ಬೆಂಗಳೂರು ಟೆಸ್ಟ್ ಸೋಲಿನ ಬೆನ್ನಲ್ಲೇ ಖಡಕ್ ವಾರ್ನಿಂಗ್ ಕೊಟ್ಟ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ!
ಬೆಂಗಳೂರು ಟೆಸ್ಟ್ ಪಂದ್ಯವನ್ನು ಸೋಲುತ್ತಿದ್ದಂತೆಯೇ ನ್ಯೂಜಿಲೆಂಡ್ ತಂಡಕ್ಕೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ
ಬೆಂಗಳೂರು: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಮ್ ಲೇಥಮ್ ನೇತೃತ್ವದ ನ್ಯೂಜಿಲೆಂಡ್ ತಂಡವು 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಿವೀಸ್ ತಂಡವು 1-0 ಅಂತರದ ಮುನ್ನಡೆ ಸಾಧಿಸಿದೆ. ಇದೀಗ ಈ ಪಂದ್ಯದ ಕುರಿತಂತೆ ಮಾತನಾಡಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಐತಿಹಾಸಿಕ ಟೆಸ್ಟ್ ಗೆಲುವು ಸಾಧಿಸಿದೆ. ಭಾರತದ ನೆಲದಲ್ಲಿ 36 ವರ್ಷಗಳ ಬಳಿಕ ಅಂದರೆ 1988ರ ಬಳಿಕ ಮೊದಲ ಟೆಸ್ಟ್ ಗೆಲುವು ದಾಖಲಿಸುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 46 ರನ್‌ಗಳಿಗೆ ಸರ್ವಪತನ ಕಂಡು ಮುಖಭಂಗಕ್ಕೀಡಾಯಿತು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ ರಚಿನ್ ರವೀಂದ್ರ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡವು 402 ರನ್ ಕಲೆಹಾಕಿತು. ಈ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವು ಬರೋಬ್ಬರಿ 356 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು. ಭಾರೀ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ, ಸರ್ಫರಾಜ್ ಖಾನ್(150) ಹಾಗೂ ರಿಷಭ್ ಪಂತ್(99) ಶತಕ ವಂಚಿತ ಬ್ಯಾಟಿಂಗ್ ನೆರವಿನಿಂದ 462 ರನ್ ಕಲೆಹಾಕಿತು. ಈ ಮೂಲಕ ಕಿವೀಸ್‌ಗೆ ಗೆಲ್ಲಲು 107 ರನ್ ಗುರಿ ನೀಡಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಆರ್‌ಸಿಬಿಗೆ ಬನ್ನಿ: ಬೆಂಗಳೂರು ಫ್ಯಾನ್ಸ್ ಮನವಿಗೆ ರೋಹಿತ್ ಶರ್ಮಾ ಕೊಟ್ಟ ಉತ್ತರ ಹೇಗಿತ್ತು ನೋಡಿ!
ಇದೀಗ ಈ ಪಂದ್ಯ ಕುರಿತಂತೆ ನಾಯಕ ರೋಹಿತ್ ಶರ್ಮಾ ಮನಬಿಚ್ಚಿ ಮಾತನಾಡಿದ್ದಾರೆ. "ಒಮ್ಮೊಮ್ಮೆ ಇಂತಹ ಪರಿಸ್ಥಿತಿಗಳು ಎದುರಾಗುತ್ತವೆ. ನಾವು ಈ ಪಂದ್ಯದಲ್ಲಿ ಏನೆಲ್ಲಾ ಚೆನ್ನಾಗಿ ಮಾಡಿದ್ದೇವೆ ಎನ್ನುವುದನ್ನು ಅರ್ಥಮಾಡಿಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗಬೇಕಿದೆ. ಈ ರೀತಿಯ ಪರಿಸ್ಥಿತಿಗಳನ್ನು ನಾವು ಈ ಹಿಂದೆಯೂ ಎದುರಿಸಿದ್ದೇವೆ. ನಾವು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಸೋತು 0-1ರ ಹಿನ್ನಡೆಯಲ್ಲಿದ್ದೆವು. ಆ ಬಳಿಕ ಆ ಸರಣಿಯನ್ನು 4-1 ಅಂತರದಲ್ಲಿ ಜಯಿಸಿದ್ದೇವೆ ಎನ್ನುವುದು ನೆನಪಿರಲಿ" ಎಂದು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ರೋಹಿತ್ ಶರ್ಮಾ ತೆಗೆದುಕೊಂಡ ಆ ಒಂದು ಕೆಟ್ಟ ನಿರ್ಧಾರದಿಂದ 36 ವರ್ಷಗಳ ಬಳಿಕ ಭಾರತಕ್ಕೆ ಸೋಲಾಗುತ್ತಾ?
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯವು ಅಕ್ಟೋಬರ್ 24ರಿಂದ ಪುಣೆಯಲ್ಲಿ ಆರಂಭವಾಗಲಿದೆ. ಇನ್ನು ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ಮುಂಬೈನ ವಾಂಖೇಡೆ ಮೈದಾನದಲ್ಲಿ ನವೆಂಬರ್ 01ರಿಂದ ಆರಂಭವಾಗಲಿದೆ.