ಭಾರತ ಮತ್ತು ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ನ ಮೊದಲ ದಿನ, ಕನ್ನಡಿಗರಾದ ದೇವದತ್ ಪಡಿಕ್ಕಲ್ ಮತ್ತು ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಿದರು. ಪಡಿಕ್ಕಲ್ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದರೆ, ರಾಹುಲ್ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾದರು. ಈ ಜೋಡಿಯ ಶತಕದ ಜೊತೆಯಾಟದಿಂದ ಭಾರತ ಮೊದಲ ದಿನ ಉತ್ತಮ ಮೊತ್ತ ಕಲೆಹಾಕಿದೆ.
ಗಾಲೆ: ಭಾರತ ಹಾಗೂ ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್ ಪಂದ್ಯದ ಮೊದಲ ದಿನ ಕನ್ನಡಿಗರ ದರ್ಬಾರ್ ನಡೆದಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತಾದರೂ ಆ ಬಳಿಕ ನಡೆದದ್ದು ಅಕ್ಷರಶಃ ಕನ್ನಡಿಗರದ್ದೇ ಹವಾ ಎನಿಸಿಕೊಂಡಿತು. ಮೊದಲ ದಿನದಾಟದಲ್ಲೇ ದೇವದತ್ ಪಡಿಕ್ಕಲ್ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದರೆ, ಮತ್ತೋರ್ವ ಕನ್ನಡಿಗ ಕೆ ಎಲ್ ರಾಹುಲ್ ಅಜೇಯ ಅರ್ಧಶತಕ ಸಿಡಿಸಿದ್ದಾರೆ.
ಗಾಲೆ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮೊದಲು ಬ್ಯಾಟ್ ಮಾಡುವ ತೀರ್ಮಾನ ತೆಗೆದುಕೊಂಡರು. ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಕೆ ಎಲ್ ರಾಹುಲ್ 47 ರನ್‌ಗಳ ಜತೆಯಾಟವಾಡಿದರು. ಚುರುಕಿನ ಬ್ಯಾಟಿಂಗ್ ನಡೆಸಿದ ಜೈಸ್ವಾಲ್ 37 ಎಸೆತಗಳನ್ನು ಎದುರಿಸಿ 32 ರನ್ ಗಳಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು.
ಗಾಲೆಯಲ್ಲಿ ಕನ್ನಡಿಗರ ದರ್ಬಾರ್:
ಜೈಸ್ವಾಲ್ ವಿಕೆಟ್ ಪತನದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ದೇವದತ್ ಪಡಿಕ್ಕಲ್ ಹಾಗೂ ಕೆ ಎಲ್ ರಾಹುಲ್ ಆಕರ್ಷಕ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅರಂಭದಲ್ಲಿ ರಾಹುಲ್ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದರೆ, ಪಡಿಕ್ಕಲ್ ಚುರುಕಾಗಿ ರನ್ ಗಳಿಸಲಾರಂಭಿಸಿದರು. ಎರಡನೇ ವಿಕೆಟ್‌ಗೆ ಈ ಜೋಡಿ 252 ಎಸೆತಗಳನ್ನು ಎದುರಿಸಿ 150 ರನ್‌ಗಳ ಜತೆಯಾಟವಾಡಿದರು. ಕೆ ಎಲ್ ರಾಹುಲ್ 133 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 77 ರನ್ ಬಾರಿಸಿ ರಿಟೈರ್ಡ್ ಹರ್ಟ್ ಆಗಿ ಪೆವಿಲಿಯನ್ ಸೇರಿದರು.
ಚೊಚ್ಚಲ ಟೆಸ್ಟ್ ಶತಕ ಚಚ್ಚಿದ ದೇವದತ್ ಪಡಿಕ್ಕಲ್
ಇನ್ನು ಮತ್ತೊಂದು ತುದಿಯಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಲಂಕಾ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಟೆಸ್ಟ್ ಪಂದ್ಯವಾದರೂ ಏಕದಿನ ಮಾದರಿಯಂತೆ ಬ್ಯಾಟ್ ಬೀಸಿದ ಪಡಿಕ್ಕಲ್ ಕೇವಲ 134 ಎಸೆತಗಳನ್ನು ಎದುರಿಸಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 21ನೇ ಶತಮಾನದಲ್ಲಿ ಭಾರತ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿದು ಶತಕ ಸಿಡಿಸಿದ ಭಾರತದ ಎರಡನೇ ಎಡಗೈ ಬ್ಯಾಟರ್ ಎನ್ನುವ ಹಿರಿಮೆಗೆ ಪಡಿಕ್ಕಲ್ ಪಾತ್ರರಾಗಿದ್ದಾರೆ. ಈ ಮೊದಲು 2002ರಲ್ಲಿ ಸೌರವ್ ಗಂಗೂಲಿ, ಜಿಂಬಾಬ್ವೆ ಎದುರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿದು ಶತಕ ಸಿಡಿಸಿದ್ದರು.
ನಾಯಕ ಶುಭ್‌ಮನ್ ಗಿಲ್ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಪ್ರಭಾತ್ ಜಯಸೂರ್ಯ ಅವಕಾಶ ನೀಡಲಿಲ್ಲ. ಗಿಲ್ 16 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಅನುಭವಿಸಿದರು.
ಸದ್ಯ 62 ಓವರ್ ಅಂತ್ಯದ ವೇಳೆಗೆ ಭಾರತ ಎರಡು ವಿಕೆಟ್ ಕಳೆದುಕೊಂಡು 237 ರನ್ ಬಾರಿಸಿದ್ದು, ದೇವದತ್ ಪಡಿಕ್ಕಲ್ 107 ಹಾಗೂ ರಿಷಭ್ ಪಂತ್ ಒಂದು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.


