ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಆ್ಯಷಸ್ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಹ್ಯಾರಿ ಬ್ರೂಕ್ ಉಪನಾಯಕರಾಗಿದ್ದು, ಮ್ಯಾಥ್ಯೂ ಪಾಟ್ಸ್ ಮತ್ತು ವಿಲ್ ಜಾಕ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.  

ಲಂಡನ್: ಆ್ಯಷಸ್ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಬೆನ್ ಸ್ಟೋಕ್ಸ್ ನಾಯಕತ್ವದ ತಂಡಕ್ಕೆ ಹ್ಯಾರಿ ಬ್ರೂಕ್ ಅವರನ್ನು ಉಪನಾಯಕರನ್ನಾಗಿ ನೇಮಿಸಲಾಗಿದೆ. ಮ್ಯಾಥ್ಯೂ ಪಾಟ್ಸ್ ಮತ್ತು ವಿಲ್ ಜಾಕ್ಸ್ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 

ಡರ್ಹಾಮ್ ವೇಗಿ ಪಾಟ್ಸ್ ಕೊನೆಯ ಬಾರಿಗೆ ಡಿಸೆಂಬರ್ 2024 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಸರ್ರೆಯ ಜಾಕ್ಸ್ ಡಿಸೆಂಬರ್ 2022 ರಲ್ಲಿ ಪಾಕಿಸ್ತಾನದ ವಿರುದ್ಧ ಒಂದು ಟೆಸ್ಟ್ ಆಡಿದ್ದರು. ಈ ಋತುವಿನಲ್ಲಿ 10 ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳಿಂದ ಪಾಟ್ಸ್ 28 ವಿಕೆಟ್‌ಗಳನ್ನು ಪಡೆದು ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಜಾಕ್ಸ್ ಕೇವಲ ಮೂರು ಇನ್ನಿಂಗ್ಸ್‌ಗಳಲ್ಲಿ ಆಡಿ 136 ರನ್ ಗಳಿಸಿದ್ದಾರೆ. ಎಡ ಮೊಣಕಾಲಿನ ಗಾಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಮಾರ್ಕ್ ವುಡ್ ತಂಡಕ್ಕೆ ಮರಳಿದ್ದಾರೆ. ಭಾರತ ವಿರುದ್ಧದ ಸರಣಿಯಲ್ಲಿ ಬೆರಳಿಗೆ ಗಾಯವಾಗಿದ್ದ ಶೋಯೆಬ್ ಬಶೀರ್ ಕೂಡ ಆ್ಯಷಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಟೋಕ್ಸ್ ಜೊತೆಗೆ, ಅನುಭವಿ ಆಟಗಾರರಾದ ಜೋ ರೂಟ್, ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್ ಮತ್ತು ವಿಕೆಟ್ ಕೀಪರ್ ಆಗಿ ಜೇಮಿ ಸ್ಮಿತ್ ತಂಡದಲ್ಲಿದ್ದಾರೆ. ಜೋಫ್ರಾ ಆರ್ಚರ್ ವೇಗದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ. ಬ್ರೈಡನ್ ಕಾರ್ಸ್, ಗಸ್ ಅಟ್ಕಿನ್‌ಸನ್, ಜೋಶ್ ಟಂಗ್, ಮಾರ್ಕ್ ವುಡ್ ಮತ್ತು ಪಾಟ್ಸ್ ಕೂಡ ವೇಗಿಗಳಾಗಿ ತಂಡ ಸೇರಿದ್ದಾರೆ. ಬಶೀರ್ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಸ್ಥಾನ ಪಡೆದಿದ್ದು. ಜೋ ರೂಟ್, ಜೇಕಬ್ ಬೆಥೆಲ್ ಮತ್ತು ಜಾಕ್ಸ್ ಕೂಡ ಸ್ಪಿನ್ ಬೌಲಿಂಗ್ ಮಾಡಬಲ್ಲರು. ಅತ್ತ, ಭಾರತ ವಿರುದ್ಧದ ಓವಲ್ ಟೆಸ್ಟ್ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದ ಕ್ರಿಸ್ ವೋಕ್ಸ್ ಅವರನ್ನು ಆ್ಯಷಸ್ ಸರಣಿಗೆ ಆಯ್ಕೆ ಮಾಡಿಲ್ಲ.

ಇಂಗ್ಲೆಂಡ್ ಆ್ಯಷಸ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ಜೋಫ್ರಾ ಆರ್ಚರ್, ಗಸ್ ಅಟ್ಕಿನ್‌ಸನ್, ಶೋಯೆಬ್ ಬಶೀರ್, ಜೇಕೊಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪನಾಯಕ), ಬ್ರೈಡನ್ ಕಾರ್ಸೆ, ಝಾಕ್ ಕ್ರಾಲಿ, ಬೆನ್ ಡಕೆಟ್, ವಿಲ್ ಜಾಕ್ಸ್, ಓಲಿ ಪೋಪ್, ಮ್ಯಾಥ್ಯೂ ಪಾಟ್ಸ್, ಜೋ ರೂಟ್, ಜೇಮಿ ಸ್ಮಿತ್, ಜೋಶ್ ಟಂಗ್, ಮಾರ್ಕ್ ವುಡ್.

ಟಿ20 ಸರಣಿಯಲ್ಲಿ ಆರ್ಚರ್ ಇಲ್ಲ

ಆ್ಯಷಸ್ ಸರಣಿಗೆ ಮುನ್ನ, ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ವಿರುದ್ಧ ತಲಾ ಮೂರು ಟಿ20 ಮತ್ತು ಏಕದಿನ ಪಂದ್ಯಗಳನ್ನು ಆಡಲಿದೆ. ಸೀಮಿತ ಓವರ್‌ಗಳ ಸರಣಿಯಲ್ಲಿ ಹ್ಯಾರಿ ಬ್ರೂಕ್ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಬೆನ್ ಡಕೆಟ್, ಸ್ಮಿತ್ ಮತ್ತು ಆರ್ಚರ್‌ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಝಾಕ್ ಕ್ರಾಲಿಗೆ ಮೊದಲ ಬಾರಿಗೆ ಟಿ20ಯಲ್ಲಿ ಅವಕಾಶ ಸಿಕ್ಕಿದೆ. ಸ್ಯಾಮ್ ಕರನ್ ಮತ್ತು ಲಿಯಾಮ್ ಡಾಸನ್ ಏಕದಿನ ತಂಡಕ್ಕೆ ಮರಳಿದ್ದಾರೆ, ವೈಟ್-ಬಾಲ್ ಮಾದರಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಲ್ಯೂಕ್ ವುಡ್‌ಗೂ ಸ್ಥಾನ ಲಭಿಸಿದೆ. ರೆಹಾನ್ ಅಹ್ಮದ್, ಬೆಥೆಲ್, ಸೋನಿ ಬೇಕರ್ ಮತ್ತು ಜೇಮಿ ಓವರ್‌ಟನ್ ಅವರನ್ನು ಎರಡೂ ಸೀಮಿತ ಓವರ್‌ಗಳ ತಂಡಗಳಲ್ಲಿ ಸೇರಿಸಲಾಗಿದೆ.

ಇಂಗ್ಲೆಂಡ್ ಏಕದಿನ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ಜೇಮಿ ಓವರ್‌ಟನ್, ಆದಿಲ್ ರಶೀದ್, ಜೋ ರೂಟ್, ಜೇಮಿ ಸ್ಮಿತ್, ಲ್ಯೂಕ್ ವುಡ್.

ಇಂಗ್ಲೆಂಡ್ ಟಿ20 ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಸೋನಿ ಬೇಕರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಬ್ರೈಡನ್ ಕಾರ್ಸೆ, ಜೋರ್ಡಾನ್ ಕಾಕ್ಸ್, ಝಾಕ್ ಕ್ರಾಲಿ, ಸ್ಯಾಮ್ ಕರನ್, ಲಿಯಾಮ್ ಡಾಸನ್, ಜೇಮಿ ಓವರ್‌ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಲ್ಯೂಕ್ ವುಡ್.

ಅಕ್ಟೋಬರ್ 18 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಟಿ20 ಪಂದ್ಯದೊಂದಿಗೆ ಇಂಗ್ಲೆಂಡ್ ತನ್ನ ನ್ಯೂಜಿಲೆಂಡ್ ಪ್ರವಾಸವನ್ನು ಆರಂಭಿಸಲಿದೆ, ಅಕ್ಟೋಬರ್ 26 ರಂದು ಮೌಂಟ್ ಮೌಂಗನುಯಿಯಲ್ಲಿ ಏಕದಿನ ಪಂದ್ಯ ಆರಂಭವಾಗಲಿದೆ. ನವೆಂಬರ್ 1 ರಂದು ಸರಣಿ ಮುಗಿಯಲಿದೆ. ನಂತರ ನವೆಂಬರ್ ಎರಡನೇ ವಾರದಲ್ಲಿ ಆ್ಯಷಸ್ ತಂಡ ಪರ್ತ್‌ಗೆ ತಲುಪಲಿದೆ. ನವೆಂಬರ್ 21 ರಿಂದ ಆಪ್ಟಸ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ನಡೆಯಲಿದೆ.