ನ್ಯೂಜಿಲೆಂಡ್ ನೀಡಿದ 301 ರನ್‌ಗಳ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ (93) ಹಾಗೂ ಶುಭ್‌ಮನ್ ಗಿಲ್ (56) ಅವರ ಸಂಘಟಿತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‌ಗಳ ಜಯ ಸಾಧಿಸಿತು. ಕೆಳ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಹಾಗೂ ಹರ್ಷಿತ್ ರಾಣಾ ತಂಡದ ಗೆಲುವನ್ನು ಖಚಿತಪಡಿಸಿದರು.
ವಡೋದರ (ಜ.11): ವಿರಾಟ್ ಕೊಹ್ಲಿ, ನಾಯಕ ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್ ಹಾಗೂ ಕೆಳ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಹಾಗೂ ಹರ್ಷಿತ್ ರಾಣಾ ಅವರ ಸಂಘಟಿತ ಬ್ಯಾಟಿಂಗ್ ಪ್ರಯತ್ನದ ನೆರವಿನಿಂದ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 8 ವಿಕೆಟ್‌ಗೆ 300 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಟೀಮ್ ಇಂಡಿಯಾ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 306 ರನ್ ಬಾರಿಸಿ ಗೆಲುವು ಕಂಡಿತು.
ವಡೋದರದ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೇಸಿಂಗ್ ಆರಂಭಿಸಿ ಟೀಮ್ ಇಂಡಿಯಾ ರೋಹಿತ್ ಶರ್ಮ ಅವರನ್ನು ಬೇಗನೆ ಕಳೆದುಕೊಂಡಿತು. ನಂತರ ಜೊತೆಯಾದ ಶುಭ್‌ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ 2ನೇ ವಿಕೆಟ್‌ಗೆ ಆಕರ್ಷಕ ಜೊತೆಯಾಟವಾಡಿ ತಂಡದ ಗೆಲುವಿನ ಹೋರಾಟ ಜೀವಂತವಾಗಿಟ್ಟಿದ್ದರು. ಶುಭ್‌ಮನ್ ಗಿಲ್ 71 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್‌ಗಳಿಂದ 56 ರನ್ ಬಾರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ವಿರಾಟ್ ಕೊಹ್ಲಿ, 91 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್ ಇದ್ದ 93 ರನ್ ಬಾರಿಸಿದರು. ಶತಕದಿಂದ 7 ರನ್ ದೂರವಿದ್ದಾಗ ವಿರಾಟ್ ಕೊಹ್ಲಿ, ಜೇಮಿಸನ್‌ಗೆ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.

