ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ವಿರಾಟ್ ಕೊಹ್ಲಿ 4ನೇ ಸ್ಥಾನಕ್ಕೆ ಏರಿದ್ದಾರೆ, ರೋಹಿತ್ ಶರ್ಮಾ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಶುಭ್‌ಮನ್ ಗಿಲ್ ಅಗ್ರಸ್ಥಾನದಲ್ಲಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ವರುಣ್ ಚಕ್ರವರ್ತಿ 143 ಸ್ಥಾನ ಜಿಗಿದು 97ನೇ ಸ್ಥಾನದಲ್ಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಾಯಕಿ ಶಮಾ, ಕೊಹ್ಲಿ ಅವರನ್ನೂ ಟೀಕಿಸಿದ್ದರು, ಅವರ ಹಳೆಯ ಪೋಸ್ಟ್ ವೈರಲ್ ಆಗಿದೆ.

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಭೂತಪೂರ್ವ ಪ್ರದರ್ಶನ ನೀಡುತ್ತಿರುವ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಐಸಿಸಿ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನಕ್ಕೇರಿದ್ದಾರೆ.

ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 1 ಸ್ಥಾನ ಪ್ರಗತಿ ಸಾಧಿಸಿ, ರೋಹಿತ್‌ ಶರ್ಮಾರನ್ನು ಹಿಂದಿಕ್ಕಿದರು. 2 ಸ್ಥಾನ ಕುಸಿದಿರುವ ರೋಹಿತ್ ಶರ್ಮಾ ಸದ್ಯ 5ನೇ ಸ್ಥಾನದಲ್ಲಿದ್ದಾರೆ. ಶುಭ್‌ಮನ್ ಗಿಲ್ ಅಗ್ರಸ್ಥಾನ ಕಾಯ್ದುಕೊಂಡಿದ್ದು ಶ್ರೇಯಸ್ ಅಯ್ಯರ್ 8ನೇ, ಕೆ.ಎಲ್.ರಾಹುಲ್ 15ನೇ ಸ್ಥಾನಗಳಲ್ಲಿದ್ದಾರೆ.

143 ಸ್ಥಾನ ಜಿಗಿದ ವರುಣ್ ಚಕ್ರವರ್ತಿ

ಬೌಲರ್‌ಗಳ ಪಟ್ಟಿಯಲ್ಲಿ ವರುಣ್ ಚಕ್ರವರ್ತಿ ಬರೋಬ್ಬರಿ 143 ಸ್ಥಾನ ಪ್ರಗತಿ ಸಾಧಿಸಿದ್ದು, 97ನೇ ಸ್ಥಾನಕ್ಕೇರಿದ್ದಾರೆ. ಮೊಹಮ್ಮದ್ ಶಮಿ 3 ಸ್ಥಾನ ಮೇಲೇರಿ 11ನೇ ಸ್ಥಾನ ಪಡೆದಿದ್ದು, ಕುಲೀಪ್ ಯಾದವ್ 6ನೇ ಸ್ಥಾನಕ್ಕೆ ಕುಸಿದಿದ್ದು, ರವೀಂದ್ರ ಜಡೇಜಾ 13, ಮೊಹಮ್ಮದ್ ಸಿರಾಜ್ 14ನೇ ಸ್ಥಾನಗಳಲ್ಲಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯ ಹೊಸ ಗೆಳತಿ ನಿವ್ವಳ ಮೌಲ್ಯ ಎಷ್ಟು? ಪಾಂಡ್ಯ ಸಿಕ್ಸ್‌ಗೆ ಜಾಸ್ಮಿನ್ ಕ್ಲೀನ್ ಬೌಲ್ಡ್!

ಅಝ್ಮತುಲ್ಲಾ ಓಮರ್‌ಝೈ ನಂ.1 ಆಲ್ರೌಂಡರ್:

ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅದ್ಭುತ ಆಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿದ್ದ ಅಝ್ಮತುಲ್ಲಾ ಓಮರ್‌ಝೈ ಐಸಿಸಿ ಏಕದಿನ ಕ್ರಿಕೆಟ್‌ನ ನಂ.1 ಆಲ್ರೌಂಡರ್ ಆಗಿ ಹೊರಹೊಮ್ಮಿದ್ದಾರೆ. ಇದೀಗ ಅಝ್ಮತುಲ್ಲಾ ಓಮರ್‌ಝೈ 296 ರೇಟಿಂಗ್ ಅಂಕಗಳನ್ನು ಪಡೆಯುವ ಮೂಲಕ ನಂ.1 ಸ್ಥಾನಕ್ಕೇರಿದ್ದು, ತಮ್ಮ ತಂಡದ ಮಾಜಿ ನಾಯಕ ಮೊಹಮ್ಮದ್ ನಬಿಯವರನ್ನು ಇದೀಗ ಎರಡನೇ ಸ್ಥಾನಕ್ಕೆ ತಳ್ಳಿದ್ದಾರೆ. 

ರೋಹಿತ್‌ ದಢೂತಿ ಎಂದ ಶಮಾ ಈ ಹಿಂದೆ ಕೊಹ್ಲಿ ಬಗ್ಗೆಯೂ ಕೊಂಕು ನುಡಿ

ನವದೆಹಲಿ: ಭಾರತದ ಕ್ರಿಕೆಟ್‌ ತಂಡದ ನಾಯಕ ರೋಹಿತ್‌ ಶರ್ಮಾರನ್ನು ‘ಧಡೂತಿ’ ಎಂದು ಜರಿದು ಟೀಕೆಗೆ ಒಳಗಾದ ಕಾಂಗ್ರೆಸ್‌ ನಾಯಕಿ ಮೊಹಮ್ಮದ್‌ ಶಮಾ ಈ ಹಿಂದೆ ಕ್ರಿಕೆಟಿಗ ವಿರಾಟ್‌ ಕೊಹ್ಲಿ ವಿರುದ್ಧವೂ ಪೋಸ್ಟ್‌ ಮಾಡಿ ಟೀಕಿಸಿದ್ದರು. ಈ ಕುರಿತ ಶಮಾ ಪೋಸ್ಟ್‌ ಮತ್ತೆ ವೈರಲ್‌ ಆಗುತ್ತಿದೆ.

2018ರಲ್ಲಿ ಅಭಿಮಾನಿಗಳು ನೀಡಿದ ಸಂದೇಶವೊಂದಕ್ಕೆ ಭಾರತ ತಂಡದ ನಾಯಕರಾಗಿದ್ದ ವಿರಾಟ್‌ ಕೊಹ್ಲಿ ನೀಡಿದ ಪ್ರತಿಕ್ರಿಯೆಯನ್ನು ಶಮಾ ಟೀಕಿಸಿದ್ದರು. ‘ಬ್ರಿಟಿಷ್‌ ಆಟ ಕ್ರಿಕೆಟ್‌ ಆಡಿ ಕೋಟಿ ರು. ದುಡಿಯುವ ಕೊಹ್ಲಿ ವಿದೇಶಿ ಬ್ಯಾಟ್ಸ್‌ಮನಗಳನ್ನು ಇಷ್ಟಪಡುವವರು ಭಾರತ ತೊರೆಯುವಂತೆ ಹೇಳುತ್ತಾರೆ’ ಎಂದು ವ್ಯಂಗ್ಯವಾಡಿದ್ದರು.

ಇದನ್ನೂ ಓದಿ: ಭಾರತ ಎದುರು ಸೋಲುತ್ತಿದ್ದಂತೆಯೇ ಏಕದಿನ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ ಆಸೀಸ್ ದಿಗ್ಗಜ ಕ್ರಿಕೆಟಿಗ!

ಕೊಹ್ಲಿ ಹೇಳಿದ್ದೇನು?:

2018ರಲ್ಲಿ ಅಭಿಮಾನಿಗಳ ಸಂದೇಶಕ್ಕೆ ಪ್ರತಿಕ್ರಿಯಿಸಿದಾಗ ಕೊಹ್ಲಿ ಪೇಚಿಗೆ ಸಿಲುಕಿದ್ದರು. ಅಭಿಮಾನಿಯೊಬ್ಬರು ತನಗೆ ಭಾರತೀಯರಿಗಿಂತ ಆಸ್ಟ್ರೇಲಿಯಾ, ಬ್ರಿಟಿಷ್‌ ಬ್ಯಾಟ್ಸ್‌ಮನ್‌ಗಳು ಇಷ್ಟ ಎಂದಿದ್ದರು. ಅದಕ್ಕೆ ಕೊಹ್ಲಿ, ‘ವಿದೇಶಿ ಬ್ಯಾಟ್ಸ್‌ಮನಗಳನ್ನು ಇಷ್ಟಪಡುವವರು ಭಾರತದಲ್ಲಿ ವಾಸಿಸಬಾರದು’ ಎಂದು ಹೇಳಿದ್ದರು.