ರಾಹುಲ್ ದ್ರಾವಿಡ್ ಅವರ ಆಟವನ್ನು ನೋಡಲು ಅವರ ತಂದೆ ಶರದ್ ದ್ರಾವಿಡ್ ಅವರು ಮಗನಿಗೆ ಒತ್ತಡವಾಗದಿರಲಿ ಎಂದು ಯಾರಿಗೂ ಗೊತ್ತಾಗದಂತೆ ಸ್ಟೇಡಿಯಂನ ಕೊನೆಯ ಸಾಲಿನಲ್ಲಿ ಕುಳಿತು ವೀಕ್ಷಿಸುತ್ತಿದ್ದರು. ಈ ಕುರಿತು ಸೌರವ್ ಗಂಗೂಲಿ ಹಂಚಿಕೊಂಡಿರುವ ನೆನಪುಗಳು ವೈರಲ್ ಆಗಿವೆ.

ಬೆಂಗಳೂರು (ನ.3): ಭಾರತೀಯ ಕ್ರಿಕೆಟ್‌ನ 'ದಿ ವಾಲ್' (The Wall) ಎಂದೇ ಖ್ಯಾತರಾಗಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಅವರ ತಂದೆ ಶರದ್‌ ದ್ರಾವಿಡ್‌ ಅವರಿಗೆ ಮಗ ದೇಶಕ್ಕಾಗಿ ಕ್ರಿಕೆಟ್ ಆಡುವುದನ್ನು ನೋಡುವುದೇ ದೊಡ್ಡ ಜೀವನದ ಕನಸಾಗಿತ್ತು: ಆದರೆ, ಮಗನ ಆಟಕ್ಕೆ ಯಾವುದೇ ರೀತಿಯ ಒತ್ತಡ ಬೀಳಬಾರದೆಂದು ಯಾರಿಗೂ ಗೊತ್ತಾಗದಂತೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದು ಕೊನೆಯ ಸಾಲಿನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದರು. ಈ ಕುರಿತು ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಆಡಿದ್ದ ಮಾತುಗಳು ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಕಾರ್ಯಕ್ರಮವೊಂದರಲ್ಲಿ ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ತಾವು ಟೀಮ್ ಇಂಡಿಯಾದ ನಾಯಕನಾಗಿದ್ದಾಗ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದ್ದಾಗ ನಡೆದ ಘಟನೆಯನ್ನು ನೆನಪಿಸಿಕೊಂಡ ಸೌರವ್ ಗಂಗೂಲಿ, 'ನಾನು ಭಾರತ ತಂಡದ ಕ್ಯಾಪ್ಟನ್ ಆಗಿದ್ದಾಗ ರಾಹುಲ್ ದ್ರಾವಿಡ್ ತಂದೆ ಶರದ್ ದ್ರಾವಿಡ್ ಅವರನ್ನು ಒಮ್ಮೆ ಕೇಳಿದ್ದೆ. 'ಅಂಕಲ್, ನೀವು ಯಾಕೆ ಯಾರಿಗೂ ಗೊತ್ತಾಗದಂತೆ ಸ್ಟೇಡಿಯಂಗೆ ಬಂದು, ಯಾರ ಕಣ್ಣಿಗೂ ಬೀಳದ ಯಾವುದೋ ಸ್ಟ್ಯಾಂಡ್‌ನ ಕೊನೆಯ ಬೆಂಚ್‌ನಲ್ಲಿ ಕುಳಿತು ರಾಹುಲ್ ದ್ರಾವಿಡ್ ಆಡೋದನ್ನು ನೋಡುತ್ತೀರಾ?' ಎಂದು ಪ್ರಶ್ನೆ ಮಾಡಿದ್ದೆ.

ಅದಕ್ಕೆ ಅವರು, 'ಪ್ರತಿ ಬಾರಿ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ ನಡೆಯುವಾಗ, ರಾಹುಲ್ ದ್ರಾವಿಡ್ ಯಾವುದೇ ಕಾರಣಕ್ಕೂ ನಾನು ಕ್ರಿಕೆಟ್ ಫೀಲ್ಡ್‌ಗೆ ಬರಬಾರದು ಎಂದು ಹೇಳುತ್ತಿರುತ್ತಾನೆ' ಎಂದರು. ದ್ರಾವಿಡ್ ಯಾಕೆ ಹಾಗೆ ಹೇಳುತ್ತಾರೆ ಎಂದು ನಾನು ಮರಳಿ ಕೇಳಿದಾಗ, 'ಪ್ರತಿ ಬಾರಿ ಸ್ಟೇಡಿಯಂನ ವಿಐಪಿ ಗ್ಯಾಲರಿಯಲ್ಲಿ ನನ್ನ ಮುಖ ನೋಡಿದಾಗ ಆತನ ಮೇಲೆ ಆಟದ ಒತ್ತಡ ಹೆಚ್ಚಾಗಲು ಶುರುವಾಗುತ್ತದೆಯಂತೆ. ಆದರೆ, ನನ್ನ ಮಗ ದೇಶಕ್ಕಾಗಿ ಆಡೋದನ್ನು ನೋಡುವುದಕ್ಕಾಗಿ ನಾನು ಕೆಎಸ್‌ಸಿಎ ಮೆಂಬರ್‌ಷಿಪ್ ಗೇಟ್ ಮೂಲಕ ಬಂದು, ಕೊನೆಯ ಸಾಲಿನಲ್ಲಿ ಕುಳಿತು ವೀಕ್ಷಿಸುತ್ತೇನೆ. ಏಕೆಂದರೆ ನನ್ನ ಇಡೀ ಜೀವನಪೂರ್ತಿ ನಾನು ಕನಸು ಕಂಡಿದ್ದೇ ಮತ್ತು ಬದುಕಿದ್ದೇ ಇದಕ್ಕಾಗಿ' ಎಂದು ಶರದ್ ದ್ರಾವಿಡ್ ಹೇಳಿದ್ದರು" ಎಂದು ಗಂಗೂಲಿ ನೆನಪಿಸಿಕೊಂಡಿದ್ದಾರೆ.

ತಂದೆಯಿಂದಲೇ ಬಂದಿತ್ತು ಜಾಮಿ ನಿಕ್‌ನೇಮ್‌

ರಾಹುಲ್ ದ್ರಾವಿಡ್ ಅವರ ತಂದೆ ಶರದ್ ದ್ರಾವಿಡ್ ಅವರು ಪ್ರಸಿದ್ಧ ಜ್ಯಾಮ್ ಹಾಗೂ ಫ್ರೂಟ್ ಪ್ರಿಸರ್ವ್ಸ್ ಕಂಪನಿಯಾದ 'ಕಿಸಾನ್' (Kissan) ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. 1970 ರ ದಶಕದಲ್ಲಿ ಲೀಗ್ ಕ್ರಿಕೆಟ್ ಆಡುತ್ತಿದ್ದ ಶರದ್ ದ್ರಾವಿಡ್ ಅವರೇ ರಾಹುಲ್ ಅವರ ಆರಂಭಿಕ ಕ್ರಿಕೆಟ್ ಬದುಕಿಗೆ ದೊಡ್ಡ ಸ್ಪೂರ್ತಿಯಾಗಿದ್ದರು. ತಂದೆ ಕಿಸಾನ್ ಜ್ಯಾಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರಣಕ್ಕಾಗಿ, ಬೆಂಗಳೂರಿನ ಸೆಂಟ್ ಜೋಸೆಫ್ಸ್ ಬಾಯ್ಸ್ ಹೈಸ್ಕೂಲ್‌ನಲ್ಲಿ (St. Joseph's Boys' High School) ಕಲಿಯುತ್ತಿದ್ದಾಗ ರಾಹುಲ್ ದ್ರಾವಿಡ್ ಅವರನ್ನು ಸಹಪಾಠಿಗಳು ಪ್ರೀತಿಯಿಂದ ಜಾಮಿ (Jammy) ಎಂದು ಕರೆಯಲು ಶುರು ಮಾಡಿದರು. ಮುಂದೆ ಜಾಹೀರಾತುಗಳಲ್ಲೂ ಈ ಹೆಸರು ಭಾರಿ ಪ್ರಸಿದ್ಧಿ ಪಡೆಯಿತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಶರದ್ ದ್ರಾವಿಡ್ ಅವರು 2013 ಜುಲೈ 3 ರಂದು ತಮ್ಮ 79ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದರು.

'ಎರಡನೇ ಮನೆ' ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 'ರಾಹುಲ್ ದ್ರಾವಿಡ್ ಎಂಡ್'

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂಗೂ (M. Chinnaswamy Stadium) ರಾಹುಲ್ ದ್ರಾವಿಡ್ ಅವರಿಗೂ ದಶಕಗಳ ಅವಿನಾಭಾವ ನಂಟಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (KSCA) ಕ್ರೀಡಾಂಗಣದ ಸುವರ್ಣ ಮಹೋತ್ಸವದ (50th Anniversary) ಸಂಭ್ರಮಾಚರಣೆಯ ವೇಳೆ, ಭಾರತದ ಈ ಮಹಾನ್ ಕ್ರಿಕೆಟಿಗನಿಗೆ ಗೌರವ ಸಲ್ಲಿಸಲು ಸ್ಟೇಡಿಯಂನ ಪ್ರಸಿದ್ಧ 'ಬಿಇಎಮ್‌ಎಲ್ ಎಂಡ್' ಅನ್ನು (BEML End) 'ರಾಹುಲ್ ದ್ರಾವಿಡ್ ಎಂಡ್' (Rahul Dravid End) ಎಂದು ಅಧಿಕೃತವಾಗಿ ಮರುನಾಮಕರಣ ಮಾಡಿದೆ. ಈ ಗೌರವ ಸ್ವೀಕರಿಸಿ ಮಾತನಾಡಿದ್ದ ದ್ರಾವಿಡ್ ತೀವ್ರ ಭಾವುಕರಾಗಿದ್ದರು. "ಚಿನ್ನಸ್ವಾಮಿ ಸ್ಟೇಡಿಯಂ ನನ್ನ ಜೀವನದ ಎರಡನೇ ಮನೆ ಇದ್ದಂತೆ. ನನ್ನ ಸ್ವಂತ ಮನೆಯಲ್ಲಿ ಕಳೆದ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ನಾನು ಈ ಸ್ಟೇಡಿಯಂನ ಮೈದಾನ ಹಾಗೂ ನೆಟ್ಸ್‌ನಲ್ಲಿ ಕಳೆದಿದ್ದೇನೆ" ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದರು.

ತಂದೆಯ ಸೈಲೆಂಟ್ ಬೆಂಬಲ ಹಾಗೂ ಮಗನ ಕಠಿಣ ಶ್ರಮದ ಫಲವಾಗಿ ಬೆಳೆದ ರಾಹುಲ್ ದ್ರಾವಿಡ್, ಇಂದು ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಮಹಾನ್ ಆಟಗಾರ ಹಾಗೂ ಅತ್ಯಂತ ಶಿಸ್ತಿನ ಕೋಚ್‌ ಆಗಿ ವಿಶ್ವದಾದ್ಯಂತ ಮಿಂಚುತ್ತಿರುವುದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ವಿಷಯವಾಗಿದೆ.