ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಐಪಿಎಲ್ ಪಂದ್ಯಗಳನ್ನು ಪುನಾರಂಭಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ಆಯಾಯ ನಗರಗಳಲ್ಲೇ ಪಂದ್ಯಗಳು ನಡೆಯುವ ಸಾಧ್ಯತೆಗಳಿದ್ದು, ಮೇ 15ರಿಂದ ಪಂದ್ಯಗಳು ಆರಂಭವಾಗಬಹುದು.

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದ್ದ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಸ್ಥಗಿತಗೊಳಿಸಲಾಗಿದ್ದ ಐಪಿಎಲ್ ಪಂದ್ಯಗಳನ್ನು ಪುನಾರಂಭಿಸಲು ಬಿಸಿಸಿಐ ಸಿದ್ಧತೆ ಆರಂಭಿಸಿದೆ. ಪಂದ್ಯಗಳು ಆಯಾಯ ನಗರಗಳಲ್ಲೇ ನಡೆಯುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಗುರುವಾರ ಡೆಲ್ಲಿ ಕ್ಯಾಪಿಟಲ್ಸ್‌-ಪಂಜಾಬ್ ಕಿಂಗ್ಸ್‌ (Delhi Capitals vs Punjab Kings) ನಡುವಿನ ಪಂದ್ಯ ಅರ್ಧಕ್ಕೇ ಸ್ಥಗಿತಗೊಂಡ ಬಳಿಕ ಶುಕ್ರವಾರ ಇಡೀ ಟೂರ್ನಿಯನ್ನೇ ಮೊಟಕುಗೊಳಿಸಲಾಗಿತ್ತು. ಆಟಗಾರರು, ಪ್ರೇಕ್ಷಕರ ಸುರಕ್ಷತೆ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿಯಾದರೆ ಟೂರ್ನಿ ಪುನಾರಂಭಿಸಲು ಬಿಸಿಸಿಐ ಕಾಯುತ್ತಿದೆ.

ಉತ್ತರ ಭಾರತದ ಬಹುತೇಕ ಕ್ರೀಡಾಂಗಣಗಳು ಪಾಕಿಸ್ತಾನದ ಗಡಿ ಭಾಗ ಅಥವಾ ಅದರ ಹತ್ತಿರದಲ್ಲೇ ಇರುವುದರಿಂದ ಐಪಿಎಲ್ ಪಂದ್ಯಗಳನ್ನು ದಕ್ಷಿಣ ಭಾರತದ ನಗರಗಳಿಗೆ ಸ್ಥಳಾಂತರಿಸುವುದು ಬಿಸಿಸಿಐ (BCCI) ಮುಂದಿರುವ ಆಯ್ಕೆಗಳಲ್ಲಿ ಒಂದಾಗಿತ್ತು. ಆದರೆ ಕದನ ವಿರಾಮ ಜಾರಿಯಾದರೆ ಗಡಿಗೆ ತೀರಾ ಹತ್ತಿರದಲ್ಲಿರುವ ಧರ್ಮಶಾಲಾ(ಹಿಮಾಚಲ ಪ್ರದೇಶ) ಹೊರತುಪಡಿಸಿ ದೇಶದ ಇತರ 12 ಕ್ರೀಡಾಂಗಣಗಳಲ್ಲೂ ಪಂದ್ಯಗಳನ್ನು ಪುನಾರಂಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಈಗಾಗಲೇ ಆಯಾಯ ರಾಜ್ಯ ಕ್ರಿಕೆಟ್ ಸಂಸ್ಥೆಗಳು, ಫ್ರಾಂಚೈಸಿಗಳ ಜೊತೆ ಐಪಿಎಲ್ ಆಡಳಿತ ಮಂಡಳಿ ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಮಾ.22ಕ್ಕೆ ಆರಂಭಗೊಂಡ ಟೂರ್ನಿಯಲ್ಲಿ 58 ಪಂದ್ಯಗಳು ನಡೆದಿದೆ. ಲೀಗ್ ಹಂತದಲ್ಲಿ 12 ಹಾಗೂ ಪ್ಲೇ-ಆಫ್‌ನ 3 ಹಾಗೂ ಒಂದು ಫೈನಲ್ ಸೇರಿ ಒಟ್ಟು 16 ಪಂದ್ಯಗಳು ಬಾಕಿಯಿವೆ. ಮೇ 25ಕ್ಕೆ ಟೂರ್ನಿ ಕೊನೆಗೊಳ್ಳಬೇಕಿತ್ತು.

ಇಂದು ಬಿಸಿಸಿಐ ಮಹತ್ವದ ಸಭೆ
ಟೂರ್ನಿ ಪುನಾರಂಭದ ಬಗ್ಗೆ ಬಿಸಿಸಿಐ ಭಾನುವಾರ ಮಹತ್ವದ ಸಭೆ ನಡೆಸಲಿದೆ. ಈ ಬಗ್ಗೆ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ. 'ಯುದ್ಧ ನಿಂತಿದೆ. ಈಗಿನ ಪರಿಸ್ಥಿತಿ ಬಗ್ಗೆ ಬಿಸಿಸಿಐ ಅಧಿಕಾರಿಗಳು, ಐಪಿಎಲ್ ಆಡಳಿತ ಮಂಡಳಿ ಭಾನುವಾರ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಿದೆ. ಟೂರ್ನಿ ಯಾವಾಗ ನಡೆಸುವುದು ಸೂಕ್ತ ಎಂದು ಅವಲೋಕಿಸಿ, ವೇಳಾಪಟ್ಟಿ ಸಿದ್ಧಪಡಿಸುತ್ತೇವೆ' ಎಂದಿದ್ದಾರೆ.

ಸರ್ಕಾರದ ಜೊತೆ ಚರ್ಚೆ ಬಳಿಕ ನಿರ್ಧಾರ: ಐಪಿಎಲ್ ಮುಖ್ಯಸ್ಥ
ಐಪಿಎಲ್ ಪುನಾರಂಭ ಬಗ್ಗೆ ಟೂರ್ನಿಯ ಮುಖ್ಯಸ್ಥ ಅರುಣ್ ಧುಮಾಲ್ ಪ್ರತಿಕ್ರಿಯಿಸಿದ್ದು, 'ನಾವು ಸರ್ಕಾರದೊಂದಿಗೆ ಸಮಾಲೋಚಿಸಿ ನಿರ್ಧರಿಸುತ್ತೇವೆ' ಎಂದಿದ್ದಾರೆ. 'ಕದನ ವಿರಾಮ ಘೋಷಣೆಯಾಗಿದೆ. ಹೀಗಾಗಿ ಐಪಿಎಲ್ ಪುನಾರಂಭಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ಟೂರ್ನಿ ಆರಂಭಿಸಲು ಸಾಧ್ಯವಾದರೆ ದಿನಾಂಕ, ಸ್ಥಳ ನಿರ್ಧರಿಸಬೇಕಾಗುತ್ತದೆ. ಈ ಬಗ್ಗೆ ಮಾಲೀಕರು, ಪ್ರಸಾರಕರೊಂದಿಗೆ ಮಾತನಾಡುತ್ತೇವೆ' ಎಂದಿದ್ದಾರೆ.

ಮೇ 15/16ರಿಂದಲೇ ಶುರು?
ಶುಕ್ರವಾರ ಸ್ಥಗಿತಗೊಂಡಿದ್ದ ಟೂರ್ನಿಯ ಪಂದ್ಯಗಳು ಮೇ15 ಅಥವಾ 16ರಿಂದಲೇ ಪುನಾರಂಭಗೊಳ್ಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಮೊದಲು ಮೇ 25ಕ್ಕೆ ಫೈನಲ್ ಪಂದ್ಯ ನಿಗದಿಯಾಗಿತ್ತು. ಸದ್ಯ ಕೆಲ ದಿನಗಳ ವಿರಾಮದಿಂದಾಗಿ ಮೇ ಕೊನೆಗೆ ಅಥವಾ ಜೂನ್ ಮೊದಲ ವಾರ ಟೂರ್ನಿ ಕೊನೆಗೊಳ್ಳಬಹುದು.

ಡೆಲ್ಲಿ ಕ್ಯಾಪಿಟಲ್ಸ್‌-ಪಂಜಾಬ್ ಕಿಂಗ್ಸ್ ನಡುವೆ ಮರು ಪಂದ್ಯ?
ಗುರುವಾರ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಈ ಪಂದ್ಯ ರದ್ದುಗೊಳಿಸಲಾಗಿದೆಯೇ ಅಥವಾ ಮತ್ತೆ ಆಡಿಸಲಾಗುತ್ತದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಎರಡು ತಂಡಗಳಿಗೆ ಅಂಕ ಹಂಚಿಕೆ ಕೂಡಾ ಆಗದ ಹಿನ್ನೆಲೆಯಲ್ಲಿ, ಪಂದ್ಯವನ್ನು ಮತ್ತೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.