ನವದೆಹಲಿ(ಮೇ.13): ಕೋವಿಡ್ ಎರಡನೇ ಅಲೆಗೆ ಭಾರತ ತತ್ತರಿಸಿ ಹೋಗಿದೆ. ಪ್ರತಿನಿತ್ಯ 3 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಕೊರೋನಾ ಹೆಮ್ಮಾರಿಗೆ ದಿನಂಪ್ರತಿ ಸಾವಿರಾರು ಜನ ಬಲಿಯಾಗುತ್ತಿದ್ದಾರೆ.

ಇಂತಹ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಒಂದು ಸರ್ಕಾರ ಮಾಡಬಹುದಾದ ಕೆಲಸಗಳನ್ನು ಓರ್ವ ನಟ ಹಲವರ ಪಾಲಿಗೆ ರಿಯಲ್ ಹೀರೋ ಎನಿಸಿದ್ದಾರೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ನಟ ಸೋನು ಸೂದ್‌ ಹಲವರ ಪಾಲಿಗೆ ಅಕ್ಷರಶಃ ಆಪತ್ಬಾಂಧವನಾಗಿ ನಿಂತಿದ್ದಾರೆ. 

ರೈನಾ ಕುಟುಂಬಕ್ಕೆ 10 ನಿಮಿಷದೊಳಗೆ ಆಕ್ಸಿಜನ್ ಸಿಲಿಂಡರ್ ಒದಗಿಸಿದ ಸೋನು ಸೂದ್

ಇತ್ತೀಚೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ತುರ್ತು ಆಕ್ಸಿಜನ್ ಸಿಲಿಂಡರ್ ಒದಗಿಸಿದ್ದ ಸೋನು ಸೂದ್ ಇದೀಗ ಟೀಂ ಇಂಡಿಯಾ ಮತ್ತೋರ್ವ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಚಿತ್ರದುರ್ಗದಲ್ಲಿನ ವ್ಯಕ್ತಿಗೆ ತುರ್ತಾಗಿ ರೆಮ್‌ಡೆಸಿವಿರ್ ಅಗತ್ಯವಿದೆ ಎಂದು ಮನವಿ ಮಾಡಿಕೊಂಡಿದ್ದರು. ಭಜ್ಜಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸೋನು ಸೂದ್, ಔಷಧವನ್ನು ತಲುಪಿಸಲಾಗುವುದು ಎಂದಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಕೋಲ್ಕತ ನೈಟ್‌ ರೈಡರ್ಸ್‌ ಸ್ಪಿನ್ನರ್ ಹರ್ಭಜನ್ ಸಿಂಗ್, ಚಿತ್ರದುರ್ಗದ ಬಸಪ್ಪ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬರಿಗೆ ತುರ್ತಾಗಿ ಒಂದು ರೆಮ್‌ಡೆಸಿವಿರ್ ಇಂಜೆಕ್ಷನ್ ಅಗತ್ಯವಿದೆ. ದಯವಿಟ್ಟು ಈ ಕೆಳಕಂಡ ನಂಬರ್ ಸಂಪರ್ಕಿಸಿ ನೆರವಾಗಿ ಎಂದು ಹರ್ಭಜನ್ ಸಿಂಗ್ ಟ್ವೀಟ್‌ ಮಾಡಿದ್ದರು.

ಹರ್ಭಜನ್ ಸಿಂಗ್ ಟ್ವೀಟ್ ಗಮನಿಸಿದ ನಟ ಸೋನು ಸೂದ್, ಭಜ್ಜಿ, ಔಷಧಿಯನ್ನು ತಲುಪಿಸಲಾಗುತ್ತದೆ ಎಂದು ಟ್ವೀಟ್‌ ಮಾಡುವ ಮೂಲಕ ನೆರವಾಗಿದ್ದಾರೆ.

ಬಳಿಕ ಹರ್ಭಜನ್ ಸಿಂಗ್ ಬಾಲಿವುಡ್ ನಟ ಸೋನು ಸೂದ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದು, ಇಂತಹ ಕೆಲಸ ಮಾಡಲು ದೇವರು ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona