ದೆಹಲಿಯಲ್ಲಿ ಕಳೆದ ಹಲವು ದಿನಗಳಿಂದ ಕೋಲಾಹಲ ನಡೆಯುತ್ತಿದೆ. ಇದರ ನಡುವೆ ಭಾರತ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ದೆಹಲಿ ಆತಿಥ್ಯವಹಿಸಿದೆ. ದೆಹಲಿ ಪಂದ್ಯ ಶಿಫ್ಟ್ ಮಾಡಲಾಗುತ್ತಿದೆಯಾ? ಬಿಸಿಸಿಐ ಉತ್ತರವೇನು?
ನವದೆಹಲಿ (ಅ.12) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ, ಹೋರಾಟ, ಜಾಥಾಗಳಿಂದ ಸಕ್ರಿಯವಾಗಿದೆ. ಕಾನೂನು ಸುವ್ಯವಸ್ಥೆಗಾಗಿ ಕೆಲ ಸೇವೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಒಂದೆಡೆ ದೆಹಲಿಯಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದರೆ, ಮತ್ತೊಂದೆಡೆ ದೆಹಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ದೆಹಲಿಯಲ್ಲಿ ಆಯೋಜಿಸಿರುವ ಮೊದಲ ಏಕದಿನ ಪಂದ್ಯವನ್ನು ಅಹಮ್ಮದಾಬಾದ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತು ಹಲವು ವರದಿಗಳು ಹರಿದಾಡಿತ್ತು. ಸದ್ಯ ಬಿಸಿಸಿಐ ಪಂದ್ಯ ಸ್ಥಳಾಂತರ ಕುರಿತು ಪ್ರತಿಕ್ರಿಯೆ ನೀಡಿದೆ.
ಬಿಸಿಸಿಐ ಸ್ಪಷ್ಟನೆ ಏನು
ಭಾರತ ಹಾಗೂ ಶ್ರೀಲಂಕಾ ನಡುವಿನ 3 ಪಂದ್ಯಯದ ಏಕದಿನ ಸರಣಿ ಡಿಸೆಂಬರ್ 13ರಿಂದ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯ ಅರುಣ್ ಜೇಟ್ಲಿ ಕ್ರೀಡಾಂಗಣ ದೆಹಲಿಯಲ್ಲಿ ನಡೆಯುತ್ತಿದೆ. ಪಂದ್ಯ ಸ್ಥಳಾಂತರ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಪಂದ್ಯಗಳ ಕ್ರೀಡಾಂಗಣ, ದಿನಾಂಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯಿಂದ ಪಂದ್ಯವನ್ನು ಅಹಮ್ಮದಾಬಾದ್‌ಗೆ ಸ್ಥಳಾಂತರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಸಿಸಿಐ ನಿರ್ಧಾರ ಕುರಿತು ಕಾರ್ಯದರ್ಶಿ ಸ್ಪಷ್ಟನೆ
ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗೂ ಪಂದ್ಯಕ್ಕೂ ಯಾವುದೇ ಸಂಬಂಧವಿಲ್ಲ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೆಲ ಕಾಮಗಾರಿಗಳು ನಡೆಯುತ್ತಿತ್ತು. ಹೀಗಾಗಿ ಡಿಸೆಂಬರ್ 13ರ ವೇಳೆಗೆ ಕಾಮಗಾರಿ ಮುಗಿಯುವ ಸಾಧ್ಯತೆಗಳಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಹೀಗಾಗಿ ಪಂದ್ಯ ಸ್ಥಳಾಂತರ ಮಾತುಗಳು ಬಂದಿತ್ತು. ಆದರೆ ಸದ್ಯ ಬಿಸಿಸಿಐ ಪಂದ್ಯ ಸ್ಥಳಾಂತರಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮೊದಲ ಪಂದ್ಯಕ್ಕೆ ದೆಹಲಿ ಆತಿಥ್ಯವಹಿಸಲಿದೆ ಎಂದು ದೇವಜಿತ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ 2ನೇ ಏಕದಿನ
ಭಾರತ ಹಾಗೂ ಶ್ರೀಲಂಕಾ ನಡುವೆ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ ಆಯೋಜಿಸಲಾಗಿದೆ. ವಿಶೇಷ ಅಂದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ 2ನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಅಂತಾರಾಷ್ಟ್ರೀಯ ಪಂದ್ಯ ಆಡುವುದು ಸೂಕ್ತವಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಕೆಎಸ್‌ಸಿಎ ಅಧ್ಯತ್ರ ವೆಂಕಟೇಶ್ ಪ್ರಸಾದ್ ಸತತ ಪ್ರಯತ್ನದಿಂದ ಬೆಂಗಳೂರು ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ.
ಭಾರತ ಶ್ರೀಲಂಕಾ ಏಕದಿನ ಸರಣಿ
- ಮೊದಲ ಏಕದಿನ, ಡಿಸೆಂಬರ್ 13, ದೆಹಲಿ
- ಏರಡನೇ ಏಕದಿನ, ಡಿಸೆಂಬರ್ 16, ಬೆಂಗಳೂರು
- ಮೂರನೇ ಏಕದಿನ, ಡಿಸೆಂಬರ್ 19, ಅಹಮ್ಮಾದಬಾದ್
ಭಾರತ ಶ್ರೀಲಂಕಾ ಟಿ20 ಸರಣಿ
- ಮೊದಲ ಟಿ20, ಡಿಸೆಂಬರ್ 22, ರಾಜ್‌ಕೋಟ್
- ಎರಡನೇ ಟಿ20, ಡಿಸೆಂಬರ್ 24, ಕಟಕ್
- ಮೂರನೇ ಟಿ20, ಡಿಸೆಂಬರ್ 27, ಪುಣೆ


