Asianet Suvarna News Asianet Suvarna News

ICC Womens Cricketer of the Year: ಐಸಿಸಿ ವರ್ಷದ ಆಟಗಾರ್ತಿಯಾಗಿ ಸ್ಮೃತಿ ಮಂಧನಾ ಆಯ್ಕೆ

* ಭಾರತ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧನಾ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

* 2021ನೇ ಸಾಲಿನ ಐಸಿಸಿ ವರ್ಷದ ಕ್ರಿಕೆಟ್ ಆಟಗಾರ್ತಿ ಮಂಧನಾ ಪಾಲು

* ದಾಖಲೆಯ ಎರಡನೇ ಬಾರಿಗೆ ಪ್ರಶಸ್ತಿಗೆ ಪಾತ್ರರಾದ ಎಡಗೈ ಬ್ಯಾಟರ್

Indian opener Smriti Mandhana named ICC Womens Cricketer of the Year for 2021 kvn
Author
Bengaluru, First Published Jan 24, 2022, 6:00 PM IST

ದುಬೈ(ಜ.24): ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಹಾಗೂ ಟಿ20 ತಂಡದ ಉಪನಾಯಕಿ ಸ್ಮೃತಿ ಮಂಧನಾ (Smriti Mandhana) 2021ನೇ ಸಾಲಿನ ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ (ICC Women's Cricketer of the Year for 2021) ಪಾತ್ರರಾಗಿದ್ದಾರೆ. ಈ ಮೂಲಕ ಸ್ಮೃತಿ ಮಂಧನಾ ಎರಡು ಬಾರಿ ಈ ಪ್ರತಿಷ್ಠಿತ ಪ್ರಶಸ್ತಿ ಜಯಿಸಿದ ಭಾರತದ ಏಕೈಕ ಆಟಗಾರ್ತಿ ಎನ್ನುವ ಹಿರಿಮೆಗೆ ಮಂಧನಾ ಪಾತ್ರರಾಗಿದ್ದಾರೆ. ಈ ಮೊದಲು 2018ರಲ್ಲಿ ಮೊದಲ ಬಾರಿಗೆ ಸ್ಮೃತಿ ಮಂಧನಾ ಐಸಿಸಿ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಪಾತ್ರರಾಗಿದ್ದರು.

ಭಾರತ ಮಹಿಳಾ ಕ್ರಿಕೆಟ್ ತಂಡದ (Indian Women's Cricket Team) ಎಡಗೈ ಬ್ಯಾಟರ್‌ ಮಂಧನಾ ಕಳೆದೊಂದು ವರ್ಷದಲ್ಲಿ 22 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 38.86ರ ಬ್ಯಾಟಿಂಗ್ ಸರಾಸರಿಯಲ್ಲಿ ಒಂದು ಶತಕ ಹಾಗೂ 5 ಅರ್ಧಶತಕ ಸಹಿತ 855 ರನ್‌ ಬಾರಿಸಿದ್ದಾರೆ. ಈ ವರ್ಷ ಭಾರತ ಮಹಿಳಾ ಕ್ರಿಕೆಟ್ ತಂಡವು ಸಾಧಾರಣ ಪ್ರದರ್ಶನ ತೋರಿದರೂ ಸಹಾ, ಭಾರತ ತಂಡದ ಗೆಲುವಿನಲ್ಲಿ ಸ್ಮೃತಿ ಮಂಧನಾ ಅವರ ಬ್ಯಾಟಿಂಗ್ ಮಹತ್ವದ ಪಾತ್ರ ವಹಿಸಿತ್ತು. ಇಂಗ್ಲೆಂಡ್ ಪ್ರವಾಸದಲ್ಲಿ ನಡೆದ ಏಕೈಕ ಟೆಸ್ಟ್ ಪಂದ್ಯದಲ್ಲಿ ಮಂಧನಾ ಸಮಯೋಚಿತ 78 ರನ್ ರನ್ ಬಾರಿಸಿದ್ದರು. ಆ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. 

ಇನ್ನು ಆಸ್ಟ್ರೇಲಿಯಾದಲ್ಲಿ ನಡೆದ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್‌ (Pink Ball Test) ಪಂದ್ಯದಲ್ಲಿಯೂ ಸ್ಮೃತಿ ಮಂಧನಾ ಅಮೋಘ ಪ್ರದರ್ಶನದ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿ ಮಿಂಚಿದ್ದರು. ಆಸ್ಟ್ರೇಲಿಯಾ ಎದುರಿನ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಮಂಧನಾ 216 ಎಸೆತಗಳನ್ನು ಎದುರಿಸಿ 22 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಆಕರ್ಷಕ 127 ರನ್‌ ಬಾರಿಸಿದ್ದರು. ಈ ಟೆಸ್ಟ್ ಪಂದ್ಯ ಕೂಡಾ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು. ಆದರೆ ಈ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರ್ತಿಯರು ತೋರಿದ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಸ್ಮೃತಿ ಮಂಧನಾ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದರು.

ICC T20I cricketers of the year: ರಿಜ್ವಾನ್, ಬ್ಯುಮೊಂಟ್ ಐಸಿಸಿ ಟಿ20 ವರ್ಷದ ಆಟಗಾರರು..!

ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 124 ರನ್ ಬಾರಿಸುವ ಮೂಲಕ ಮಂಧನಾ ಭಾರತ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದರು. ಇನ್ನು 3 ಪಂದ್ಯಗಳ ಟಿ20 ಸರಣಿಯಲ್ಲಿ 70 ರನ್ ಗಳಿಸುವ ಮೂಲಕ ಭಾರತ ಪರ ಎರಡನೇ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು.

ಸ್ಮೃತಿ ಮಂಧನಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲದೇ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ಲೀಗ್‌ಗಳಲ್ಲೂ ಸಹಾ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. 2021-22ನೇ ಸಾಲಿನ ಬಿಗ್‌ಬ್ಯಾಶ್ ಲೀಗ್ (Big Bash League) ಟೂರ್ನಿಯಲ್ಲಿ ಮಂಧನಾ 13 ಇನಿಂಗ್ಸ್‌ಗಳಿಂದ 34.27ರ ಬ್ಯಾಟಿಂಗ್ ಸರಾಸರಿಯಲ್ಲಿ 377 ರನ್ ಚಚ್ಚಿದ್ದರು. ಇನ್ನು ಇಂಗ್ಲೆಂಡ್‌ನಲ್ಲಿ ನಡೆದ ಚೊಚ್ಚಲ ಆವೃತ್ತಿಯ 'ದಿ ಹಂಡ್ರೆಡ್' ಕ್ರಿಕೆಟ್ ಟೂರ್ನಿಯಲ್ಲಿ ಸ್ಮೃತಿ ಮಂಧನಾ 7 ಪಂದ್ಯಗಳನ್ನಾಡಿ 167 ರನ್‌ ಬಾರಿಸಿದ್ದರು.

ಸ್ಮೃತಿ ಮಂಧಾನ ಫೆಬ್ರವರಿ ತಿಂಗಳಿನಲ್ಲಿ ಭಾರತ ಮಹಿಳಾ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ಮಹಿಳಾ ತಂಡವು ಏಕೈಕ ಟಿ20 ಹಾಗೂ 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಇದಾದ ಬಳಿಕ ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಮಂಧನಾ ಭಾರತ ತಂಡದ ಪರ ಆರಂಭಿಕ ಆಟಗಾರ್ತಿಯಾಗಿ ಅಬ್ಬರಿಸಲು ಎದುರು ನೋಡುತ್ತಿದ್ದಾರೆ.

ಇನ್ನು ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾಕಿಸ್ತಾನದ ವೇಗದ ಬೌಲರ್‌ ಶಾಹೀನ್ ಅಫ್ರಿದಿ ಪಾತ್ರರಾಗಿದ್ದಾರೆ. 2021ರಲ್ಲಿ ಶಾಹೀನ್ ಅಫ್ರಿದಿ 36 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 78 ವಿಕೆಟ್‌ ಕಬಳಿಸಿದ್ದಾರೆ.

Follow Us:
Download App:
  • android
  • ios