ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಿವೃತ್ತಿ ನಂತರ ಏನು ಮಾಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳ ಕಾಡಿದೆ. ಅದಕ್ಕೆ ಆರ್.ಅಶ್ವಿನ್ ಉತ್ತರ ನೀಡಿದ್ದಾರೆ.
ನವದೆಹಲಿ: ಭಾರತೀಯ ಕ್ರಿಕೆಟ್‌ನ ದಂತಕತೆಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈಗಾಗಲೇ ಟಿ20 ಮತ್ತು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸದ್ಯ ಏಕದಿನ ಮಾದರಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಇಬ್ಬರು ದಿಗ್ಗಜರು, 2027ರ ಏಕದಿನ ವಿಶ್ವಕಪ್ ನಂತರ ಸಂಪೂರ್ಣವಾಗಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.
ಹಾಗಾದರೆ ನಿವೃತ್ತಿಯ ನಂತರ ಈ ಇಬ್ಬರು ರಾಹುಲ್ ದ್ರಾವಿಡ್ ಅವರಂತೆ 'ಕೋಚ್' ಆಗಿ ಮೈದಾನಕ್ಕೆ ಮರಳುತ್ತಾರಾ? ಈ ಕುರಿತು ಇವರಿಬ್ಬರ ಆಪ್ತ ಗೆಳೆಯ ಹಾಗೂ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕೋಚಿಂಗ್‌ಗೆ ಬರಲ್ಲ ಕೊಹ್ಲಿ-ರೋಹಿತ್!
ಅಶ್ವಿನ್ ಪ್ರಕಾರ ಕೊಹ್ಲಿ ಮತ್ತು ರೋಹಿತ್ ನಿವೃತ್ತಿಯಾದ ತಕ್ಷಣ ಕೋಚಿಂಗ್ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ವಿರಾಟ್ ಕೊಹ್ಲಿ ನಿವೃತ್ತಿಯ ತಕ್ಷಣ ಕೋಚಿಂಗ್ ಕ್ಷೇತ್ರಕ್ಕೆ ಬರುತ್ತಾರೆ ಎಂದು ನನಗನ್ನಿಸುವುದಿಲ್ಲ. ಅವರು ಬಹುಶಃ ಕ್ರಿಕೆಟ್‌ನಿಂದ ದೀರ್ಘಕಾಲದ ವಿರಾಮ ತೆಗೆದುಕೊಳ್ಳಬಹುದು. ವಿರಾಟ್ ಈಗಾಗಲೇ ತಮ್ಮ ಕುಟುಂಬದೊಂದಿಗೆ ಲಂಡನ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ, ಕೇವಲ ಸರಣಿಗಳಿದ್ದಾಗ ಮಾತ್ರ ಭಾರತಕ್ಕೆ ಬರುತ್ತಾರೆ. ಹೀಗಾಗಿ ಅವರು ನಿವೃತ್ತಿಯ ನಂತರ ಸ್ವಲ್ಪ ಕಾಲ ಮೈದಾನದಿಂದ ದೂರ ಉಳಿಯಲು ಬಯಸಬಹುದು ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಮುಂಬೈ ಇಂಡಿಯನ್ಸ್‌ಗೆ ರೋಹಿತ್ ಮರಳುವ ಸಾಧ್ಯತೆ
ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾತನಾಡಿದ ಅಶ್ವಿನ್, ರೋಹಿತ್ ಶರ್ಮಾ ಅವರು ಭವಿಷ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಯಾವುದಾದರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು. ಮುಂಬೈ ತಂಡಕ್ಕೆ 5 ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿರುವ ಮತ್ತು ಭಾರತಕ್ಕೆ ವಿಶ್ವಕಪ್ ತಂದುಕೊಟ್ಟಿರುವ ರೋಹಿತ್ ಅಂತಹ ಆಟಗಾರ ಸುಲಭವಾಗಿ ಸಿಗುವುದಿಲ್ಲ. ಮುಂಬೈ ತಂಡ ಅವರನ್ನು ಯಾವುದಾದರೂ ರೂಪದಲ್ಲಿ ಬಳಸಿಕೊಳ್ಳಲು ಬಯಸುತ್ತದೆ ಎಂದಿದ್ದಾರೆ.
ಹೆಡ್ ಕೋಚ್ ಜವಾಬ್ದಾರಿಯುತ ಕೆಲಸದ ಬಗ್ಗೆ ವಿವರಿಸಿದ ಅಶ್ವಿನ್, ಹೆಡ್ ಕೋಚ್ ಕೆಲಸ ತುಂಬಾ ಶ್ರಮದಾಯಕ ಮತ್ತು ಒತ್ತಡದಿಂದ ಕೂಡಿರುತ್ತದೆ. ಹೀಗಾಗಿ ಅವರು ತಕ್ಷಣ ಈ ಜವಾಬ್ದಾರಿ ಹೊರಬಾರದು. ರಾಹುಲ್ ದ್ರಾವಿಡ್ ಅವರಂತೆ 2-3 ವರ್ಷಗಳ ಕಾಲ ಬ್ರೇಕ್ ಪಡೆದು, ನಂತರ ಬೇರೆ ಯಾವುದಾದರೂ ಚಿಕ್ಕ ಪಾತ್ರದ ಮೂಲಕ (ಮೆಂಟರ್ ಅಥವಾ ಕನ್ಸಲ್ಟೆಂಟ್) ಆರಂಭಿಸಿ ಆಮೇಲೆ ಕೋಚ್ ಆಗಬಹುದು ಎಂದು ಸಲಹೆ ನೀಡಿದ್ದಾರೆ.
ಸದ್ಯಕ್ಕೆ ಕೊಹ್ಲಿ ಮತ್ತು ರೋಹಿತ್ ಅವರ ಮುಂದಿನ ಗುರಿ 2027ರ ಏಕದಿನ ವಿಶ್ವಕಪ್. ಈ ಟೂರ್ನಿಯ ನಂತರ ಇಬ್ಬರೂ ಏಕದಿನ ಕ್ರಿಕೆಟ್‌ಗೂ ವಿದಾಯ ಹೇಳುವುದು ಬಹುತೇಕ ಖಚಿತ ಎನ್ನಲಾಗಿದೆ. ಅಲ್ಲಿಯವರೆಗೆ ಇವರಿಬ್ಬರ ಬ್ಯಾಟಿಂಗ್ ವೈಭವವನ್ನು ಆನಂದಿಸುವುದೇ ಅಭಿಮಾನಿಗಳಿಗೆ ದೊಡ್ಡ ಹಬ್ಬ.


