ಭಾರತ ಹೊರತುಪಡಿಸಿ ಇತರ ಪಂದ್ಯಗಳ ಟಿಕೆಟ್‌ಗಳನ್ನು ಬುಕ್‌ ಮೈ ಶೋನಲ್ಲಿ ಮಾರಾಟಕ್ಕೆ ಇಡಲಾಗಿದೆ. ಆದರೆ ಕೆಲವೇ ಸ್ಟ್ಯಾಂಡ್‌ಗಳ ಒಂದೆರಡು ಸಾವಿರ ಟಿಕೆಟ್‌ಗಳನ್ನು ಮಾತ್ರ ಮಾರಾಟಕ್ಕೆ ಇಟ್ಟಿದ್ದು, ಹೀಗಾಗಿ ಏಕಕಾಲಕ್ಕೆ ವೆಬ್‌ಸೈಟ್‌ ತೆರೆಯುವ ಪ್ರೇಕ್ಷಕರಿಗೆ ಟಿಕೆಟ್‌ ಖರೀದಿಸಲು ಸಾಧ್ಯವಾಗುತ್ತಿಲ್ಲ.

ನವದೆಹಲಿ(ಆ.26): ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಐಸಿಸಿ ವಿಶ್ವಕಪ್‌ ಪಂದ್ಯಗಳ ಟಿಕೆಟ್‌ ಮಾರಾಟ ಆನ್‌ಲೈನ್‌ನಲ್ಲಿ ಆರಂಭಗೊಂಡಿದ್ದರೂ, ಐಸಿಸಿ ಹಾಗೂ ಬಿಸಿಸಿಐನ ಎಡವಟ್ಟಿನಿಂದಾಗಿ ಟಿಕೆಟ್‌ ಖರೀದಿಸಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಭಾರತ ಹೊರತುಪಡಿಸಿ ಇತರ ಪಂದ್ಯಗಳ ಟಿಕೆಟ್‌ಗಳನ್ನು ಬುಕ್‌ ಮೈ ಶೋನಲ್ಲಿ ಮಾರಾಟಕ್ಕೆ ಇಡಲಾಗಿದೆ. ಆದರೆ ಕೆಲವೇ ಸ್ಟ್ಯಾಂಡ್‌ಗಳ ಒಂದೆರಡು ಸಾವಿರ ಟಿಕೆಟ್‌ಗಳನ್ನು ಮಾತ್ರ ಮಾರಾಟಕ್ಕೆ ಇಟ್ಟಿದ್ದು, ಹೀಗಾಗಿ ಏಕಕಾಲಕ್ಕೆ ವೆಬ್‌ಸೈಟ್‌ ತೆರೆಯುವ ಪ್ರೇಕ್ಷಕರಿಗೆ ಟಿಕೆಟ್‌ ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಲ್ಲದೇ ಶುಕ್ರವಾರ ಸುಮಾರು 40 ನಿಮಿಷಗಳ ಕಾಲ ಅಧಿಕೃತ ವೆಬ್‌ಸೈಟ್‌, ಆ್ಯಪ್‌ ಸ್ಥಗಿತಗೊಂಡಿದ್ದು, ಟಿಕೆಟ್‌ ಖರೀದಿಸಲಾಗದೆ ಅಭಿಮಾನಿಗಳು ನಿರಾಸೆ ಅನುಭವಿಸಿದರು.

ಇದೇ ವೇಳೆ ಕೆಲ ಸ್ಟ್ಯಾಂಡ್‌ಗಳಿಗೆ ಗರಿಷ್ಠ 2, ಕೆಲ ಸ್ಟ್ಯಾಂಡ್‌ಗಳಿಗೆ ಗರಿಷ್ಠ 4 ಟಿಕೆಟ್‌ಗಳನ್ನು ಖರೀದಿಸಲು ಅವಕಾಶವಿದೆ. ಒಂದೊಂದೇ ಸ್ಟ್ಯಾಂಡ್‌ಗಳ ಟಿಕೆಟ್‌ಗಳು ಮಾರಾಟವಾಗುತ್ತಿರುವ ಕಾರಣ, ಯಾವ ಸ್ಟ್ಯಾಂಡ್‌ನ ಟಿಕೆಟ್‌ ಖರೀದಿಸಬೇಕು, ತಮಗೆ ಬೇಕಿರುವ ಜಾಗದ ಟಿಕೆಟ್‌ ಮಾರಾಟ ಯಾವಾಗ ನಡೆಯಲಿದೆ, ಎಷ್ಟು ಟಿಕೆಟ್‌ಗಳು ಲಭ್ಯವಿರಲಿದೆ ಎನ್ನುವ ಮಾಹಿತಿಯೂ ಸಿಗುತ್ತಿಲ್ಲ. ಇದು ಅಭಿಮಾನಿಗಳಲ್ಲಿ ಇನ್ನಷ್ಟು ಸಿಟ್ಟು ತರಿಸಿದೆ.

ಸೂಕ್ಷ್ಮ ಮಾಹಿತಿ ಸೋರಿಕೆ ಮಾಡಿದ ವಿರಾಟ್ ಕೊಹ್ಲಿಗೆ ಬಿಸಿಸಿಐ ಖಡಕ್ ವಾರ್ನಿಂಗ್..! ಏನಾಯ್ತು?

ಈ ಮೊದಲು ಕೂಡಾ ಟಿಕೆಟ್‌ ಮಾರಾಟ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದ ಬಿಸಿಸಿಐ, ಐಸಿಸಿ ಮತ್ತೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಲವರು ಸಾಮಾಜಿಕ ತಾಣಗಳಲ್ಲಿ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಪಂದ್ಯಗಳಿಗೆ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಶೀರ್ಷಿಕೆ ಪ್ರಾಯೋಜಕತ್ವ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ತವರಿನ ಅಂತಾರಾಷ್ಟ್ರೀಯ ಪಂದ್ಯಗಳ ಶೀರ್ಷಿಕೆ ಪ್ರಾಯೋಜಕತ್ವವನ್ನು ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ತನ್ನ ತೆಕ್ಕೆಗೆ ಪಡೆದಿದೆ. ಪ್ರತಿ ಪಂದ್ಯಕ್ಕೆ 4.2 ಕೋಟಿ ರು. ಪಾವತಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದು, 3 ವರ್ಷಗಳ ಅವಧಿಗೆ ಅಂದರೆ 2026ರ ವರೆಗೂ ಈ ಒಪ್ಪಂದ ಇರಲಿದೆ.

ಈ ಅವಧಿಯಲ್ಲಿ ಒಟ್ಟು 56 ಪಂದ್ಯಗಳಿಗೆ ಬಿಸಿಸಿಐ ಬರೋಬ್ಬರಿ 235.2 ಕೋಟಿ ರು. ಗಳಿಸಲಿದೆ. ಶುಕ್ರವಾರ ನಡೆದ ಇ-ಹರಾಜಿನಲ್ಲಿ ಐಡಿಎಫ್‌ಸಿ ಹಾಗೂ ಸೋನಿ ಸ್ಪೋರ್ಟ್ಸ್‌ ಸಂಸ್ಥೆಗಳು ಪಾಲ್ಗೊಂಡಿದ್ದವು. ಪ್ರಾಯೋಜಕತ್ವಕ್ಕೆ ಬಿಸಿಸಿಐ ಆರಂಭದಲ್ಲಿ 3.8 ಕೋಟಿ ರು. ಮೂಲಬೆಲೆ ನಿಗದಿ ಪಡಿಸಿತ್ತು. ಆದರೆ ಯಾವುದೇ ಸಂಸ್ಥೆಗಳು ಟೆಂಡರ್‌ ಹಾಕಲು ಆಸಕ್ತಿ ತೋರದ ಕಾರಣ, ಮೂಲಬೆಲೆಯಲ್ಲಿ 2.4 ಕೋಟಿ ರು.ಗೆ ಇಳಿಸಿತ್ತು. ಈ ಹಿಂದಿನ ಅವಧಿಯಲ್ಲಿ ಮಾಸ್ಟರ್‌ ಕಾರ್ಡ್‌ ಸಂಸ್ಥೆ ಪ್ರತಿ ಪಂದ್ಯಕ್ಕೆ 3.8 ಕೋಟಿ ರು. ಪಾವತಿಸುತ್ತಿತ್ತು.

ಆರಂಭವಾಯಿತು ಏಕದಿನ ವಿಶ್ವಕಪ್ ಟಿಕೆಟ್ ಸೇಲ್..! ಎಲ್ಲಿ ಖರೀದಿಸಬಹುದು?

ಹುಬ್ಬಳ್ಳಿ ಟೈಗರ್ಸ್‌ ಸೆಮೀಸ್‌ಗೆ

ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ 7ನೇ ಜಯ ದಾಖಲಿಸಿದ ಹುಬ್ಬಳ್ಳಿ ಟೈಗರ್ಸ್‌ ಸೆಮಿಫೈನಲ್‌ಗೆ ಅಧಿಕೃತ ಪ್ರವೇಶ ಪಡೆದಿದೆ. ಶುಕ್ರವಾರ ಶಿವಮೊಗ್ಗ ಲಯನ್ಸ್‌ ವಿರುದ್ಧ 3 ವಿಕೆಟ್‌ ಜಯಗಳಿಸಿದ ಹುಬ್ಬಳ್ಳಿ ಸೆಮೀಸ್‌ಗೇರಿದ ಮೊದಲ ತಂಡ ಎನಿಸಿಕೊಂಡಿತು. ಕೊನೆ 6 ಪಂದ್ಯಗಳಲ್ಲಿ 5ನೇ ಸೋಲುಂಡ ಶಿವಮೊಗ್ಗ ಸೆಮೀಸ್‌ ಹಾದಿ ಕಠಿಣಗೊಳಿಸಿತು.

ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ 20 ಓವರಲ್ಲಿ 130 ರನ್‌ಗೆ ಆಲೌಟಾಯಿತು. 59ಕ್ಕೆ 6 ವಿಕೆಟ್‌ ಕಳೆದುಕೊಂಡ ಬಳಿಕ ಕ್ರಾಂತಿ ಕುಮಾರ್‌(34), ಶ್ರೇಯಸ್‌ ಗೋಪಾಲ್‌(31) ಹೋರಾಡಿ ತಂಡವನ್ನು ಅಲ್ಪಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಸುಲಭ ಗುರಿ ಬೆನ್ನತ್ತಿದ ಹುಬ್ಬಳ್ಳಿ 18.4 ಓವರ್‌ಗಳಲ್ಲಿ ಜಯಗಳಿಸಿತು. ಕೃಷ್ಣನ್‌ ಶ್ರೀಜಿತ್‌ 50 ರನ್‌ ಗಳಿಸಿದರು. ಬೌಲಿಂಗ್‌ನಲ್ಲೂ ಮಿಂಚಿದ ಶಿವಮೊಗ್ಗ ನಾಯಕ ಶ್ರೇಯಸ್‌ 30ಕ್ಕೆ 4 ವಿಕೆಟ್‌ ಕಿತ್ತರು.

ಕೊನೆಗೂ ಗೆದ್ದ ಬೆಂಗ್ಳೂರು

ಸತತ 8 ಪಂದ್ಯಗಳ ಸೋಲಿನ ಬಳಿಕ ಬೆಂಗಳೂರು ಬ್ಲಾಸ್ಟರ್ಸ್‌ ಕೊನೆಗೂ ಮೊದಲ ಗೆಲುವು ದಾಖಲಿಸಿದೆ. ಶುಕ್ರವಾರ ಮೈಸೂರು ಬ್ಲಾಸ್ಟರ್ಸ್‌ ವಿರುದ್ಧ ತಂಡ 10 ರನ್‌ ಜಯಗಳಿಸಿತು. ಮೊದಲು ಬ್ಯಾಟ್‌ ಮಾಡಿದ ಬೆಂಗಳೂರು 4 ವಿಕೆಟ್‌ಗೆ 212 ರನ್‌ ಗಳಿಸಿತು. ಕೊನೆಗೂ ಲಯಕ್ಕೆ ಮರಳಿದ ನಾಯಕ ಮಯಾಂಕ್‌ ಅಗರ್‌ವಾಲ್‌ 57 ಎಸೆತಗಳಲ್ಲಿ 105 ರನ್‌ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಮೈಸೂರು 8 ವಿಕೆಟ್‌ಗೆ 202 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಕಾರ್ತಿಕ್‌(30 ಎಸೆತದಲ್ಲಿ 70) ಏಕಾಂಗಿ ಹೋರಾಟ ವ್ಯರ್ಥವಾಯಿತು.