ರವಿಚಂದ್ರನ್ ಅಶ್ವಿನ್ ಅವರು ತಮ್ಮ ಯೂಟ್ಯೂಬ್ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಅವರ ಮನೆಗೆ ದಿಢೀರನೆ ಪೊಲೀಸರು ಆಗಮಿಸಿದ್ದರು. ಇದು ಯಾವುದೇ ಕಾನೂನು ಸಮಸ್ಯೆಯಾಗಿರದೆ ಕೇವಲ ವೀಸಾ ಮತ್ತು ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಸಾಮಾನ್ಯ ಪೊಲೀಸ್ ವೆರಿಫಿಕೇಶನ್‌ ಪ್ರಕ್ರಿಯೆಯಾಗಿತ್ತು ಎಂದು ತಿಳಿದುಬಂದಿದೆ.

ಭಾರತದ ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾಗ ಏಕಾಏಕಿ ಪೊಲೀಸರು ಎಂಟ್ರಿ ಕೊಟ್ಟಿದ್ದರಿಂದ ಅಶ್ವಿನ್ ವಿಡಿಯೋ ರೆಕಾರ್ಡಿಂಗ್ ಅನ್ನು ಮಧ್ಯದಲ್ಲೇ ನಿಲ್ಲಿಸಬೇಕಾದ ಪ್ರಸಂಗ ನಡೆಯಿತು. ಪೊಲೀಸರು ಮನೆಗೆ ಬಂದ ವಿಷಯ ತಿಳಿದು ಅಶ್ವಿನ್ ಅವರ ಪತ್ನಿ ಕೂಡ ಆತಂಕಗೊಂಡಿದ್ದರು. ಹಾಗಾದರೆ ಅಶ್ವಿನ್ ಮನೆಗೆ ಪೊಲೀಸರು ಬಂದಿದ್ದೇಕೆ? ಇಲ್ಲಿದೆ ಸಂಪೂರ್ಣ ವಿವರ.

ವಿಡಿಯೋ ರೆಕಾರ್ಡಿಂಗ್ ವೇಳೆ ತಡೆ

ಗಾಲ್ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಸಂಬಂಧಿಸಿದಂತೆ ಅಶ್ವಿನ್ ತಮ್ಮ ಮನೆಯಲ್ಲಿ ವಿಡಿಯೋ ಒಂದನ್ನು ರೆಕಾರ್ಡ್ ಮಾಡುತ್ತಿದ್ದರು. ಈ ವೇಳೆ ಅವರ ಮನೆಯ ಸೆಕ್ಯೂರಿಟಿ ಗಾರ್ಡ್ ಅಶ್ವಿನ್‌ಗೆ ಸತತವಾಗಿ ಫೋನ್ ಕಾಲ್ ಮಾಡಿದ್ದಾರೆ. ಆರಂಭದಲ್ಲಿ ಅಶ್ವಿನ್ ಈ ಕಾಲ್‌ಗಳನ್ನು ನಿರ್ಲಕ್ಷಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಬಳಿಕ ಅವರ ಪತ್ನಿಗೂ ಕರೆ ಮಾಡಿದ್ದಾರೆ. ಪತ್ನಿಯಿಂದ ಸತತ ಕರೆಗಳು ಬಂದಾಗ ಅಶ್ವಿನ್ ಫೋನ್ ರಿಸೀವ್ ಮಾಡಿದ್ದಾರೆ. ಆಗ ಪೊಲೀಸರು ಮನೆ ಬಾಗಿಲಿಗೆ ಬಂದಿದ್ದಾರೆ ಎಂಬ ವಿಷಯ ತಿಳಿದುಬಂದಿದೆ.

ಖ್ಯಾತ ಕ್ರೀಡಾ ಪತ್ರಕರ್ತ ವಿಮಲ್ ಕುಮಾರ್ ಅವರೊಂದಿಗೆ ಅಶ್ವಿನ್ ಈ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ಪೊಲೀಸರು ಬಂದ ವಿಷಯ ತಿಳಿದು ಅಶ್ವಿನ್ ರೆಕಾರ್ಡಿಂಗ್ ನಿಲ್ಲಿಸಿದ್ದರು. ಕೆಲಸ ಮುಗಿದು ಮತ್ತೆ ರೆಕಾರ್ಡಿಂಗ್ ಆರಂಭಿಸಿದಾಗ ಪತ್ರಕರ್ತ ವಿಮಲ್ ಕುಮಾರ್ ಅವರು ತಮಾಷೆಯಾಗಿ, ನೀವು ಅಂತಹದ್ದೇನು ಮಾಡಿದ್ದೀರಿ ಎಂದು ಪೊಲೀಸರು ನಿಮ್ಮನ್ನು ಹಿಡಿಯಲು ಮನೆಗೆ ಬಂದಿದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಆಗ ಅಶ್ವಿನ್ ನಗುತ್ತಲೇ ಅಸಲಿ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿದ ಅಶ್ವಿನ್ ನನ್ನ ಮನೆಯ ಸೆಕ್ಯೂರಿಟಿಯಿಂದ ಸತತ ಕರೆಗಳು ಬಂದವು. ಸಾಮಾನ್ಯವಾಗಿ ಅವರು ಇಷ್ಟೊಂದು ಕರೆ ಮಾಡುವುದಿಲ್ಲ. ಬಳಿಕ ನನ್ನ ಪತ್ನಿ ಫೋನ್ ಮಾಡಿ 'ಪೊಲೀಸರು ಮನೆ ಬಾಗಿಲಲ್ಲಿ ನಿಂತಿದ್ದಾರೆ ಎಂದಳು. ವಿಷಯ ಏನೆಂದರೆ ನಾನು ಇತ್ತೀಚೆಗೆ ವೀಸಾಗಾಗಿ (Visa) ನನ್ನ ಪಾಸ್‌ಪೋರ್ಟ್ ನೀಡಿದ್ದೆ. ಅದರ ಪೊಲೀಸ್ ವೆರಿಫಿಕೇಶನ್ (Verification) ಪ್ರಕ್ರಿಯೆಗಾಗಿ ಪೊಲೀಸರು ಮನೆಗೆ ಬಂದಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತ ವಿಮಲ್ ಕುಮಾರ್ ನಿಮ್ಮಂತಹ ದೊಡ್ಡ ಆಟಗಾರರಿಗೆ ಹೆಸರೇ ಸಾಕು. ಎಲ್ಲ ಕೆಲಸಗಳೂ ತಾವಾಗಿಯೇ ಆಗುತ್ತವೆ. ನಮ್ಮಂತಹ ಸಾಮಾನ್ಯ ಜನರಿಗೆ ಮಾತ್ರ ಇಂತಹ ಪೊಲೀಸ್ ವೆರಿಫಿಕೇಶನ್ ಪ್ರಕ್ರಿಯೆಗಳು ಇರುತ್ತವೆ ಎಂದರು. ಇದಕ್ಕೆ ಅತ್ಯಂತ ನಮ್ರತೆಯಿಂದ ಉತ್ತರಿಸಿದ ಅಶ್ವಿನ್ ನನಗೆ ಸಾಮಾನ್ಯ ಬದುಕು ನಡೆಸಲು ಇಷ್ಟ. ಹಾಗಾಗಿ ನಾನು ಸದಾ ಸಾಮಾನ್ಯನಾಗಿಯೇ ಇರಲು ಬಯಸುತ್ತೇನೆ ಎಂದಿದ್ದಾರೆ. ಮಾಜಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಸಾಮಾಜಿಕ ಜಾಲತಾಣಗಳು ಹಾಗೂ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಕ್ರಿಕೆಟ್ ವಿಶ್ಲೇಷಣೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. 39 ವರ್ಷದ ಅಶ್ವಿನ್ ಭಾರತದ ಪರ 106 ಟೆಸ್ಟ್ (537 ವಿಕೆಟ್), 116 ಏಕದಿನ (156 ವಿಕೆಟ್) ಮತ್ತು 65 ಟಿ20 (72 ವಿಕೆಟ್) ಪಂದ್ಯಗಳನ್ನು ಆಡಿದ್ದಾರೆ.