ಇಂದಿನಿಂದ ಚಾಂಪಿಯನ್ಸ್‌ ಟ್ರೋಫಿ ಹಣಾಹಣಿ: ಪಾಕಿಸ್ತಾನ vs ನ್ಯೂಜಿಲೆಂಡ್‌ ಮೊದಲ ಫೈಟ್‌!

ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಇಂದು ಚಾಲನೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮುಖಾಮುಖಿ.

ICC Champions Trophy 2025 begins Today Pakistan vs New Zealand 1st Match kvn

ಕರಾಚಿ: ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್‌ ಟ್ರೋಫಿ(ಏಕದಿನ ಮಾದರಿ)ಯ 9ನೇ ಆವೃತ್ತಿಗೆ ಬುಧವಾರ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ತಂಡ ಮಾಜಿ ಚಾಂಪಿಯನ್‌ ನ್ಯೂಜಿಲೆಂಡ್‌ ವಿರುದ್ಧ ಸೆಣಸಾಡಲಿದೆ. ಪಂದ್ಯಕ್ಕೆ ಕರಾಚಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಟೂರ್ನಿಯಲ್ಲಿ ಈ ಬಾರಿ ಒಟ್ಟು 8 ತಂಡಗಳು ಪಾಲ್ಗೊಳ್ಳಲಿವೆ. ಬಿಸಿಸಿಐ ಹಾಗೂ ಐಸಿಸಿ ಜೊತೆ ತಿಕ್ಕಾಟ ನಡೆಸಿ ಟೂರ್ನಿಯ ಆತಿಥ್ಯ ಹಕ್ಕನ್ನು ತನ್ನಲ್ಲೇ ಉಳಿಸಿಕೊಂಡಿರುವ ಪಾಕ್, ತವರಿನ ಅಂಗಳದಲ್ಲಿ ಟ್ರೋಫಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡೇ ಟೂರ್ನಿಗೆ ಕಾಲಿಡಲಿದೆ. ಆದರೆ ನ್ಯೂಜಿಲೆಂಡ್‌ ತಂಡ ಇತ್ತೀಚೆಗಷ್ಟೇ ಪಾಕ್‌ನಲ್ಲಿ ನಡೆದ ತ್ರಿಕೋನ ಸರಣಿ ಗೆದ್ದಿದ್ದು, ತುಂಬು ಆತ್ಮವಿಶ್ವಾಸದೊಂದಿಗೆ ಅಭಿಯಾನ ಆರಂಭಿಸಲಿದೆ.

ಲಾಹೋರ್‌ ಬಳಿಕ ಕರಾಚಿ ಮೈದಾನದಲ್ಲೂ ಭಾರತದ ಧ್ವಜ ಹಾರಾಟವಿಲ್ಲ!

ಮೊಹಮದ್‌ ರಿಜ್ವಾನ್‌ ನಾಯಕತ್ವದ ಪಾಕ್‌ ತಂಡದಲ್ಲಿ ಅನುಭವಿ ಬ್ಯಾಟರ್‌ಗಳಾದ ಬಾಬರ್‌ ಆಜಂ, ಫಖರ್‌ ಜಮಾನ್‌ ಇದ್ದಾರೆ. ಆಘಾ ಸಲ್ಮಾನ್‌ ಟ್ರಂಪ್‌ಕಾರ್ಡ್‌ ಎನಿಸಿಕೊಂಡಿದ್ದು, ಅವರ ಪ್ರದರ್ಶನ ನಿರ್ಣಾಯಕ ಎನಿಸಿಕೊಂಡಿದೆ. ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಶಾಹೀನ್‌ ಅಫ್ರಿದಿ, ಹ್ಯಾರಿಸ್‌ ರೌಫ್‌, ನಸೀಂ ಶಾ ಇದ್ದು, ಅವರಿಗೆ ಸ್ಪಿನ್ನರ್‌ ಅಬ್ರಾರ್‌ ಅಹ್ಮದ್‌ ಎಷ್ಟರ ಮಟ್ಟಿಗೆ ನೆರವಾಗುತ್ತಾರೆ ಎಂಬ ಕುತೂಹಲವಿದೆ.

ಮತ್ತೊಂದೆಡೆ ನ್ಯೂಜಿಲೆಂಡ್‌ ತಂಡ ಎಲ್ಲಾ ವಿಭಾಗದಲ್ಲಿ ಬಲಿಷ್ಠವಾಗಿ ತೋರುತ್ತಿದೆ. ಅಲ್ಲದೆ, 2019ರ ಬಳಿಕ ಪಾಕ್‌ನಲ್ಲಿ ಗರಿಷ್ಠ ಏಕದಿನ ಪಂದ್ಯ(11) ಆಡಿದ ಅನುಭವ ನ್ಯೂಜಿಲೆಂಡ್‌ಗಿದೆ. ಡೆವೋನ್‌ ಕಾನ್‌ವೇ, ರಚಿನ್‌ ರವೀಂದ್ರ, ವಿಲಿಯಮ್ಸನ್‌, ಡ್ಯಾರಿಲ್‌ ಮಿಚೆಲ್‌, ಲೇಥಮ್ ಬ್ಯಾಟಿಂಗ್‌ ಆಧಾರಸ್ತಂಭಗಳಾಗಿದ್ದಾರೆ. ಆಲ್ರೌಂಡರ್‌ಗಳಾದ ಮೈಕಲ್‌ ಬ್ರೇಸ್‌ವೆಲ್‌, ಮಿಚೆಲ್‌ ಸ್ತಾಂಟ್ನರ್‌ ತಂಡದ ಪ್ರಮುಖ ಶಕ್ತಿ. ಆದರೆ ವೇಗದ ಬೌಲಿಂಗ್‌ ವಿಭಾಗದಲ್ಲಿ ಅನುಭವತಿಗಳ ಕೊರತೆ ಎದುರಾಗಬಹುದು. ಸೌಥಿ, ಫರ್ಗ್ಯೂಸನ್‌ ಗೈರಿನಲ್ಲಿ ಮ್ಯಾಟ್‌ ಹೆನ್ರಿ, ಜೇಮಿಸನ್‌, ವಿಲ್‌ ಒರೌರ್ಕೆ ವೇಗದ ಬೌಲಿಂಗ್‌ ಪಡೆಯನ್ನು ಮುನ್ನಡೆಸಲಿದ್ದಾರೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತದ ಜೆರ್ಸಿಯಲ್ಲಿ ‘ಪಾಕಿಸ್ತಾನ’ ಹೆಸರು!

ಸಂಭವನೀಯ ಆಟಗಾರರು

ಪಾಕಿಸ್ತಾನ: ಫಖರ್, ಆಜಂ, ಶಕೀಲ್‌, ರಿಜ್ವಾನ್(ನಾಯಕ), ಸಲ್ಮಾನ್‌, ತಯ್ಯಬ್‌ ತಾಹಿರ್‌, ಖುಶ್ದಿಲ್‌, ಶಾಹೀನ್‌, ಹ್ಯಾರಿಸ್‌, ನಸೀಂ ಶಾ, ಅಬ್ರಾರ್‌.

ನ್ಯೂಜಿಲೆಂಡ್‌: ಯಂಗ್‌, ಕಾನ್‌ವೇ, ರಚಿನ್‌, ವಿಲಿಯಮ್ಸನ್‌, ಡ್ಯಾರಿಲ್‌, ಲೇಥಮ್‌, ಫಿಲಿಪ್ಸ್‌, ಸ್ಯಾಂಟ್ನರ್‌(ನಾಯಕ), ಹೆನ್ರಿ, ಜೇಮಿಸನ್‌, ನೇಥನ್‌ ಸ್ಮಿತ್‌.

ಒಟ್ಟು ಮುಖಾಮುಖಿ: 118

ಪಾಕಿಸ್ತಾನ: 61

ನ್ಯೂಜಿಲೆಂಡ್‌: 53

ಫಲಿತಾಂಶವಿಲ್ಲ: 03

ಟೈ: 01

ಪಿಚ್‌ ರಿಪೋರ್ಟ್‌

ಕರಾಚಿ ಕ್ರೀಡಾಂಗಣ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಹೆಚ್ಚು. ಆರಂಭದಲ್ಲಿ ವೇಗಿಗಳಿಗೆ ಪಿಚ್ ನೆರವಾದರೂ, ಪಂದ್ಯ ಸಾಗಿದಂತೆ ಬ್ಯಾಟಿಂಗ್‌ ಸುಲಭವಾಗಬಹುದು. ಮಂಜಿನ ಕಾರಣಕ್ಕೆ ಟಾಸ್‌ ಗೆಲ್ಲುವ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

ಪಂದ್ಯ: ಮಧ್ಯಾಹ್ನ 2.30ಕ್ಕೆ(ಭಾರತೀಯ ಕಾಲಮಾನ)

ಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌.

3 ದಶಕದ ಬಳಿಕ ಪಾಕ್‌ ನೆಲದಲ್ಲಿ ಐಸಿಸಿ ಟೂರ್ನಿ

ಪಾಕಿಸ್ತಾನ ಬರೋಬ್ಬರಿ 3 ದಶಕದ ಬಳಿಕ ಐಸಿಸಿ ಟೂರ್ನಿ ಆಯೋಜಿಸುತ್ತಿದೆ. ಪಾಕ್‌ನಲ್ಲಿ ಕೊನೆ ಬಾರಿಗೆ ಐಸಿಸಿ ಟೂರ್ನಿಯೊಂದು ನಡೆದಿದ್ದು 1996ರಲ್ಲಿ. ಭಾರತ ಹಾಗೂ ಶ್ರೀಲಂಕಾದ ಜೊತೆ ಪಾಕಿಸ್ತಾನ ಏಕದಿನ ವಿಶ್ವಕಪ್‌ಗೆ ಜಂಟಿ ಆತಿಥ್ಯ ವಹಿಸಿತ್ತು.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತದ ಜೆರ್ಸಿಯಲ್ಲಿ ‘ಪಾಕಿಸ್ತಾನ’ ಹೆಸರು!

ಕ್ರೀಡಾಂಗಣಗಳ ಬಳಿ 12,000 ಭದ್ರತಾ ಸಿಬ್ಬಂದಿ

ದೀರ್ಘ ಕಾಲದ ಬಳಿಕ ಐಸಿಸಿ ಟೂರ್ನಿ ಆಯೋಜಿಸುತ್ತಿರುವ ಪಾಕಿಸ್ತಾನ, ಭದ್ರತೆಗಾಗಿ 12,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ಕ್ರೀಡಾಂಗಣಗಳ ಸುತ್ತ ನೇಮಿಸಿದೆ. ಲಾಹೋರ್‌ ಕ್ರೀಡಾಂಗಣದ ಬಳಿ ಹೆಚ್ಚಿನ ಸುರಕ್ಷತೆ ಕೈಗೊಳ್ಳಲಾಗಿದ್ದು, 12 ಹಿರಿಯ ಅಧಿಕಾರಿಗಳು, 6,700ರಷ್ಟು ಕಾನ್‌ಸ್ಟೇಬಲ್‌ಗಳು ಸೇರಿ 8,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಿಸಲಾಗಿದೆ. ಇನ್ನು, ಕರಾಚಿ, ರಾವಲ್ಪಿಂಡಿ ಕ್ರೀಡಾಂಗಣಗಳು, ಆಟಗಾರರು ಉಳಿದುಕೊಳ್ಳುವ ಹೋಟೆಲ್‌, ಸಂಚರಿಸುವ ದಾರಿಯುದ್ದಕ್ಕೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
 

Latest Videos
Follow Us:
Download App:
  • android
  • ios