9 ವಿಕೆಟ್ ಉರುಳಿ ಬಿದ್ದಿತ್ತು. ಗೆಲುವಿನ ಮೆಟ್ಟಿಲು ಇನ್ನೂ ದೂರವಿತ್ತು. ಆದರೆ ಮೋಹಿತ್ ಉಲ್ವಾ ಇಡೀ ಜವಾಬ್ದಾರಿ ಹೊತ್ತು ಪಾಕಿಸ್ತಾನದ ಬೌಲರ್ ಚೆಂಡಾಡಿದ್ದಾರೆ. ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸುವ ಮೂಲಕ ರೋಚಕ ಗೆಲುವು ತಂದುಕೊಟ್ಟ ಈ ಮೋಹಿತ್ ಉಲ್ವಾ ಯಾರು?

ಓಮನ್ (ನ.14) ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ 338 ರನ್ ಟಾರ್ಗೆಟ್ ನೀಡಿತ್ತು. ಭಾರತ ದಿಟ್ಟ ಹೋರಾಟ ನೀಡಿತ್ತು. ಆದರೆ ವಿಕೆಟ್ ಕಳೆದುಕೊಳ್ಳುತ್ತಾ ಬಂದಿತ್ತು. ಭಾರತದ ಗೆಲುವಿಗೆ ಅಂತಿಮ 16 ಎಸೆತದಲ್ಲಿ 29 ರನ್ ಬೇಕಿತ್ತು. ಆದರೆ ವಿಕೆಟ್ 9 ಉರುಳಿ ಬಿದ್ದಿತ್ತು. ಮೋಹಿತ್ ಉಲ್ವಾ ಕ್ರೀಸ್‌ನಲ್ಲಿದ್ದರೆ, ಕೊನೆಯ ವಿಕೆಟ್ ಚಿಗುರುಪಾಟಿ ವೆಂಕಟ್. ಹೆಚ್ಚು ಕಡಿಮೆ 3 ಓವರ್. ಆದರೆ ವಿಕೆಟ್ ಇಲ್ಲ, ಒಂದು ಸಣ್ಣ ತಪ್ಪು ದುಬಾರಿಯಾಗಲಿದೆ. ಹೀಗಾಗಿ ಎಚ್ಚರಿಕೆ ಬೇಕು, ಜೊತೆಗೆ ರನ್ ಕೂಡ ಬರಬೇಕು. ಹೋರಾಟ ಅಂತಿಮ ಓವರ್‌ಗೆ ತಲುಪಿತ್ತು. ಅಂತಿಮ ಓವರ್‌ನ ಆರಂಭಿಕ ಎಸೆತಗಳಲ್ಲಿ ಒಂದೊಂದೆ ರನ್. ಎದೆಬಡಿತ ಮತ್ತಷ್ಟು ಹೆಚ್ಚಾಯಿತು. ಆದರೆ ಮೋಹಿತ್ ಉಲ್ವಾ ಕೊನೆಯ ಎಸೆತದಲ್ಲಿ ಬೌಂಡರಿ ಸಿಡಿಸಿ ಭಾರತಕ್ಕೆ 1 ವಿಕೆಟ್ ರೋಚಕ ಗೆಲುವು ನೀಡಿದರು. ಬದ್ಧವೈರಿ ಪಾಕಿಸ್ತಾನ ಮಣಿಸಿದ ಭಾರತ ಟ್ರೋಫಿ ಗೆದ್ದು ಸಂಭ್ರಮಿಸಿತು.

ಮೋಹಿತ್ ಹೋರಾಟ, ವೆಂಕಟ್ ಸಾಥ್

ಅಂತಿ 12 ಎಸೆತದಲ್ಲಿ 15 ರನ್ ಅವಶ್ಯಕತೆ ಇತ್ತು. 9 ವಿಕೆಟ್ ಕಳೆದುಕೊಂಡು ಆತಂಕದಲ್ಲಿತ್ತು. 49ನೇ ಓವರ್‌ನಲ್ಲಿ ಮೊಹಿತ್ ಉಲ್ವಾ ಭಾರತೀಯ ಅಭಿಮಾನಿಗಳಿಗೆ ಸಮಾಧಾನ ನೀಡಿದರು. ಕಾರಣ ಮೊದಲ ಎಸೆತದ ಬೌಂಡರಿ, 2ನೇ ಎಸೆತ ಸಿಕ್ಸರ್ ಸಿಡಿಸಿದರು. ಇತ್ತ ಚಿಗುರುಪಾಟಿ ವೆಂಕಟ ಬೌಂಡರಿ ಸಿಡಿಸಿದರು. ಹೀಗಾಗಿ ಕೊನೆಯ ಓವರ್‌ನ 6 ಎಸೆತದಲ್ಲಿ ಭಾರತಕ್ಕೆ 8 ರನ್ ಅವಶ್ಯಕತೆ ಇತ್ತು. ಪಂದ್ಯ ಮತ್ತಷ್ಟು ರೋಚಕಗೊಂಡಿತು. ಗೆಲುವು ಯಾರಿಗೆ ಅನ್ನೋ ಕುತೂಹಲ ಹೆಚ್ಚಾಯಿತು. ಆದರೆ ಕೊನೆಯ ಓವರ್‌ನಲ್ಲಿ ಮೊದಲ ಎಸೆತ ಡಾಟ್ ಬಾಲ್. ಬೌಂಡರಿ ಅಥವಾ ಸಿಕ್ಸರ್ ಅನಿವಾರ್ಯವಾಗಿತ್ತು. ಒಂದು ವೈಡ್ ಸಿಕ್ಕರೂ ಆತಂಕ ದೂರವಾಗಲಿಲ್ಲ. ಕಾರಣ ಇನ್ನುಳಿದ 4 ಎಸೆತಗಳು ಒಂದೊಂದೇ ರನ್. ಹೀಗಾಗಿ ಕೊನೆಯ ಎಸೆತದಲ್ಲಿ ಬೌಂಡರಿ ಬೇಕೆ ಬೇಕು. ಮೋಹಿತ್ ಉಲ್ವಾ ಫ್ಲಾಟರ್ ಎಸೆತವನ್ನು ವೈಡ್ ಲಾಂಗ್ ಆಫ್ ಬೌಂಡರಿ ಕಡೆಗೆ ಬಲವಾಗಿ ಬೀಸಿದ್ದಾರೆ. ಒಂದು ಬೌನ್ಸ್‌ನಲ್ಲಿ ಬಾಲ್ ಬೌಂಡರಿ ಗೆರೆ ದಾಟಿತ್ತು. ಭಾರತ 1 ವಿಕೆಟ್ ರೋಚಕ ಗೆಲುವು ಕಂಡಿತ್ತು. ಲೀಗ್ ಹಂತದ ಸೋಲಿಗೆ ಸೇಡು ತೀರಿಸಿದ್ದು ಮಾತ್ರವಲ್ಲ, ಟ್ರೋಫಿ ಗೆದ್ದು ಸಂಭ್ರಮಿಸಿತ್ತು.

ಯಾರು ಈ ಮೋಹಿತ್ ಉಲ್ವಾ

26 ಎಸೆತದಲ್ಲಿ ಅಜೇಯ 49 ರನ್ ಸಿಡಿಸಿ ಭಾರತಕ್ಕೆ ಗೆಲುವು ನೀಡಿದ ಮೋಹಿತ್ ಉಲ್ವಾ ವಯಸ್ಸು ಕೇವಲ 18. ಗುಜರಾತ್‌ನ ಸುರೇಂದ್ರನಗರದ ಪ್ರತಿಭೆ. ಮೋಹಿತ್ ಮಹೇಶ್‌ಬಾಯಿ ಉಲ್ವಾ ಆಲ್‌ರೌಂಡರ್. ಮೋಹಿತ್ ಉಲ್ವಾಗೆ ತರಬೇತಿ ನೀಡಿ ಪರಿಪಕ್ವ ಮಾಡಿದ್ದು ರವೀಂದ್ರ ಜಡೇಜಾ ಬಾಲ್ಯದ ಕೋಚ್ ಮಹೇಂದ್ರ ಸಿನ್ಹ ಚೌವ್ಹಾಣ್. ಅಂಡರ್ 19 ತಂಡದ ಪ್ರಮುಖ ಬೌಲರ್ ಕೂಡ ಹೌದು. ಮೋಹಿತ್ ಉಲ್ವಾ ಕ್ರಿಸ್‌ಗೆ ಬಂದಿದ್ದು 9ನೇ ವಿಕೆಟ್‌ನಲ್ಲಿ. ಕೊನೆಯದಾಗಿ ಬ್ಯಾಟಿಂಗ್ ಬಂದು ಭಾರತಕ್ಕೆ ರೋಚಕ ಗೆಲುವು ನೀಡಿದ್ದಾರೆ. ಇತ್ತ ಬೌಲಿಂಗ್‌ನಲ್ಲಿ 8 ಓವರ್ ಮಾಡಿದ್ದರು. ಆದರೆ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಲಿಲ್ಲ.

ಮೋಹಿತ್ ಉಲ್ವಾ ಮೇಲೆ ಐಪಿಎಲ್ ಫ್ರಾಂಚೈಸಿಗಳು ಕಣ್ಣಿಟ್ಟಿದೆ. ಅಂಡರ್ 19 ಟೂರ್ನಿಯಲ್ಲಿ ತೋರಿದ ಪ್ರದರ್ಶನ, ಜವಾಬ್ದಾರಿ, ಒತ್ತಡದಲ್ಲಿ ಬ್ಯಾಟಿಂಗ್ ಎಲ್ಲವೂ ಐಪಿಎಲ್ ಟೂರ್ನಿಗೆ ಹೇಳಿ ಮಾಡಿಸಿದ ಪ್ರತಿಭೆ. ಹೀಗಾಗಿ ಮೋಹಿತ್ ಉಲ್ವಾ ಶೀಘ್ರದಲ್ಲೇ ಐಪಿಎಲ್ ಟೂರ್ನಿಯಲ್ಲಿ ಮಿಂಚಲಿದ್ದಾರೆ.