ಬರ್ತ್‌ ಡೇ ಬಾಯ್ ಕೊಹ್ಲಿ ಶತಕ; ಹರಿಣಗಳಿಗೆ ಕಠಿಣ ಗುರಿ ನೀಡಿದ ಭಾರತ

ಇಲ್ಲಿನ ಈಡನ್‌ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಸ್ಪೋಟಕ ಆರಂಭವನ್ನೇ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಮೊದಲ ವಿಕೆಟ್‌ಗೆ ಕೇವಲ 5.5 ಓವರ್‌ಗಳಲ್ಲಿ 62 ರನ್‌ಗಳ ಜತೆಯಾಟವಾಡುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಟ್ಟರು.

ICC World Cup 2023 Virat Kohli Century powers Team India Set 327 runs target to South Africa kvn

ಕೋಲ್ಕತಾ(ನ.05): ಟೀಂ ಇಂಡಿಯಾ ರನ್ ಮಷೀನ್, ಬರ್ತ್‌ ಡೇ ಬಾಯ್ ವಿರಾಟ್ ಕೊಹ್ಲಿ ಬಾರಿಸಿದ ಸಮಯೋಚಿತ ಶತಕ ಹಾಗೂ ಶ್ರೇಯಸ್ ಅಯ್ಯರ್ ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಬಾರಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ ಸವಾಲಿನ ಗುರಿ ನೀಡಿದೆ.

ಇಲ್ಲಿನ ಈಡನ್‌ ಗಾರ್ಡನ್ಸ್ ಮೈದಾನದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಸ್ಪೋಟಕ ಆರಂಭವನ್ನೇ ಪಡೆಯಿತು. ನಾಯಕ ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಮೊದಲ ವಿಕೆಟ್‌ಗೆ ಕೇವಲ 5.5 ಓವರ್‌ಗಳಲ್ಲಿ 62 ರನ್‌ಗಳ ಜತೆಯಾಟವಾಡುವ ಮೂಲಕ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ರೋಹಿತ್ ಶರ್ಮಾ ಕೇವಲ 24 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 40 ರನ್ ಬಾರಿಸಿ ಕಗಿಸೋ ರಬಾಡಗೆ ವಿಕೆಟ್ ಒಪ್ಪಿಸಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ 23 ರನ್ ಬಾರಿಸಿ ಕೇಶವ್ ಮಹಾರಾಜ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಕೊಹ್ಲಿ- ಶ್ರೇಯಸ್ ಅಯ್ಯರ್ ಜುಗಲ್ಬಂದಿ: ಶುಭ್‌ಮನ್ ಗಿಲ್ ವಿಕೆಟ್ ಪತನದ ಬಳಿಕ ಮೂರನೇ ವಿಕೆಟ್‌ಗೆ ಜತೆಯಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾದರು. ಈ ಜೋಡಿ 158 ಎಸೆತಗಳನ್ನು ಎದುರಿಸಿ 134 ರನ್‌ಗಳ ಜತೆಯಾಟವಾಡಿತು. ಶ್ರೇಯಸ್‌ ಅಯ್ಯರ್ 87 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 77 ರನ್ ಸಿಡಿಸಿ ಲುಂಗಿ ಎಂಗಿಡಿಗೆ ವಿಕೆಟ್ ಒಪ್ಪಿಸಿದರು.

ಬರ್ತ್‌ ಡೇ ಬಾಯ್ ಕೊಹ್ಲಿಗೆ ಸೆಂಚುರಿ ಸಂಭ್ರಮ; ಈಡನ್‌ ಗಾರ್ಡನ್ಸ್‌ನಲ್ಲಿ ತೆಂಡುಲ್ಕರ್ ದಾಖಲೆ ಸರಿಸಮ..!

ಬರ್ತ್‌ಡೇ ಬಾಯ್‌ಗೆ ಶತಕದ ಸಂಭ್ರಮ: ಇಂದು 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ ಸಮಯೋಚಿತ ಶತಕ ಸಿಡಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಂಡರು. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 49ನೇ ಶತಕ ಸಿಡಿಸುವ ಮೂಲಕ ದಶಕಗಳ ಕಾಲ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಗರಿಷ್ಠ ಏಕದಿನ ಶತಕದ ಸಾಧನೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾದರು. ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕ ಸಿಡಿಸಲು 452 ಇನಿಂಗ್ಸ್‌ಗಳನ್ನು ತೆಗೆದುಕೊಂಡರೆ, ವಿರಾಟ್ ಕೊಹ್ಲಿ ಕೇವಲ 277 ಇನಿಂಗ್ಸ್‌ಗಳಲ್ಲಿ 49 ಏಕದಿನ ಶತಕದ ಸಾಧನೆ ಮಾಡಿದರು. ಅಂತಿಮವಾಗಿ ವಿರಾಟ್ ಕೊಹ್ಲಿ 121 ಎಸೆತಗಳನ್ನು ಎದುರಿಸಿ 10 ಬೌಂಡರಿ ಸಹಿತ 101 ರನ್ ಬಾರಿಸಿ ಅಜೇಯರಾಗುಳಿದರು.

ಇನ್ನುಳಿದಂತೆ ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 14 ಎಸೆತಗಳಲ್ಲಿ 22 ರನ್ ಸಿಡಿಸಿದರೆ, ಆಲ್ರೌಂಡರ್ ಜಡೇಜಾ 15 ಎಸೆತಗಳಲ್ಲಿ 3 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 29 ರನ್ ಬಾರಿಸಿ ತಂಡ ಕಠಿಣ ಮೊತ್ತ ಕಲೆಹಾಕಲು ನೆರವಾದರು.
 

Latest Videos
Follow Us:
Download App:
  • android
  • ios