2025ರ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಯಲಿದೆ. 2017ರಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿದ್ದ ಈ ಟೂರ್ನಿ, 2021ರಲ್ಲಿ ಸ್ಥಗಿತಗೊಂಡಿತ್ತು. ಐಸಿಸಿ ಟೂರ್ನಿ ಆಯೋಜಿಸುವುದರಿಂದ ಪಿಸಿಬಿಗೆ ಕೋಟಿಗಟ್ಟಲೆ ಆದಾಯ ಬರಲಿದೆ. 1996ರ ವಿಶ್ವಕಪ್ ನಂತರ ಪಾಕ್ ನೆಲದಲ್ಲಿ ನಡೆಯುತ್ತಿರುವ ಮೊದಲ ಐಸಿಸಿ ಟೂರ್ನಿ ಇದಾಗಿದೆ.
ಬೆಂಗಳೂರು: ಚಾಂಪಿಯನ್ಸ್ ಟ್ರೋಫಿಯ ಈ ಹಿಂದಿನ ಆವೃತ್ತಿ ನಡೆದಿದ್ದು 2017ರಲ್ಲಿ. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್‌ನಲ್ಲಿ ಭಾರತವನ್ನು ಸೋಲಿಸಿ ಪಾಕಿಸ್ತಾನ ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. 1998ರಲ್ಲಿ ಆರಂಭಗೊಂಡ ಟೂರ್ನಿಯನ್ನು 2 ವರ್ಷಗಳಿಗೊಮ್ಮೆ ನಡೆಸಲು ಐಸಿಸಿ ನಿರ್ಧರಿಸಿತ್ತು. ಮೊದಲ 5 ಆವೃತ್ತಿಗಳು 2 ವರ್ಷಗಳಿಗೊಮ್ಮೆ ನಡೆದವು. ಆನಂತರ ಅಂತರ 3 ವರ್ಷಕ್ಕೆ ಹೆಚ್ಚಿತು. 2009ರ ಬಳಿಕ 4 ವರ್ಷಗಳಿಗೊಮ್ಮೆ ಟೂರ್ನಿ ಆಯೋಜನೆಗೊಂಡು 2017ರ ಬಳಿಕ ನಿಂತೇ ಹೋಗಿತ್ತು.
ಚಾಂಪಿಯನ್ಸ್ ಟ್ರೋಫಿಯನ್ನು ಸ್ಥಗಿತಗೊಳಿಸಿ ಅದರ ಬದಲು ವರ್ಷಕ್ಕೊಂದು ಟಿ20 ವಿಶ್ವಕಪ್ ಅಯೋಜಿಸಲು ಐಸಿಸಿ ಚಿಂತನೆಯನ್ನೂ ನಡೆಸಿತ್ತು. ಇದೇ ಕಾರಣಕ್ಕೆ 2021ರಲ್ಲಿ ಟೂರ್ನಿ ನಡೆಯಲಿಲ್ಲ. ಆದರೆ ಐಸಿಸಿಯ ಆಲೋಚನೆ ಏಕದಿನ ಕ್ರಿಕೆಟ್‌ಗೆ ಮಾರಕ ಎಂದು ಅನೇಕರು ಅಭಿಪ್ರಾಯಪಟ್ಟಿದ್ದರಿಂದ, 2025ರಿಂದ ಟೂರ್ನಿಯನ್ನು ಪುನಾರಂಭಿಸುವುದಾಗಿ ಐಸಿಸಿ ಘೋಷಿಸಿತು.
ಇದನ್ನೂ ಓದಿ:ಮಿನಿ ವಿಶ್ವಕಪ್ ಸಮರ; ಇದೇ ಮೊದಲ ಬಾರಿಗೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ! ಏನಿದರ ವಿಶೇಷ?
ಚಾಂಪಿಯನ್ಸ್ ಟ್ರೋಫಿಯನ್ನು ಮತ್ತೆ ಪರಿಚಯಿಸಿರುವುದರಿಂದ ಇನ್ಮುಂದೆ ವರ್ಷಕ್ಕೊಂದು ಐಸಿಸಿ ಟೂರ್ನಿ ನಡೆಯಲಿದೆ. 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದರೆ, 2026ರಲ್ಲಿ ಟಿ20 ವಿಶ್ವಕಪ್, 2027ರಲ್ಲಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್, 2028ರಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ.
ಟೂರ್ನಿ ಆಯೋಜನೆಯಿಂದ ಪಾಕ್‌ಗೆ ಕೋಟಿ ಕೋಟಿ ಹಣ!
ಯಾವುದೇ ಐಸಿಸಿ ಟೂರ್ನಿಗೆ ಆತಿಥ್ಯ ನೀಡುವ ರಾಷ್ಟ್ರಕ್ಕೆ ಹಣದ ಹೊಳೆಯೇ ಹರಿದು ಬರಲಿದೆ. ಪ್ರಾಯೋಜಕತ್ವ, ಟಿಕೆಟ್ ಮಾರಾಟದಿಂದ ದೊಡ್ಡ ಮಟ್ಟದಲ್ಲಿ ಹಣ ಸಂಗ್ರಹವಾಗಲಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಐಸಿಸಿಯಿಂದ ಆರ್ಥಿಕ ನೆರವು ಸಿಗಲಿದೆ. ಐಸಿಸಿಯು ಪ್ರಸಾರ ಹಕ್ಕು ಮಾರಾಟ ಹಾಗೂ ಪ್ರಾಯೋಜಕತ್ವದಿಂದ ನೂರಾರು ಕೋಟಿ ರು. ಹಣ ಸಂಪಾದಿಸಲಿದ್ದು, ಇದರಲ್ಲಿ ದೊಡ್ಡ ಪ್ರಮಾಣವನ್ನು ಟೂರ್ನಿಗೆ ಆತಿಥ್ಯ ನೀಡುವ ರಾಷ್ಟ್ರಕ್ಕೆ ನೀಡಲಿದೆ. ಒಂದು ಅಂದಾಜಿನ ಪ್ರಕಾರ, 2025ರ ಚಾಂಪಿಯನ್ಸ್ ಟ್ರೋಫಿ ನಡೆಸುವುದರಿಂದ ಪಿಸಿಬಿಗೆ ಐಸಿಸಿಯಿಂದ 100 ಕೋಟಿ ರು.ಗೂ ಹೆಚ್ಚಿನ ನೆರವು ಸಿಗಲಿದೆ.
ಇದನ್ನೂ ಓದಿ:ಆಸೀಸ್‌ಗೆ ಮತ್ತೊಂದು ಶಾಕ್: ಕೊನೆಯ ಕ್ಷಣದಲ್ಲಿ ಮತ್ತೋರ್ವ ಮಾರಕ ವೇಗಿ ತಂಡದಿಂದ ಔಟ್
ಹೋರಾಡಿ ಆತಿಥ್ಯ ಹಕ್ಕು ಉಳಿಸಿಕೊಂಡ ಪಾಕ್!
ಟೂರ್ನಿಯು ಹೈಬ್ರಿಡ್ ಮಾದರಿಯಲ್ಲಿ ನಡೆದರೂ, ಆತಿಥ್ಯ ಹಕ್ಕು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಬಳಿಯೇ ಉಳಿದಿದೆ. ಅಂದರೆ, ಟೂರ್ನಿ ಆಯೋಜನೆಗೆ ಬೇಕಿರುವ ವ್ಯವಸ್ಥೆಯನ್ನು ಪಿಸಿಬಿ ಮಾಡಲಿದೆ. ಇಡೀ ಟೂರ್ನಿಯನ್ನೇ ಬೇರೆ ದೇಶಕ್ಕೆ ಸ್ಥಳಾಂತರಿಸಬೇಕು ಎನ್ನುವುದು ಬಿಸಿಸಿಐ ಮುಂದಿಟ್ಟ ಬೇಡಿಕೆಗಳಲ್ಲಿ ಒಂದಾಗಿತ್ತು. ದಕ್ಷಿಣ ಆಫ್ರಿಕಾ ಅಥವಾ ಐಸಿಸಿಯ ಕೇಂದ್ರ ಕಚೇರಿ ಇರುವ ಯುಎಇಗೆ ಪಂದ್ಯಾವಳಿ ಶಿಫ್ಟ್ ಆಗಬಹುದು ಎನ್ನುವ ಸುದ್ದಿಗಳು ಹರಿದಾಡಿತ್ತು. ಆದರೆ, ಬಹಳಷ್ಟು ಕಸರತ್ತು ಮಾಡಿ ಪಿಸಿಬಿ ಆತಿಥ್ಯ ಹಕ್ಕು ಉಳಿಸಿಕೊಂಡಿತು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಟೂರ್ನಿ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ; ಭಾರತದ ಮ್ಯಾಚ್ ಯಾವಾಗ? ಎಲ್ಲಿ ವೀಕ್ಷಿಸಬಹುದು?
1996ರ ಬಳಿಕ ಪಾಕ್ ನೆಲದಲ್ಲಿ ಐಸಿಸಿ ಟೂರ್ನಿ!
ಪಾಕಿಸ್ತಾನದಲ್ಲಿ ಕೊನೆ ಬಾರಿಗೆ ಐಸಿಸಿ ಟೂರ್ನಿಯೊಂದು ನಡೆದಿದ್ದು 1996ರಲ್ಲಿ. ಭಾರತ ಹಾಗೂ ಶ್ರೀಲಂಕಾದ ಜೊತೆ ಪಾಕಿಸ್ತಾನ ಏಕದಿನ ವಿಶ್ವಕಪ್‌ಗೆ ಜಂಟಿ ಆತಿಥ್ಯ ವಹಿಸಿತ್ತು. ಇದೀಗ, 29 ವರ್ಷ ಬಳಿಕ ಐಸಿಸಿ ಟೂರ್ನಿಗೆ ಆತಿಥ್ಯ ನೀಡಲು ಪಾಕಿಸ್ತಾನ ಉತ್ಸುಕಗೊಂಡಿದೆ.
