ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 44 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ 286 ರನ್‌ಗಳ ಬೃಹತ್ ಮೊತ್ತ ಗಳಿಸಿತು. ಇಶಾನ್ ಕಿಶನ್ ಅವರ ಶತಕ (106) ಮತ್ತು ಹೆಡ್ ಅವರ 67 ರನ್‌ಗಳು ತಂಡಕ್ಕೆ ನೆರವಾದವು. ರಾಜಸ್ಥಾನ್ ರಾಯಲ್ಸ್ 242 ರನ್‌ಗಳಿಗೆ ಸೀಮಿತವಾಯಿತು. ಜುರೆಲ್ (70) ಮತ್ತು ಸ್ಯಾಮ್ಸನ್ (66) ಹೋರಾಟ ವ್ಯರ್ಥವಾಯಿತು.

ಹೈದರಾಬಾದ್‌: ಈ ವರ್ಷ ಐಪಿಎಲ್‌ನಲ್ಲಿ ಯಾವ ತಂಡ ಕಪ್‌ ಗೆಲ್ಲುತ್ತೆ ಎಂಬುದನ್ನು ಅಭಿಮಾನಿಗಳು ಊಹಿಸದಿದ್ದರೂ, ಸನ್‌ರೈಸರ್ಸ್‌ ಹೈದರಾಬಾದ್‌ ಆಕ್ರಮಣಕಾರಿ ಆಟವಾಡಿ 300ರ ಗಡಿ ದಾಟಲಿದೆ ಎಂಬುದು ಬಹುತೇಕರಿಗೆ ಖಚಿತವಾಗಿತ್ತು. ಅದಕ್ಕೆ ತಕ್ಕಂತೆ ಈ ಸಲ ತನ್ನ ಅಭಿಯಾನ ಆರಂಭಿಸಿರುವ ಹೈದ್ರಾಬಾದ್, ಟೂರ್ನಿಯ ಚೊಚ್ಚಲ ಪಂದ್ಯದಲ್ಲೇ ಬರೋಬ್ಬರಿ 286 ರನ್‌ ಕಲೆಹಾಕಿದೆ. ರನ್‌ ಮಳೆಯೇ ಹರಿದ ರಾಜಸ್ಥಾನ ರಾಯಲ್ಸ್‌ ವಿರುದ್ಧ ಭಾನುವಾರದ ಪಂದ್ಯದಲ್ಲಿ ಸನ್‌ರೈಸರ್ಸ್‌ 44 ರನ್‌ ಗೆಲುವು ಸಾಧಿಸಿದೆ.

ಸ್ಫೋಟಕ ಆಟ, 250+ ಸ್ಕೋರ್‌ ಸನ್‌ರೈಸರ್ಸ್‌ನ ಹುಟ್ಟುಗುಣ. ಅದಕ್ಕಾಗಿಯೇ ತಂಡವನ್ನು ‘ರನ್‌’ರೈಸರ್ಸ್‌ ಎಂದು ಕರೆದರೂ ತಪ್ಪಾಗಲ್ಲ. ಐಪಿಎಲ್‌ ಇತಿಹಾಸದಲ್ಲೇ 2ನೇ ಗರಿಷ್ಠ ರನ್‌ ಸೇರಿಸಿದ ತಂಡ, ರಾಜಸ್ಥಾನವನ್ನು 242 ರನ್‌ಗೆ ನಿಯಂತ್ರಿಸಿತು.

ಇದನ್ನೂ ಓದಿ: ಕೆಕೆಆರ್ ಎದುರು ಆರ್‌ಸಿಬಿ ಗೆಲ್ಲುತ್ತಿದ್ದಂತೆಯೇ ಬೆಂಗಳೂರು ತಂಡವನ್ನು ಕೊಂಡಾಡಿದ ಮಾಜಿ ಮಾಲೀಕ ವಿಜಯ್ ಮಲ್ಯ!

ದೊಡ್ಡ ಮೊತ್ತ ನೋಡಿಯೇ ಕಂಗಾಲಾದಂತಿದ್ದ ರಾಜಸ್ಥಾನ, ಆರಂಭಿಕ ಆಘಾತಕ್ಕೆ ಒಳಗಾಯಿತು. 4.1 ಓವರ್‌ಗಳಲ್ಲಿ 50 ರನ್‌ ಗಳಿಸುವಷ್ಟರಲ್ಲಿ ಪ್ರಮುಖ ಮೂವರು ಬ್ಯಾಟರ್ಸ್‌ ಪೆವಿಲಿಯನ್‌ ಸೇರಿದ್ದರು. ಯಶಸ್ವಿ ಜೈಸ್ವಾಲ್‌ 5 ಎಸೆತಕ್ಕೆ 1, ನಾಯಕ ರಿಯಾನ್ ಪರಾಗ್‌ 2 ಎಸೆತಕ್ಕೆ 4 ರನ್‌ ಗಳಿಸಿದರೆ, ನಿತೀಶ್‌ ರಾಣಾ 11 ರನ್‌ ಗಳಿಸಿ ನಿರ್ಗಮಿಸಿದರು.

ಸ್ಯಾಮ್ಸನ್‌-ಜುರೆಲ್‌ ಆಸರೆ:

ಕುಸಿದಿದ್ದ ತಂಡಕ್ಕೆ ಆಸರೆಯಾಗಿದ್ದು ಸಂಜು ಸ್ಯಾಮ್ಸನ್‌ ಹಾಗೂ ಧ್ರುವ್‌ ಜುರೆಲ್‌. ಈ ಜೋಡಿ 4ನೇ ವಿಕೆಟ್‌ಗೆ 59 ಎಸೆತಗಳಲ್ಲಿ 111 ರನ್‌ ಜೊತೆಯಾಟವಾಡಿತು. 14ನೇ ಓವರ್‌ ಕೊನೆ ಎಸೆತಕ್ಕೆ ಸ್ಯಾಮ್ಸನ್‌(37 ಎಸೆತಗಳಲ್ಲಿ 66) ಹಾಗೂ 15ನೇ ಓವರ್‌ನ 2ನೇ ಎಸೆತದಲ್ಲಿ ಜುರೆಲ್‌(35 ಎಸೆತಗಳಲ್ಲಿ 70) ಔಟಾಗುವುದರೊಂದಿಗೆ ತಂಡದ ಹೋರಾಟಕ್ಕೆ ತೆರೆ ಬಿತ್ತು. ಕೊನೆಯಲ್ಲಿ ಶಿಮ್ರೋನ್‌ ಹೆಟ್ಮೇಯರ್‌ 23 ಎಸೆತಗಳಲ್ಲಿ ಔಟಾಗದೆ 42, ಶುಭಂ ದುಬೆ 11 ಎಸೆತಗಳಲ್ಲಿ ಔಟಾಗದೆ 34 ರನ್‌ ಸಿಡಿಸಿ ಸೋಲಿನ ಅಂತರ ತಗ್ಗಿಸಿದರು.

ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ಗುಡುಗಿದ ಆರೆಂಜ್ ಆರ್ಮಿ; ಇಶಾನ್ ಕಿಶನ್ ಆರ್ಭಟಕ್ಕೆ ರಾಯಲ್ಸ್ ಕಂಗಾಲು!

ಬೌಂಡರಿ-ಸಿಕ್ಸರ್‌ ಸುರಿಮಳೆ: ಇದಕ್ಕೂ ಮುನ್ನ ಟಾಸ್‌ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಸನ್‌ರೈಸರ್ಸ್‌, ತನ್ನ ಎಂದಿನ ಆಕ್ರಮಣಕಾರಿ ಆಟವಾಡಿತು. ಅಭಿಷೇಕ್‌ ಶರ್ಮಾ(24) ವಿಕೆಟ್‌ ಬೇಗನೇ ಕಳೆದುಕೊಂಡರೂ ಪವರ್‌-ಪ್ಲೇನಲ್ಲೇ ತಂಡ 94 ರನ್‌ ಸಿಡಿಸಿತು. 31 ಎಸೆತಗಳಲ್ಲಿ 9 ಬೌಂಡರಿ, 3 ಸಿಕ್ಸರ್‌ನೊಂದಿಗೆ 67 ರನ್‌ ಸಿಡಿಸಿದ ಹೆಡ್‌, 10ನೇ ಓವರ್‌ನಲ್ಲಿ ನಿರ್ಗಮಿಸಿದರು. ಆದರೆ ತಂಡದ ರನ್‌ ವೇಗ ಕಡಿಮೆ ಆಗಲೇ ಇಲ್ಲ.

ಇಶಾನ್‌ ಕಿಶನ್‌ ಆರ್ಭಟಿಸಿ ರಾಜಸ್ಥಾನ ಬೌಲರ್‌ಗಳ ಬೆವರಿಳಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಇಶಾನ್‌, 47 ಎಸೆತಗಳಲ್ಲಿ 11 ಬೌಂಡರಿ, 6 ಸಿಕ್ಸರ್‌ನೊಂದಿಗೆ ಔಟಾಗದೆ 106 ರನ್‌ ಸಿಡಿಸಿದರು. ಇದು ಐಪಿಎಲ್‌ನಲ್ಲಿ ಅವರ ಚೊಚ್ಚಲ ಶತಕ. ಅವರಿಗೆ ಉತ್ತಮ ಬೆಂಬಲ ನೀಡಿದ ನಿತೀಶ್‌ ಕುಮಾರ್ 15 ಎಸೆತಕ್ಕೆ 30, ಹೈನ್ರಿಚ್‌ ಕ್ಲಾಸೆನ್‌ 14 ಎಸೆತಕ್ಕೆ 34 ರನ್‌ ಸಿಡಿಸಿ, ತಂಡವನ್ನು 280ರ ಗಡಿ ದಾಟಿಸಿದರು. ತಂಡದ ಐವರು ಬೌಲರ್ಸ್‌ ತಲಾ 44ಕ್ಕಿಂತ ಹೆಚ್ಚು ರನ್‌ ಬಿಟ್ಟುಕೊಟ್ಟರು.

ಸ್ಕೋರ್: ಸನ್‌ರೈಸರ್ಸ್‌ 20 ಓವರಲ್ಲಿ 286/6 (ಇಶಾನ್‌ 106, ಹೆಡ್‌ 67, ಕ್ಲಾಸೆನ್‌ 34, ತುಷಾರ್‌ 3-44), ರಾಜಸ್ಥಾನ 20 ಓವರಲ್ಲಿ 242/6 (ಜುರೆಲ್‌ 70, ಸ್ಯಾಮ್ಸನ್‌ 66, ಹೆಟ್ಮೇಯರ್‌ 42, ಹರ್ಷಲ್‌ 2-34)

ಪಂದ್ಯಶ್ರೇಷ್ಠ: ಇಶಾನ್‌ ಕಿಶನ್‌.

ಐಪಿಎಲ್‌ನ ಗರಿಷ್ಠ ಸ್ಕೋರ್

ತಂಡ ಸ್ಕೋರ್‌ ಎದುರಾಳಿ ವರ್ಷ

ಸನ್‌ರೈಸರ್ಸ್‌ 287/3 ಆರ್‌ಸಿಬಿ 2024

ಸನ್‌ರೈಸರ್ಸ್‌ 286/6 ರಾಜಸ್ಥಾನ 2025

ಸನ್‌ರೈಸರ್ಸ್‌ 277/3 ಮುಂಬೈ 2024

ಕೋಲ್ಕತಾ 272/7 ಡೆಲ್ಲಿ 2024

ಸನ್‌ರೈಸರ್ಸ್‌ 266/7 ಡೆಲ್ಲಿ 2024

ಹೈದರಾಬಾದ್‌ ಪರ ಶತಕ: ಇಶಾನ್‌ ಕಿಶನ್‌ ಭಾರತದ ಮೊದಲಿಗ

ಇಶಾನ್‌ ಕಿಶನ್‌ ಐಪಿಎಲ್‌ನಲ್ಲಿ ಹೈದರಾಬಾದ್ ಫ್ರಾಂಚೈಸಿ(ಸನ್‌ರೈಸರ್ಸ್‌/ಡೆಕ್ಕನ್ ಚಾರ್ಜರ್ಸ್‌) ಪರ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್‌. ಈ ಮೊದಲು ಸೈಮಂಡ್ಸ್‌, ಗಿಲ್‌ಕ್ರಿಸ್ಟ್‌, ವಾರ್ನರ್‌, ಬೇರ್‌ಸ್ಟೋವ್‌, ಬ್ರೂಕ್‌, ಕ್ಲಾಸೆನ್‌, ಹೆಡ್‌ ಶತಕ ಸಿಡಿಸಿದ್ದಾರೆ.

ಐಪಿಎಲ್‌ ಪಂದ್ಯದಲ್ಲಿ 2ನೇ ಗರಿಷ್ಠ ಸ್ಕೋರ್‌

ಸನ್‌ರೈಸರ್ಸ್‌ ಹಾಗೂ ರಾಜಸ್ಥಾನ ಒಟ್ಟಾಗಿ 528 ರನ್‌ ಕಲೆಹಾಕಿದವು. ಇದು ಟಿ20 ಪಂದ್ಯವೊಂದರಲ್ಲಿ 2ನೇ ಗರಿಷ್ಠ. ಕಳೆದ ವರ್ಷ ಸನ್‌ರೈಸರ್ಸ್‌ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ಒಟ್ಟು 549 ರನ್‌ ಹರಿದುಬಂದಿದ್ದವು.