ರೈನಾ ಕುಟುಂಬಕ್ಕೆ 10 ನಿಮಿಷದೊಳಗೆ ಆಕ್ಸಿಜನ್ ಸಿಲಿಂಡರ್ ಒದಗಿಸಿದ ಸೋನು ಸೂದ್
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೆ ಕೇವಲ 10 ನಿಮಿಷದೊಳಗಾಗಿ ಆಕ್ಸಿಜನ್ ಸಿಲಿಂಡರ್ ಪೂರೈಸುವ ಮೂಲಕ ಸೋನು ಸೂದ್ ಮತ್ತೊಮ್ಮೆ ಹೀರೋ ಆಗಿ ಹೊರಹೊಮ್ಮಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ನವದೆಹಲಿ(ಮೇ.07): ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಆಪತ್ಭಾಂಧವನಾಗಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಕುಟುಂಬಕ್ಕೂ ಆಸರೆಯಾಗುವ ಮೂಲಕ ಮತ್ತೊಮ್ಮೆ ಜಗಮೆಚ್ಚುವ ಕೆಲಸ ಮಾಡಿದ್ದಾರೆ. ಸುರೇಶ್ ರೈನಾ ಟ್ವೀಟ್ ಮೂಲಕ ತಮ್ಮ 65 ವರ್ಷದ ಆಂಟಿಗೆ ಅಕ್ಸಿಜನ್ ಸಿಲಿಂಡರ್‌ನ ಅಗತ್ಯವಿದೆ, ದಯವಿಟ್ಟು ವ್ಯವಸ್ಥೆ ಮಾಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಳಿ ಮನವಿ ಮಾಡಿಕೊಂಡಿದ್ದರು.
ತುರ್ತಾಗಿ ಮೀರತ್‌ನಲ್ಲಿರುವ ನನ್ನ ಚಿಕ್ಕಮ್ಮ ಆಕ್ಸಿಜನ್ ಸಿಲಿಂಡರ್‌ನ ಅಗತ್ಯವಿದೆ. 65 ವರ್ಷದ ನನ್ನ ಚಿಕ್ಕಮ್ಮ ಶ್ವಾಸಕೋಶ ಸೋಂಕಿಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋವಿಡ್ ಪಾಸಿಟಿವ್ ಆಗಿರುವ ಅವರಿಗೆ ದಯವಿಟ್ಟು ಆಕ್ಸಿಜನ್ ಸಿಲಿಂಡರ್ ನೀಡಿ ನೆರವಾಗಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಟ್ವೀಟ್‌ನಲ್ಲಿ ಟ್ಯಾಗ್ ಮಾಡಿದ್ದರು.
ಇದಕ್ಕೆ ಟ್ವೀಟರ್ ಮೂಲಕವೇ ಪ್ರತಿಕ್ರಿಯಿಸಿರುವ ಸೋನು ಸೂದ್, ಆಕ್ಸಿಜನ್ ಸಿಲಿಂಡರ್ ಇನ್ನು ಕೇವಲ 10 ನಿಮಿಷದೊಳಗಾಗಿ ತಲುಪಲಿವೆ ಎಂದು ಟ್ವೀಟ್ ಮಾಡಿದ್ದಾರೆ.
ಬಯೋ ಬಬಲ್ ಲೋಪ ಹೇಗಾಯ್ತು ತಿಳಿಯುತ್ತಿಲ್ಲ: ಸೌರವ್ ಗಂಗೂಲಿ
ಇದಾಗಿ ಕೆಲವೇ ಹೊತ್ತಿನಲ್ಲಿ ಪ್ರತಿಕ್ರಿಯಿಸಿರುವ ಸುರೇಶ್ ರೈನಾ, ನಿಮ್ಮ ಸಹಾಯಕ್ಕೆ ಅನಂತ ಧನ್ಯವಾದಗಳು. ತುಂಬಾ ಉಪಕಾರವಾಯಿತು ಎಂದು ಸಿಎಸ್‌ಕೆ ಸ್ಟಾರ್ ಕ್ರಿಕೆಟಿಗ ಟ್ವೀಟ್ ಮಾಡಿದ್ದಾರೆ.
2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದ ಸುರೇಶ್ ರೈನಾ, ಇತ್ತೀಚೆಗಷ್ಟೇ ಮುಂದೂಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದರು. ಮಿಸ್ಟರ್ ಐಪಿಎಲ್ ಖ್ಯಾತಿಯ ರೈನಾ, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 7 ಪಂದ್ಯಗಳನ್ನಾಡಿ ಕೇವಲ 123 ರನ್‌ಗಳನ್ನು ಬಾರಿಸಿದ್ದರು.
ದೇಶಾದ್ಯಂತ ಎದುರಾಗಿರುವ ಕೋವಿಡ್ ಎರಡನೇ ಅಲೆಯ ವಿರುದ್ದ ಸೋನು ಸೂದ್ ಟೊಂಕಕಟ್ಟಿ ನಿಂತಿದ್ದಾರೆ. ಸೋನು ಸೂದ್ ಫೌಂಡೇಶನ್ ಮೂಲಕ ಪ್ಲಾಸ್ಮಾ, ರೆಮ್‌ಡಿಸಿವರ್ ಇಂಜೆಕ್ಷನ್, ಆಸ್ಪತ್ರೆಗಳಿಗೆ ಬೆಡ್ ಹಾಗೂ ಆಕ್ಸಿಜನ್ ಸಿಲೆಂಡರ್ ಒದಗಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona