ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ. ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ದೇಶದ 10 ಸ್ಟೇಡಿಯಂಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಜರುಗಲಿದೆ.

ನವದೆಹಲಿ: ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ ಪಂದ್ಯಗಳ ಆನ್‌ಲೈನ್‌ ಟಿಕೆಟ್‌ ಮಾರಾಟ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಬುಕ್‌ ಮೈ ಶೋ(https://in.bookmyshow.com/explore/c/icc-cricket-world-cup)ನಲ್ಲಿ ಅಭಿಮಾನಿಗಳು ಟಿಕೆಟ್‌ ಖದೀರಿಸಬಹುದು ಎಂದು ಐಸಿಸಿ, ಬಿಸಿಸಿಐ ತಿಳಿಸಿವೆ.

ಭಾರತ ಹೊರತುಪಡಿಸಿ ಇತರ ತಂಡಗಳ ಅಭ್ಯಾಸ, ಲೀಗ್‌ ಪಂದ್ಯಗಳ ಟಿಕೆಟ್‌ಗಳು ಶುಕ್ರವಾರದಿಂದಲೇ ಮಾರಾಟಕ್ಕೆ ಲಭ್ಯವಿದೆ. ಭಾರತದ ಪಂದ್ಯಗಳ ಟಿಕೆಟ್‌ಗಳನ್ನು ಹಂತಹಂತವಾಗಿ ಮಾರಾಟ ಮಾಡಲಾಗುತ್ತದೆ. ಗುವಾಹಟಿ, ತಿರುವನಂತಪುರಂನ ಭಾರತದ ಅಭ್ಯಾಸ ಪಂದ್ಯದ ಟಿಕೆಟ್‌ ಆ.30ರಿಂದ, ಚೆನ್ನೈ, ನವದೆಹಲಿ, ಪುಣೆಯಲ್ಲಿ ನಿಗದಿಯಾಗಿರುವ ಪಂದ್ಯಗಳ ಟಿಕೆಟ್‌ ಆ.31ರಿಂದ ಕೊಂಡುಕೊಳ್ಳಬಹುದು. ಧರ್ಮಶಾಲಾ, ಲಖನೌ, ಮುಂಬೈ ಪಂದ್ಯಗಳ ಟಿಕೆಟ್‌ ಸೆ.1ರಿಂದ, ಬೆಂಗಳೂರು, ಕೋಲ್ಕತಾದ ಪಂದ್ಯಗಳ ಟಿಕೆಟ್‌ ಸೆ.2ರಿಂದ, ಅಹಮದಾಬಾದ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದ ಟಿಕೆಟ್‌ ಸೆ.3ರಿಂದ ಮಾರಾಟಕ್ಕೆ ಲಭ್ಯವಿದೆ. ಸೆಮಿಫೈನಲ್‌, ಫೈನಲ್‌ನ ಟಿಕೆಟ್‌ಗಳು ಸೆ.15ರಿಂದ ಲಭ್ಯವಿರುವುದಾಗಿ ಐಸಿಸಿ ತಿಳಿಸಿದೆ.

ಬೆಂಗಳೂರು ಪಂದ್ಯದ ಟಿಕೆಟ್‌ಗೆ ಕನಿಷ್ಠ ₹590

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳು ನಡೆಯಲಿದ್ದು, ಭಾರತ-ನೆದರ್‌ಲೆಂಡ್ಸ್‌(ನ.12), ಆಸ್ಟ್ರೇಲಿಯಾ-ಪಾಕಿಸ್ತಾನ(ಅ.20), ನ್ಯೂಜಿಲೆಂಡ್‌-ಪಾಕ್‌(ನ.4) ಪಂದ್ಯಗಳ ಟಿಕೆಟ್‌ಗೆ ಕನಿಷ್ಠ ₹885 ಹಾಗೂ ಗರಿಷ್ಠ ₹4720 ನಿಗದಿಪಡಿಸಲಾಗಿದೆ. ಇಂಗ್ಲೆಂಡ್‌-ಶ್ರೀಲಂಕಾ(ಅ.26) ಹಾಗೂ ನ್ಯೂಜಿಲೆಂಡ್‌-ಶ್ರೀಲಂಕಾ(ನ.9) ಪಂದ್ಯದ ಟಿಕೆಟ್‌ಗೆ ಕನಿಷ್ಠ ₹590 ಹಾಗೂ ಗರಿಷ್ಠ ₹3540 ನಿಗದಿಪಡಿಸಲಾಗಿದೆ ಎಂದು ಕೆಎಸ್‌ಸಿಎ ತಿಳಿಸಿದೆ.

46 ದಿನ, 48 ಪಂದ್ಯ: 46 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಫೈನಲ್‌ ಸೇರಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್‌, ಬಾಂಗ್ಲಾದೇಶ, ನ್ಯೂಜಿಲೆಂಡ್‌, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ. ಈ 8 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇನ್ನೆರಡು ತಂಡಗಳಾದ ಶ್ರೀಲಂಕಾ ಹಾಗೂ ನೆದರ್‌ಲೆಂಡ್ಸ್ ತಂಡಗಳು ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿವೆ.

ಮುಂಬರುವ ಅಕ್ಟೋಬರ್ 05ರಿಂದ ನವೆಂಬರ್ 19ರ ವರೆಗೆ ಭಾರತದಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಜರುಗಲಿದೆ. ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ದೇಶದ 10 ಸ್ಟೇಡಿಯಂಗಳಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಜರುಗಲಿದೆ.

ಮುಂಬೈ, ಕೋಲ್ಕತಾದಲ್ಲಿ ಸೆಮಿಫೈನಲ್‌ ಪಂದ್ಯಗಳು ನವೆಂಬರ್ 15 ಹಾಗೂ 16ರಂದು ಕ್ರಮವಾಗಿ ಮುಂಬೈನ ವಾಂಖೇಡೆ ಹಾಗೂ ಕೋಲ್ಕತಾ ಈಡನ್‌ ಗಾರ್ಡನ್ಸ್‌ನಲ್ಲಿ ನಡೆಯಲಿವೆ. ಒಂದು ವೇಳೆ ಪಾಕಿಸ್ತಾನ ಸೆಮೀಸ್‌ ಪ್ರವೇಶಿಸಿದರೆ ಆ ತಂಡದ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದೆ. ಭಾರತ ಸೆಮೀಸ್‌ಗೇರಿದರೆ ಪಂದ್ಯಕ್ಕೆ ಮುಂಬೈ ಆತಿಥ್ಯ ವಹಿಸಲಿದೆ. ಒಂದು ವೇಳೆ ಭಾರತ-ಪಾಕಿಸ್ತಾನ ಸೆಮೀಸ್‌ನಲ್ಲಿ ಎದುರಾಗುವ ಸಂದರ್ಭ ಬಂದರೆ ಪಂದ್ಯ ಕೋಲ್ಕತಾದಲ್ಲಿ ನಡೆಯಲಿದೆ ಎಂದು ಐಸಿಸಿ ತಿಳಿಸಿದೆ. ನವೆಂಬರ್ 19ರಂದು ಫೈನಲ್‌ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ.