ಗಾಲೆಯಲ್ಲಿ ಆರಂಭವಾದ ಭಾರತ-ಶ್ರೀಲಂಕಾ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದ ಯುವ ಸ್ಪಿನ್ನರ್ ಕೇಶಾರ ನುವಾಂತ ಲಂಕಾ ಪರ ಪಾದಾರ್ಪಣೆ ಮಾಡಿದ್ದು, ಸರ್ಫರಾಜ್ ಖಾನ್‌ಗೆ ಆಡುವ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ.

ಗಾಲೆ: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದಿನಿಂದ ಆರಂಭವಾಗಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ. ಇನ್ನು ಅಭ್ಯಾಸ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳನ್ನು ಕಾಡಿದ್ದ ಲಂಕಾದ 25 ವರ್ಷದ ಸ್ಪಿನ್ನರ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಲಂಕಾ ತಂಡಕ್ಕೆ ಯುವ ಸ್ಪಿನ್ನರ್ ಪಾದಾರ್ಪಣೆ:

ಭಾರತ ಎದುರಿನ ಮಹತ್ವದ ಮೊದಲ ಟೆಸ್ಟ್ ಪಂದ್ಯದಲ್ಲಿ ಲಂಕಾ ಪರ ಪ್ರತಿಭಾನ್ವಿತ ಆಫ್‌ಸ್ಪಿನ್ನರ್ ಕೇಶಾರ ನುವಾಂತ ಪಾದಾರ್ಪಣೆ ಮಾಡಿದ್ದಾರೆ. ಭಾರತ ಎದುರಿನ ಅಭ್ಯಾಸ ಪಂದ್ಯದಲ್ಲಿ ಲಂಕಾ ಇಲೆವನ್ ಪರ ಕಣಕ್ಕಿಳಿದಿದ್ದ ಈ ಆಫ್‌ಸ್ಪಿನ್ನರ್ ಭಾರತದ ಕೆ ಎಲ್ ರಾಹುಲ್, ಶುಭ್‌ಮನ್ ಗಿಲ್ ಹಾಗೂ ರಿಷಭ್ ಪಂತ್ ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಇದರ ಬೆನ್ನಲ್ಲೇ ಇದೀಗ ಲಂಕಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ.

ಸರ್ಫರಾಜ್ ಖಾನ್‌ಗೆ ನಿರಾಸೆ:

ಇನ್ನು ಕೊನೆಯ ಕ್ಷಣದಲ್ಲಿ ಸಾಯಿ ಸುದರ್ಶನ್ ಬದಲಿಗೆ ಭಾರತ ಟೆಸ್ಟ್ ತಂಡ ಕೂಡಿಕೊಂಡ ಮುಂಬೈ ಮೂಲದ ಬ್ಯಾಟರ್ ಸರ್ಫರಾಜ್ ಖಾನ್‌ಗೆ ನಿರಾಸೆ ಎದುರಾಗಿದೆ. ಸರ್ಫರಾಜ್ ಇದೀಗ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಧ್ರುವ್ ಜುರೆಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆಬಹುದು ಎನ್ನುವ ಸರ್ಫರಾಜ್ ಖಾನ್ ನಿರೀಕ್ಷೆ ಹುಸಿಯಾಗಿದೆ. ಕಳೆದ ಸರಣಿಯಲ್ಲಿ ಕಣಕ್ಕಿಳಿದ ತಂಡವೇ ಇಂದು ಕಣಕ್ಕಿಳಿದಿದೆ. ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ನಾಯಕ ಶುಭ್‌ಮನ್ ಗಿಲ್ ಟಾಸ್ ವೇಳೆ ಸ್ಪಷ್ಟಪಡಿಸಿದರು.

ಉಭಯ ತಂಡಗಳ ಆಟಗಾರರ ಪಟ್ಟಿ ಹೀಗಿದೆ:

ಭಾರತ: ಯಶಸ್ವಿ ಜೈಸ್ವಾಲ್, ಕೆ ಎಲ್ ರಾಹುಲ್, ದೇವದತ್ ಪಡಿಕ್ಕಲ್, ಶುಭ್‌ಮನ್ ಗಿಲ್(ನಾಯಕ), ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಧ್ರುವ್ ಜುರೆಲ್, ಮಾನವ್ ಸುತಾರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ದ್ ಕೃಷ್ಣ.

ಶ್ರೀಲಂಕಾ: ಲಹಿರು ಉದಾರ, ನಿಶಾನ್ ಮಧುಶಕಾ, ದಿನೇಶ್ ಚಾಂಡಿಮಲ್, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ(ನಾಯಕ), ಸೋನಲ್ ದಿನುಶಾ, ನಿರ್ಷೋತ್ ಡಿಕ್‌ವೆಲ್ಲಾ(ವಿಕೆಟ್ ಕೀಪರ್), ಕೇಶರಾ ನುವಾಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಶಿತಾ ಫೆರ್ನಾಂಡೊ.