ICC ODI World Cup 2023: ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಹೊಸ ಸ್ಪರ್ಶ..!
2023ರ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭ
5 ವಿಶ್ವಕಪ್ ಪಂದ್ಯಗಳಿಗೆ ಸಾಕ್ಷಿಯಾಗಲಿರುವ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶೀಘ್ರದಲ್ಲೇ ಅಂದಾಜು 50 ಕೋಟಿ ರು. ವೆಚ್ಚದಲ್ಲಿ ನವೀಕರಣ ಕಾರ್ಯ
ಬೆಂಗಳೂರು(ಜು.01): ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ಗ ದಿನಗಣನೆ ಆರಂಭವಾಗಿರುವಾಗಲೇ ದೇಶದ ಪ್ರಮುಖ ಕ್ರೀಡಾಂಗಣಗಳೂ ಟೂರ್ನಿಯ ಆತಿಥ್ಯಕ್ಕೆ ಸಜ್ಜುಗೊಳ್ಳುತ್ತಿವೆ. ಆಟಗಾರರು, ಕ್ರೀಡಾಭಿಮಾನಿಗಳನ್ನು ಬರಮಾಡಿಕೊಳ್ಳಲು ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಕೂಡಾ ಹೊಸ ಸ್ಪರ್ಶ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲೇ ಅಂದಾಜು 50 ಕೋಟಿ ರು. ವೆಚ್ಚದಲ್ಲಿ ನವೀಕರಣ ಕಾರ್ಯ ಆರಂಭಗೊಳ್ಳಲಿದೆ.
ಏಕದಿನ ವಿಶ್ವಕಪ್ (ICC ODI World Cup 2023) ಪಂದ್ಯಗಳು ನಡೆಯಲಿರುವ ಕ್ರೀಡಾಂಗಣಗಳಲ್ಲಿನ ಮೂಲಸೌಕರ್ಯ ಕೊರತೆಯನ್ನು ಸರಿಪಡಿಸಲು ಬಿಸಿಸಿಐ ಮುಂದಾಗಿದ್ದು, ಅದಕ್ಕಾಗಿ ಎಲ್ಲಾ 10 ಕ್ರೀಡಾಂಗಣಗಳಿಗೂ ತಲಾ 50 ಕೋಟಿ ರು. ನೀಡುವುದಾಗಿ ಘೋಷಿಸಿದೆ. ವಿಶ್ವದ ಶ್ರೇಷ್ಠ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದೆನಿಸಿರುವ ಚಿನ್ನಸ್ವಾಮಿಯಲ್ಲೂ ಕೆಲ ಮೂಲಸೌಕರ್ಯ ಸಮಸ್ಯೆಯಿದ್ದು, ಅದನ್ನು ಸರಿಪಡಿಸುವುದರ ಜೊತೆಗೆ ಕ್ರೀಡಾಂಗಣಕ್ಕೆ ಹೊಸ ಸ್ಪರ್ಷ ನೀಡಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಮುಂದಾಗಿದೆ.
ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್ ಟಿ20ಯಲ್ಲಿ ಕನ್ನಡತಿ ಶ್ರೇಯಾಂಕ ಪಾಟೀಲ್ ಕಣಕ್ಕೆ
ಮೇಲ್ಚಾವಣಿ ಮೇಲ್ದರ್ಜೆಗೆ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಲ ಸಮಯದಿಂದ ಪ್ರಮುಖ ಸಮಸ್ಯೆಯಾಗಿರುವುದು ಮೇಲ್ಚಾವಣಿ. ಮಳೆ ಸುರಿದಾಗ ಬೇಗನೇ ನೀರನ್ನು ಹೀರಿಕೊಳ್ಳಲು ಮೈದಾನದಲ್ಲಿ ಸಬ್ ಏರ್ ಸಿಸ್ಟಮ್ ಇದ್ದರೂ, ಪ್ರೇಕ್ಷಕರಿಗೆ ಮಳೆ ನೀರು ಸೋರಿಕೆಯಿಂದ ಸಮಸ್ಯೆಯಾಗುತ್ತಿತ್ತು. ಈ ಬಾರಿ ವಿಶ್ವಕಪ್‌ಗೂ ಮುನ್ನ ಹೊಸ ಮೇಲ್ಚಾವಣಿ ಅಳವಡಿಸಲು ಕೆಎಸ್‌ಸಿಎ ತಯಾರಿ ನಡೆಸಿದೆ. ಇದರ ಜೊತೆಗೆ ಪ್ರೇಕ್ಷಕರು ಕುಳಿತುಕೊಳ್ಳುವ ಆಸನಗಳನ್ನೂ ನವೀಕರಣಗೊಳಿಸಲಿದ್ದು, ಪಂದ್ಯ ವೀಕ್ಷಣೆಗೆ ಆಗಮಿಸುವವರಿಗೆ ಹೊಸ ಅನುಭವ ನೀಡಲಿದೆ. ಕ್ರೀಡಾಂಗಣದಲ್ಲಿರುವ ಶೌಚಾಲಯ, ಮಾಧ್ಯಮ ಕೇಂದ್ರದ ನವೀಕರಣ ಕೆಲಸವೂ ಸದ್ಯದಲ್ಲೇ ಆಗಲಿದೆ ಎಂದು ಕೆಎಸ್‌ಸಿಎ ಆಧ್ಯಕ್ಷ ರಘುರಾಮ್ ಭಟ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.
ಇನ್ನು, ಕ್ರೀಡಾಂಗಣಕ್ಕೆ 2 ವರ್ಷಗಳ ಹಿಂದಷ್ಟೇ ಹೊಸದಾಗಿ ಎಲ್‌ಇಡಿ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಾಗಿತ್ತು. ಆಟಗಾರರ ಡ್ರೆಸ್ಸಿಂಗ್ ಕೋಣೆಯನ್ನು ಕೂಡಾ ನವೀಕರಿಸಲಾಗಿತ್ತು. ಪಿಚ್, ಔಟ್‌ಪೀಲ್ಡ್ ಉತ್ತಮವಾಗಿರುವುದರಿಂದ ಈ ಬಾರಿ ಅವುಗಳನ್ನು ಬದಲಾಯಿಸುವುದಿಲ್ಲ ಎಂದು ಕೆಎಸ್‌ಸಿಎ ತಿಳಿಸಿದೆ.
ICC ಮನಗೆದ್ದ 3 ಕ್ರಿಕೆಟ್ ಸ್ಟೇಡಿಯಂ; ಆ ಮೂರು ಕ್ರೀಡಾಂಗಣಕ್ಕೆ ವಿಶ್ವಕಪ್ ಆತಿಥ್ಯ ಸಿಕ್ಕಿದ್ದು ಹೇಗೆ..?
ಕ್ರೀಡಾಂಗಣದ ನವೀಕರಣ ಕಾರ್ಯ ಮುಂದಿನ ವಾರ ಆರಂಭಿಸುತ್ತೇವೆ. ಮೇಲ್ಚಾವಣಿ, ಶೌಚಾಲಯ, ಪ್ರೆಸ್ ಬಾಕ್ಸ್, ಆಸನಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. ವಿಶ್ವಕಪ್ ವೀಕ್ಷಣೆಗೆ ಬರುವ ಪ್ರೇಕ್ಷಕರಿಗೆ ವಿಶೇಷ ಹಾಗೂ ಹೊಸ ಅನುಭವ ನೀಡುವುದು ನಮ್ಮ ಉದ್ದೇಶವಾಗಿದೆ.
-ರಘುರಾಮ್ ಭಟ್, ಕೆಎಸ್‌ಸಿಎ ಅಧ್ಯಕ್ಷ
ಇತರೆಡೆ ಏನೇನು ಬದಲಾವಣೆ?
- ವಾಂಖೇಡೆ ಕ್ರೀಡಾಂಗಣದಲ್ಲಿ ಎಲ್‌ಇಡಿ ಫ್ಲಡ್‌ಲೈಟ್ಸ್, ಕಾರ್ಪೋರೇಟ್ ಬಾಕ್ಸ್
- ಲಖನೌನ ಏಕನಾ ಕ್ರೀಡಾಂಗಣದಲ್ಲಿ ಹೊಸ ಪಿಚ್‌ಗಳ ನಿರ್ಮಾಣ.
- ಚೆನ್ನೈನಲ್ಲಿ ಕೆಂಪು ಮಣ್ಣಿನ 2 ಹೊಸ ಪಿಚ್, ಹೊಸ ಎಲ್‌ಇಡಿ ಫ್ಲಡ್‌ಲೈಟ್ಸ್
- ಕೋಲ್ಕತಾದ ಈಡನ್ ಗಾರ್ಡನ್ಸ್‌ನ ಡ್ರೆಸ್ಸಿಂಗ್ ರೂಂ ಮೇಲ್ದರ್ಜೆಗೆ
- ಧರ್ಮಶಾಲಾದಲ್ಲಿ ಔಟ್‌ಫೀಲ್ಡ್‌ಗೆ ಇಂಪೋರ್ಟೆಡ್ ಹುಲ್ಲು, ಸುಧಾರಿತ ಒಳಚರಂಡಿ.
- ಪುಣೆ ಕ್ರೀಡಾಂಗಣದ ಮೇಲ್ಚಾವಣಿ ಬದಲಾವಣೆ.
- ದೆಹಲಿ ಕ್ರೀಡಾಂಗಣದಲ್ಲಿ ಹೊಸ ಶೌಚಾಲಯಗಳ ನಿರ್ಮಾಣ.
ವಿಶ್ವಕಪ್: ಸಿಎಂ ಸಿದ್ದರಾಮಯ್ಯಗೆ ಕೆಎಸ್‌ಸಿಎ ಆಹ್ವಾನ
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಪಧಾದಿಕಾರಿಗಳು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ, ಅಕ್ಟೋಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯಗಳಿಗೆ ಆಹ್ವಾನ ನೀಡಿದರು.
ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಶಂಕರ್, ಖಜಾಂಚಿ ಜಯರಾಮ್, ಮಾಜಿ ಕ್ರಿಕೆಟಿಗ ಹಾಗೂ ಎಂಎಲ್‌ಸಿ ಪ್ರಕಾಶ್ ರಾಥೋಡ್ ಅವರಿದ್ದ ನಿಯೋಗವು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡುವಂತೆ ಯೂ ಮನವಿ ಮಾಡಿದರು. ಇದಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸಂಪೂರ್ಣ ವೇಳಾಪಟ್ಟಿ ಹೀಗಿದೆ: