2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಆಸ್ಟ್ರೇಲಿಯಾ ಸೋತ ನಂತರ, ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಭಾರತದ ವಿರುದ್ಧ 4 ವಿಕೆಟ್‌ಗಳಿಂದ ಸೋತ ಬಳಿಕ ಸ್ಮಿತ್ ಈ ನಿರ್ಧಾರ ಕೈಗೊಂಡಿದ್ದಾರೆ. ಅವರು 170 ಏಕದಿನ ಪಂದ್ಯಗಳಲ್ಲಿ 5800 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ಅವರು ತಿಳಿಸಿದ್ದಾರೆ.
ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಸ್ಟೀವ್ ಸ್ಮಿತ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಶರಣಾಗುವ ಮೂಲಕ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಏಕದಿನ ಮಾದರಿಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಮಾರ್ಚ್ 04ರಂದು ನಡೆದ ಭಾರತ ಎದುರಿನ ಪಂದ್ಯದಲ್ಲಿ ಕಾಂಗರೂ ಪಡೆ 4 ವಿಕೆಟ್ ಅಂತರದ ಸೋಲು ಅನುಭವಿಸಿತ್ತು. ಸೋಲಿನ ಹೊಣೆಹೊತ್ತ ಕ್ಯಾಪ್ಟನ್ ಸ್ಮಿತ್, ಇದೀಗ ಏಕದಿನ ಕ್ರಿಕೆಟ್ ಮಾದರಿಗೆ ಗುಡ್ ಬೈ ಹೇಳಿದ್ದಾರೆ.
ಭಾರತ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ 96 ಎಸೆತಗಳನ್ನು ಎದುರಿಸಿ ಆಕರ್ಷಕ 73 ರನ್ ಸಿಡಿಸಿದ್ದರು. ಈ ಮೂಲಕ ತಂಡವು 265 ರನ್‌ಗಳ ಸವಾಲಿನ ಗುರಿ ನೀಡಲು ನೆರವಾಗಿದ್ದರು. ಈ ಗುರಿಯನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 11 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತ್ತು. ಇನ್ನು ನಿವೃತ್ತಿಯ ಬಗ್ಗೆ ಮಾತನಾಡಿದ ಅವರು, 2015 ಹಾಗೂ 2023ರ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಭಾಗವಾಗಿದ್ದು ನನ್ನ ಸೌಭಾಗ್ಯ ಎಂದು ಹೇಳಿದ್ದಾರೆ. 'ಇದೊಂದು ಅದ್ಭುತ ಜರ್ನಿಯಾಗಿತ್ತು. ಈ ಪಯಣದ ಪ್ರತಿಯೊಂದು ಕ್ಷಣವನನ್ನು ನಾನು ಎಂಜಾಯ್ ಮಾಡಿದ್ದೇನೆ' ಎಂದು ಸ್ಮಿತ್ ಹೇಳಿದ್ದಾರೆ.
ಸ್ಟೀವ್ ಸ್ಮಿತ್ 2015 ಹಾಗೂ 2021ರಲ್ಲಿ ಆಸ್ಟ್ರೇಲಿಯಾ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದರು. ಇನ್ನು ಇದಷ್ಟೇ ಅಲ್ಲದೇ 2015ರಲ್ಲಿ ಸ್ಟೀವ್ ಸ್ಮಿತ್ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದುಕೊಂಡಿದ್ದರು. '2027ರ ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡವನ್ನು ಕಟ್ಟಲು ಇದೊಂದು ಒಳ್ಳೆಯ ಅವಕಾಶವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ನಾನು ದಾರಿ ಮಾಡಿಕೊಡುತ್ತಿದ್ದೇನೆ' ಎಂದು ಸ್ಮಿತ್ ಹೇಳಿದ್ದಾರೆ. ಇನ್ನು ವೇಳೆ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿಯೂ ಸ್ಮಿತ್ ಖಚಿತಪಡಿಸಿದ್ದಾರೆ.
ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗಾಗಿ ಕಿವೀಸ್ vs ದಕ್ಷಿಣ ಆಫ್ರಿಕಾ ಫೈಟ್!
'ಟೆಸ್ಟ್ ಕ್ರಿಕೆಟ್ ನನ್ನ ಆದ್ಯತೆಯಾಗಿದೆ. ನಾನು ಈಗ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಎದುರು ನೋಡುತ್ತಿದ್ದೇನೆ. ಇದಾದ ಬಳಿಕ ವೆಸ್ಟ್ ಇಂಡೀಸ್ ಎದುರಿನ ಸರಣಿ ಹಾಗೂ ತವರಿನಲ್ಲಿ ಇಂಗ್ಲೆಂಡ್ ಎದುರಿನ ಸರಣಿಯ ಬಗ್ಗೆ ಗಮನ ಹರಿಸುತ್ತಿದ್ದೇನೆ. ನಾನು ಈ ಮಾದರಿಯಲ್ಲೂ ಇನ್ನೂ ಸಾಕಷ್ಟು ಕೊಡುಗೆ ನೀಡಬಲ್ಲೆ ಎಂದೆನಿಸುತ್ತಿದೆ' ಎಂದು ಸ್ಟೀವ್ ಸ್ಮಿತ್ ಹೇಳಿದ್ದಾರೆ
ಸ್ಟೀವ್ ಸ್ಮಿತ್ 2010ರಲ್ಲಿ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ಎದುರು ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಲೆಗ್‌ಸ್ಪಿನ್ ಆಲ್ರೌಂಡರ್ ಆಗಿ ಆಸ್ಟ್ರೇಲಿಯಾ ತಂಡಕ್ಕೆ ಪಾದಾರ್ಪಣೆ ಮಾಡಿದ ಸ್ಮಿತ್, ಇದೀಗ ದಿಗ್ಗಜ ಬ್ಯಾಟರ್ ಆಗಿ ಬೆಳೆದು ನಿಂತಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ: ವೀಕ್ಷಣೆಯಲ್ಲಿ ಹೊಸ ದಾಖಲೆ ಬರೆದ ಭಾರತ-ಆಸೀಸ್ ಸೆಮೀಸ್ ಫೈಟ್!
ಆಸ್ಟ್ರೇಲಿಯಾ ಪರ 170 ಏಕದಿನ ಪಂದ್ಯಗಳನ್ನಾಡಿರುವ ಸ್ಟೀವ್ ಸ್ಮಿತ್ 43.28ರ ಬ್ಯಾಟಿಂಗ್ ಸರಾಸರಿಯಲ್ಲಿ 5800 ರನ್ ಬಾರಿಸಿದ್ದಾರೆ. ಇದರಲ್ಲಿ 12 ಶತಕ ಹಾಗೂ 35 ಅರ್ಧಶತಕಗಳು ಸೇರಿವೆ. ಇನ್ನು ಬೌಲಿಂಗ್‌ನಲ್ಲಿ ಸ್ಟೀವ್ ಸ್ಮಿತ್ 34.67ರ ಸರಾಸರಿಯಲ್ಲಿ 28 ವಿಕೆಟ್ ಕಬಳಿಸಿದ್ದಾರೆ.
