ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ. ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವದ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಉತ್ತಮ ಗೆಲುವಿನ ದಾಖಲೆ ಹೊಂದಿದ್ದು, ದೊಡ್ಡ ಅಂತರದ ಜಯದೊಂದಿಗೆ ಶುಭಾರಂಭ ಮಾಡುವ ಗುರಿ ಹೊಂದಿದೆ.

ಬರ್ಮಿಂಗ್‌ಹ್ಯಾಮ್‌: ಈ ಬಾರಿ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಲು ಕಾಯುತ್ತಿರುವ ಭಾರತ ತಂಡ, ತನ್ನ ಮೊದಲ ಪಂದ್ಯದಲ್ಲಿ ಭಾನುವಾರ ಬದ್ಧವೈರಿ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ.

ಕಳೆದ ವರ್ಷ ಏಕದಿನ ವಿಶ್ವಕಪ್‌ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಬರ ನೀಗಿಸಿಕೊಂಡಿದ್ದ ಹರ್ಮನ್‌ಪ್ರೀತ್‌ ಕೌರ್‌ ಪಡೆ ಈಗ ಟಿ20 ವಿಶ್ವಕಪ್‌ ಮೇಲೆ ಕಣ್ಣಿಟ್ಟಿದೆ. ಭಾರತಕ್ಕೆ ಮುಂದಿನ ಪಂದ್ಯಗಳಲ್ಲಿ ಬಲಿಷ್ಠ ತಂಡಗಳ ಸವಾಲು ಎದುರಾಗಲಿರುವುದರಿಂದ ಪಾಕ್‌ ವಿರುದ್ಧ ದೊಡ್ಡ ಅಂತರದಲ್ಲಿ ಗೆಲ್ಲುವತ್ತ ಚಿತ್ತ ಹರಿಸಿದೆ. 

ಪಾಕ್‌ ಎದುರು ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಭಾರತ

ಟಿ20ಯಲ್ಲಿ ಪಾಕ್‌ ವಿರುದ್ಧ ಭಾರತ 13-3 ಗೆಲುವಿನ ದಾಖಲೆ ಹೊಂದಿದ್ದು, ಇದೇ ವಿಶ್ವಾಸದಲ್ಲಿ ಭಾನುವಾರದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ತಂಡದಲ್ಲಿ ಸ್ಮೃತಿ ಮಂಧನಾ, ಶಫಾಲಿ, ಜೆಮಿಮಾ, ರಿಚಾ, ದೀಪ್ತಿ, ಕನ್ನಡತಿ ಶ್ರೇಯಾಂಕ ಸೇರಿದಂತೆ ಪ್ರಮುಖರಿದ್ದಾರೆ. ಮತ್ತೊಂದೆಡೆ ಫಾತಿಮಾ ಸನಾ ನಾಯಕತ್ವದಲ್ಲಿ ಆಡಲಿರುವ ಪಾಕ್‌ ತಂಡ ಭಾರತಕ್ಕೆ ಸೋಲುಣಿಸುವ ಮೂಲಕ ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಆಚ್ಚರಿಯ ಫಲಿತಾಂಶ ನೀಡಲು ಕಾಯುತ್ತಿದೆ.

ಪಂದ್ಯ ಆರಂಭ: ಸಂಜೆ 7 ಗಂಟೆಗೆ

ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌

ವ್ಯಾಟ್‌ ಶತಕ, ಶ್ರೀಲಂಕಾ ವಿರುದ್ಧ ಇಂಗ್ಲೆಂಡ್‌ಗೆ 87 ರನ್‌ಗಳ ಗೆಲುವು

ಬರ್ಮಿಂಗ್‌ಹ್ಯಾಮ್‌: ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ ಭರ್ಜರಿ ಶುಭಾರಂಭ ಮಾಡಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 87 ರನ್‌ ಭರ್ಜರಿ ಜಯಗಳಿಸಿತು.

ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಕೇವಲ 1 ವಿಕೆಟ್‌ ನಷ್ಟದಲ್ಲಿ 219 ರನ್‌ ಕಲೆಹಾಕಿತು. ಆರಂಭಿಕ ಆಟಗಾರ್ತಿ ಡ್ಯಾನಿ ವ್ಯಾಟ್‌ 62 ಎಸೆತಗಳಲ್ಲಿ ಔಟಾಗದೆ 105 ರನ್‌ ಸಿಡಿಸಿದರು. ಆ್ಯಮಿ ಜಾನ್ಸ್‌ 38 ಎಸೆತಕ್ಕೆ 53, ನಾಯಕಿ ನ್ಯಾಟ್‌ ಸ್ಕೀವರ್‌ ಬ್ರಂಟ್‌ 22 ಎಸೆತಕ್ಕೆ ಔಟಾಗದೆ 46 ರನ್‌ ಬಾರಿಸಿದರು. ಬೃಹತ್‌ ಗುರಿ ಬೆನ್ನತ್ತಿದ ಲಂಕಾ 20 ಓವರ್‌ಗಳಲ್ಲಿ 132 ರನ್‌ಗೆ ಆಲೌಟಾಯಿತು. ನೀಲಕ್ಷಿಕಾ ಸಿಲ್ವಾ 39, ಹರ್ಷಿತಾ 29 ರನ್ ಗಳಿಸಿದರು. ಫ್ರೆಯಾ ಕೆಂಪ್‌ 4 ಓವರ್‌ಗಳಲ್ಲಿ 22 ರನ್‌ ನೀಡಿ 4 ವಿಕೆಟ್‌ ಕಬಳಿಸಿದರು.

ಐರ್ಲೆಂಡ್‌ ವಿರುದ್ಧ ಸ್ಕಾಟ್ಲೆಂಡ್‌ಗೆ ಜಯ

ಶನಿವಾರ ಐರ್ಲೆಂಡ್‌ ವಿರುದ್ಧ ಪಂದ್ಯದಲ್ಲಿ ಸ್ಕಾಟ್ಲೆಂಡ್‌ 40 ರನ್‌ ಜಯಗಳಿಸಿತು. ಸ್ಕಾಟ್ಲೆಂಡ್‌ ಮೊದಲು ಬ್ಯಾಟ್‌ ಮಾಡಿ 5 ವಿಕೆಟ್‌ಗೆ 161 ರನ್‌ ಗಳಿಸಿತು. ನಾಯಕಿ ಕ್ಯಾಥರಿನ್‌ ಬ್ರೈಸ್‌ 60 ರನ್‌ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಐರ್ಲೆಂಡ್‌ 19.1 ಓವರ್‌ನಲ್ಲಿ 121 ರನ್‌ಗೆ ಆಲೌಟಾಯಿತು.