ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮುಗಿಯುತ್ತಿದ್ದಂತೆ, ಭಾರತೀಯ ಕ್ರಿಕೆಟ್ ತಂಡದ ಸಿಬ್ಬಂದಿ ಎರಡು ಗುಂಪುಗಳಾಗಿ ವಿಭಜನೆಗೊಂಡಿದ್ದಾರೆ. ಏಕದಿನ ಸರಣಿಗೆ ಹಿರಿಯ ಆಟಗಾರರ ಸಿದ್ಧತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶುಭಮನ್ ಗಿಲ್ ನಾಯಕತ್ವದಲ್ಲಿ ತಂಡ ಕಣಕ್ಕಿಳಿಯಲಿದೆ.
ಸೌತಾಂಪ್ಟನ್ (ಜು.10): ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯು ಅಂತಿಮ ಹಂತಕ್ಕೆ ತಲುಪಿರುವ ಬೆನ್ನಲ್ಲೇ, ಭಾರತೀಯ ಕ್ರಿಕೆಟ್ ವಲಯದಿಂದ ಬಿಗ್‌ಅಪ್‌ಡೇಟ್ ಹೊರಬಿದ್ದಿದೆ. ಸರಣಿಯ ಐದನೇ ಹಾಗೂ ಅಂತಿಮ ಟಿ20 ಪಂದ್ಯ ಜುಲೈ 11 ರಂದು ಸೌತಾಂಪ್ಟನ್‌ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಆದರೆ, ಈ ಮಹತ್ವದ ಪಂದ್ಯಕ್ಕೆ ಕೆಲವೇ ಗಂಟೆಗಳ ಮೊದಲು ಭಾರತ ತಂಡದ ಸಿಬ್ಬಂದಿ ಎರಡು ಪ್ರತ್ಯೇಕ ಗುಂಪುಗಳಾಗಿ ವಿಭಜನೆಗೊಂಡಿದೆ. ಆರಂಭದಲ್ಲಿ ಇದು ತಂಡದಲ್ಲಿನ ಒಡಕಿನಂತೆ ಕಂಡರೂ, ಇದರ ಹಿಂದಿರುವ ಅಸಲಿ ಕಾರಣ ಮಾತ್ರ ವಿಭಿನ್ನವಾಗಿದೆ. ಟಿ20 ಸರಣಿ ಮುಗಿದ ಬೆನ್ನಲ್ಲೇ ಆರಂಭವಾಗಲಿರುವ ಏಕದಿನ (ODI) ಸರಣಿಗಾಗಿ ಭಾರತದ ಹಿರಿಯ ಆಟಗಾರರು ಈಗಾಗಲೇ ಇಂಗ್ಲೆಂಡ್‌ಗೆ ಆಗಮಿಸಿರುವುದೇ ಈ ವಿಭಜನೆಗೆ ಮುಖ್ಯ ಕಾರಣವಾಗಿದೆ.
ಸಪೋರ್ಟ್ ಸ್ಟಾಫ್ ಎರಡು ಬಣಗಳಾಗಿದ್ದೇಕೆ?
ವರದಿಗಳ ಪ್ರಕಾರ, ಟಿ20 ಮತ್ತು ಏಕದಿನ ಎರಡೂ ಸರಣಿಗಳನ್ನು ಏಕಕಾಲದಲ್ಲಿ ವ್ಯವಸ್ಥಿತವಾಗಿ ನಿರ್ವಹಿಸಲು ಮತ್ತು ಒನ್‌ಡೇ ಸರಣಿಗೆ ಸೂಕ್ತ ಸಮಯದಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲು ಸಪೋರ್ಟ್ ಸ್ಟಾಫ್ ಈ ನಿರ್ಧಾರ ಮಾಡಿದೆ. ಮೊದಲ ಗುಂಪು ಟಿ20 ತಂಡದೊಂದಿಗೆ ಸೌತಾಂಪ್ಟನ್‌ನಲ್ಲೇ ಉಳಿಯಲಿದ್ದು, ಜುಲೈ 11 ರಂದು ನಡೆಯಲಿರುವ ಕೊನೆಯ ಟಿ20 ಪಂದ್ಯದ ವೇಳೆ ತಂಡದ ಉಸ್ತುವಾರಿ ನೋಡಿಕೊಳ್ಳಲಿದೆ.
2ನೇ ಗುಂಪು ಬ್ರಿಸ್ಟಲ್‌ನಿಂದ ನೇರವಾಗಿ ಬರ್ಮಿಂಗ್ಹ್ಯಾಮ್‌ಗೆ ರವಾನೆಯಾಗಿದೆ. ಅಲ್ಲಿ ಈಗಾಗಲೇ ಬೀಡುಬಿಟ್ಟಿರುವ ಟೀಮ್ ಇಂಡಿಯಾ ಸೀನಿಯರ್ ಆಟಗಾರರನ್ನು ಭೇಟಿಯಾಗಿ, ಅವರ ತರಬೇತಿ ಹಾಗೂ ನೆಟ್ಸ್ ಪ್ರ್ಯಾಕ್ಟೀಸ್ ಸೆಷನ್‌ಗಳ ಮೇಲ್ವಿಚಾರಣೆ ನಡೆಸಲಿದೆ.
ಹಿರಿಯ ಆಟಗಾರರ ಪುನರಾಗಮನ; ಗಿಲ್ ನಾಯಕತ್ವ
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಜುಲೈ 14 ರಂದು ಬರ್ಮಿಂಗ್‌ಹ್ಯಾಮ್‌ನ ಐತಿಹಾಸಿಕ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ನಡೆಯಲಿದೆ. ಈ ಸರಣಿಯ ಮೂಲಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಜಸ್ಪ್ರಿತ್ ಬುಮ್ರಾ ಅವರಂತಹ ಹಿರಿಯ ಆಟಗಾರರು ತಂಡಕ್ಕೆ ಪುನರಾಗಮನ ಮಾಡುತ್ತಿರುವುದು ಟೀಮ್ ಇಂಡಿಯಾ ಬಲವನ್ನು ಹೆಚ್ಚಿಸಿದೆ. ಯುವ ಬ್ಯಾಟರ್ ಶುಭಮನ್ ಗಿಲ್ ಏಕದಿನ ತಂಡದ ನಾಯಕತ್ವ ವಹಿಸಲಿದ್ದು, ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್ ಒನ್‌ಡೇ ಸರಣಿಯಲ್ಲಿ ಉಪನಾಯಕನಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ಏಕದಿನ ಸರಣಿಯ ಸಂಪೂರ್ಣ ವೇಳಾಪಟ್ಟಿ
- ಮೊದಲ ಏಕದಿನ ಪಂದ್ಯ: ಜುಲೈ 14, ಎಡ್ಜ್‌ಬಾಸ್ಟನ್ (ಬರ್ಮಿಂಗ್‌ಹ್ಯಾಮ್)
- ಎರಡನೇ ಏಕದಿನ ಪಂದ್ಯ: ಜುಲೈ 16, ಕಾರ್ಡಿಫ್
- ಮೂರನೇ ಏಕದಿನ ಪಂದ್ಯ: ಜುಲೈ 19, ಲಾರ್ಡ್ಸ್ (ಲಂಡನ್)
ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತದ ಅಧಿಕೃತ ಏಕದಿನ (ODI) ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಗುರ್ನೂರ್ ಬ್ರಾರ್.


