6 ಕೋಟಿ ರುಪಾಯಿ ಹಣವಿದೆ.

9. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬರೋಬ್ಬರಿ 20 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಮಿನಿ ಹರಾಜಿನಲ್ಲಿ ಎರಡು ವಿದೇಶಿ ಆಟಗಾರರು ಸೇರಿದಂತೆ ಐದು ಆಟಗಾರರನ್ನು ಖರೀದಿಸಲು ಅವಕಾಶವಿದೆ. ಆರ್‌ಸಿಬಿ ಪರ್ಸ್‌ನಲ್ಲಿ 14.15 ಕೋಟಿ ರುಪಾಯಿ ಹಣವಿದೆ.

10. ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 22 ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಮಿನಿ ಹರಾಜಿನಲ್ಲಿ ಎರಡು ವಿದೇಶಿ ಆಟಗಾರರು ಸೇರಿದಂತೆ ಮೂರು ಆಟಗಾರರನ್ನು ಖರೀದಿಸಲು ಅವಕಾಶವಿದೆ. ಗುಜರಾತ್ ಪರ್ಸ್‌ನಲ್ಲಿ ಕೇವಲ 8.75 ಕೋಟಿ ರುಪಾಯಿ ಹಣವಿದೆ.