ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದು, ಸರ್ಫರಾಜ್ ಖಾನ್, ಮೊಹಮ್ಮದ್ ಶಮಿ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಕಡೆಗಣಿಸಲಾಗಿದೆ, ಇದು ಅವರ ಟೆಸ್ಟ್ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬೆಂಗಳೂರು: ಮುಂಬರುವ ಆಗಸ್ಟ್ 15ರಿಂದ ಆರಂಭವಾಗಲಿರುವ ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 15 ಆಟಗಾರರನ್ನೊಳಗೊಂಡ ಭಾರತ ತಂಡ ಇಂದು ಪ್ರಕಟವಾಗಿದೆ. ಈ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ತಂಡ ಕೂಡಿಕೊಂಡಿದ್ದಾರೆ. ಇನ್ನು ಇತ್ತೀಚೆಗೆ ಇಂಗ್ಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ರವೀಂದ್ರ ಜಡೇಜಾ ಅವರನ್ನು ಕಡೆಗಣಿಸಲಾಗಿತ್ತು. ಇದರ ಬೆನ್ನಲ್ಲೇ ಜಡ್ಡು ಕ್ರಿಕೆಟ್ ವೃತ್ತಿಜೀವನ ಮುಗಿಯಿತಾ ಎನ್ನುವ ಪ್ರಶ್ನೆ ಶುರುವಾಗಿತ್ತು.
ಇದೀಗ ರವೀಂದ್ರ ಜಡೇಜಾ ಭಾರತ ತಂಡದಲ್ಲಿ ಸ್ಥಾನ ಪಡೆದಿರುವುದರಿಂದ ಇನ್ನೂ ಕೆಲವು ವರ್ಷಗಳ ಕಾಲ ಜಡ್ಡು ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದು ಬಹುತೇಕ ಖಚಿತ ಎನಿಸಿಕೊಂಡಿದೆ. ಇದೀಗ ಟೆಸ್ಟ್ ತಂಡದಿಂದ ಹೊರಬಿದ್ದ ಮೂವರು ಸ್ಟಾರ್ ಕ್ರಿಕೆಟಿಗರ ವೃತ್ತಿಬದುಕು ಕೊನೆಯಾಯಿತಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಮತ್ತೆ ಮೂವರು ಕ್ರಿಕೆಟಿಗರನ್ನು ಕಡೆಗಣಿಸಿದ ಬಿಸಿಸಿಐ ಆಯ್ಕೆ ಸಮಿತಿ:
ಹೌದು, ಲಂಕಾ ಎದುರಿನ ಟೆಸ್ಟ್ ಸರಣಿಯಲ್ಲಿ ರವೀಂದ್ರ ಜಡೇಜಾ ಕಮ್‌ಬ್ಯಾಕ್ ಮಾಡಿದಂತೆ ಇನ್ನೂ ಕೆಲವು ಸ್ಟಾರ್ ಆಟಗಾರರು ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದರು. ಆದರೆ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಅಂತಹ ಮೂವರು ಆಟಗಾರರಿಗೆ ಶಾಕ್ ಕೊಟ್ಟಿದೆ. ಅಷ್ಟಕ್ಕೂ ಯಾರು ಆಟಗಾರರು ನೋಡೋಣ ಬನ್ನಿ.
1. ಸರ್ಫರಾಜ್ ಖಾನ್:
ದೇಶಿ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುತ್ತಾ ಬಂದಿರುವ ಮುಂಬೈ ಮೂಲದ ಸರ್ಫರಾಜ್ ಖಾನ್, ಟೀಂ ಇಂಡಿಯಾಗೆ ಮತ್ತೆ ಕಮ್‌ಬ್ಯಾಕ್ ಮಾಡುವ ವಿಶ್ವಾಸದಲ್ಲಿದ್ದರು. ಭಾರತ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಅವರಂತಹ ಆಟಗಾರರ ಅಗತ್ಯವಿದೆ. ಹೀಗಿದ್ದೂ ಸರ್ಫರಾಜ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಇದರರ್ಥ ಸರ್ಫರಾಜ್‌ಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡೋದು ಸದ್ಯಕ್ಕಂತೂ ಕಷ್ಟಸಾಧ್ಯ.
2. ಮೊಹಮ್ಮದ್ ಶಮಿ:
ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ ಕೂಡಾ ದೇಶಿ ಕ್ರಿಕೆಟ್‌ನಲ್ಲಿ ಅದರಲ್ಲೂ ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಂಗಾಳ ಪರ ಮಿಂಚಿನ ಪ್ರದರ್ಶನ ತೋರಿದ್ದರು. ಬುಮ್ರಾ ತಂಡಕ್ಕೆ ಆಯ್ಕೆಯಾಗಿದ್ದರೂ ಇನ್ನೂ ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿಲ್ಲ. ಹೀಗಾಗಿ ಅನುಭವಿ ವೇಗಿ ಶಮಿಗೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿದೆ. ಅಲ್ಲಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಶಮಿ ವೃತ್ತಿ ಬದುಕು ಮುಗಿದಂತೆ ಎಂದು ಭಾಸವಾಗುತ್ತಿದೆ.
3. ಶ್ರೇಯಸ್ ಅಯ್ಯರ್:
ಭಾರತ ಟಿ20 ತಂಡದ ನಾಯಕ ಶ್ರೇಯಸ್ ಅಯ್ಯರ್‌ಗೆ ಈ ಸಲ ಬಿಗ್ ಶಾಕ್ ಎದುರಾಗಿದೆ. ಭಾರತ ಏಕದಿನ ಹಾಗೂ ಟಿ20 ತಂಡದ ಭಾಗವಾಗಿರುವ ಶ್ರೇಯಸ್ ಅಯ್ಯರ್, ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಟೀಂ ಇಂಡಿಯಾ ಆಯ್ಕೆ ಸಮಿತಿ ಶ್ರೇಯಸ್ ಅಯ್ಯರ್ ಅವರನ್ನು ಕೇವಲ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಸೀಮಿತ ಮಾಡುವ ಇರಾದೆ ಇದ್ದಂತಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್ ಭವಿಷ್ಯ ಕೂಡಾ ಮುಗಿದಂತೆ ಎನ್ನಲಾಗುತ್ತಿದೆ.


