ಲಂಕಾ ಪ್ರವಾಸದಲ್ಲಿರುವ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ. ಭಾರತಕ್ಕೆ 600ನೇ ಐತಿಹಾಸಿಕ ಟೆಸ್ಟ್ ಪಂದ್ಯ ಇದಾಗಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ, ಮಳೆಯ ಅಡ್ಡಿಯ ನಡುವೆಯೂ ಉತ್ತಮ ಆರಂಭ ಪಡೆದಿದೆ.
ಗಾಲೆ: ದೇಶಾದ್ಯಂತ ಇಂದು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಇದರ ಬೆನ್ನಲ್ಲೇ ಲಂಕಾ ಪ್ರವಾಸದಲ್ಲಿರುವ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, ಮೊದಲ ಟೆಸ್ಟ್ ಪಂದ್ಯ ಆರಂಭಕ್ಕೂ ಮೊದಲೇ ದ್ವೀಪರಾಷ್ಟ್ರದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಹಾಗೂ ಟೀಂ ಇಂಡಿಯಾ ಹೆಡ್‌ಕೋಚ್ ಗೌತಮ್ ಗಂಭೀರ್ ಧ್ವಜರೋಹಣ ಮಾಡಿದರು. ಈ ಸಂದರ್ಭದಲ್ಲಿ ಭಾರತ ಕ್ರಿಕೆಟ್ ತಂಡದ ಆಟಗಾರರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ಹೀಗಿತ್ತು ನೋಡಿ ವಿಡಿಯೋ:
600ನೇ ಐತಿಹಾಸಿಕ ಟೆಸ್ಟ್ ಪಂದ್ಯವನ್ನಾಡುತ್ತಿರುವ ಭಾರತ:
ಅಂದಹಾಗೆ ಇಂದಿನಿಂದ ಆರಂಭವಾದ ಭಾರತ ಹಾಗೂ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ಟೀಂ ಇಂಡಿಯಾ ಆಡುತ್ತಿರುವ 600ನೇ ಟೆಸ್ಟ್ ಪಂದ್ಯವಾಗಿದೆ. ಭಾರತ ತಂಡವು 1932ರಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ಎದುರು ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. ಇದಾಗಿ ಬರೋಬ್ಬರಿ 94 ವರ್ಷಗಳ ಬಳಿಕ ಭಾರತ ತಂಡವು 600ನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಈ ಮೂಲಕ ಕ್ರಿಕೆಟ್ ಜಗತ್ತಿನ ಇತಿಹಾಸದಲ್ಲಿ ಆರು ನೂರು ಟೆಸ್ಟ್ ಪಂದ್ಯವನ್ನಾಡಿದ ಮೂರನೇ ತಂಡ ಎನ್ನುವ ಎಲೈಟ್ ಕ್ಲಬ್‌ಗೆ ಟೀಂ ಇಂಡಿಯಾ ಸೇರ್ಪಡೆಯಾಗಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳು 600 ಟೆಸ್ಟ್ ಪಂದ್ಯಗಳನ್ನಾಡಿವೆ.
ಆರಂಭಿಕ ಆಘಾತದ ಬಳಿಕ ಬೃಹತ್ ಮೊತ್ತದತ್ತ ಟೀಂ ಇಂಡಿಯಾ:
ಶ್ರೀಲಂಕಾ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ಬ್ಯಾಟಿಂಗ್ ಆಯ್ದುಕೊಂಡರು. ಮೊದಲ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಹಾಗೂ ಕೆ ಎಲ್ ರಾಹುಲ್ 11 ಓವರ್‌ಗಳಲ್ಲಿ 47 ರನ್‌ಗಳ ಜತೆಯಾಟವಾಡಿದರು. 32 ರನ್ ಗಳಿಸಿ ಅರ್ಧಶತಕ ದಾಖಲಿಸುವತ್ತ ದಾಪುಗಾಲು ಇಡುತ್ತಿದ್ದ ಜೈಸ್ವಾಲ್, ಇಲ್ಲದ ರನ್ ಕದಿಯುವ ವೇಳೆಯಲ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಎರಡನೇ ವಿಕೆಟ್‌ಗೆ ಜತೆಯಾದ ಕನ್ನಡಿಗ ಜೋಡಿ ಕೆ ಎಲ್ ರಾಹುಲ್ ಹಾಗೂ ದೇವದತ್ ಪಡಿಕ್ಕಲ್ ಆಕರ್ಷಕ ಅರ್ಧಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಎರಡನೇ ವಿಕೆಟ್‌ಗೆ ಪಡಿಕ್ಕಲ್ ಹಾಗೂ ರಾಹುಲ್ ಮುರಿಯದ 54 ರನ್‌ಗಳ ಜತೆಯಾಟವಾಡಿದೆ. ಸದ್ಯ ಭಾರತ ತಂಡ 27 ಓವರ್ ಅಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 101 ರನ್ ಬಾರಿಸಿದೆ.
ಪಂದ್ಯಕ್ಕೆ ಮಳೆ ಅಡ್ಡಿ:
ಟೀಂ ಇಂಡಿಯಾ ಆಕರ್ಷಕ ಜತೆಯಾಟದ ಮೂಲಕ ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿರುವ ಹೊತ್ತಿನಲ್ಲೇ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಸದ್ಯ ಪಡಿಕ್ಕಲ್ 35 ಹಾಗೂ ರಾಹುಲ್ 32 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮಳೆ ನಿಂತ ಬಳಿಕ ಮತ್ತೆ ಪಂದ್ಯಾಟ ಆರಂಭವಾಗಲಿದೆ.


