ಕೋಲ್ಕತಾ[ನ.24]: ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ದಾಖಲಿಸಿದೆ. ಟೀಂ ಇಂಡಿಯಾ ಸಂಘಟಿತ ಪ್ರದರ್ಶನಕ್ಕೆ ಮತ್ತೊಂದು ಇನಿಂಗ್ಸ್ ಟೆಸ್ಟ್ ಗೆಲುವು ಭಾರತದ ಪಾಲಾಗಿದೆ. ಈ ಟೆಸ್ಟ್ ಪಂದ್ಯವನ್ನು ಗೆಲ್ಲುವುದರ ಮೂಲಕ ಟೀಂ ಇಂಡಿಯಾ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಒಟ್ಟು 360 ಅಂಕ ಗಳಿಸುವುದರೊಂದಿಗೆ ನಂ.1 ಸ್ಥಾನದಲ್ಲೇ ಮುಂದುವರೆದಿದೆ.

ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಐತಿಹಾಸಿಕ ಗೆಲುವು; ಕೊಹ್ಲಿ ಸೈನ್ಯಕ್ಕೆ ಫ್ಯಾನ್ಸ್ ಸಲ್ಯೂಟ್!

ಭಾರತದ ಕ್ರಿಕೆಟ್ ಕಾಶಿ ಎಂದೇ ಹೆಸರಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಚೊಚ್ಚಲ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಹಾಗೂ ಉಮೇಶ್ ಯಾದವ್ ಅದ್ಭುತ ಪ್ರದರ್ಶನ ನೀಡುವುದರ ಮೂಲಕ ಕಮಾಲ್ ಮಾಡಿದರೆ, ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.

ಐತಿಹಾಸಿಕ ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ’ಕಳೆದ ಮೂರ್ನಾಲ್ಕು ವರ್ಷಗಳ ಕಠಿಣ ಪ್ರಯತ್ನದ ಫಲವಾಗಿ ಟೀಂ ಇಂಡಿಯಾ ಈಗ ಉತ್ತಮ ಪ್ರದರ್ಶನ ನೀಡುತ್ತಿದೆ. ನನಗೆ ಆಯೋಜಕರು ಒಂದು ವೇಳೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿದರೆ, ಅದನ್ನು ಉಮೇಶ್ ಅಥವಾ ಇಶಾಂತ್’ಗೆ ನೀಡುತ್ತಿದ್ದೆ’ ಎಂದಿದ್ದಾರೆ. ಕೊಹ್ಲಿಯ ಈ ಹೇಳಿಕೆ ಕ್ರಿಕೆಟ್ ಅಭಿಮಾನಿಗಳ ಹೃದಯಗೆದ್ದಿದೆ.

ಇಶಾಂತ್-ಉಮೇಶ್ ಬಿರುಗಾಳಿ, ಪಿಂಕ್ ಬಾಲ್ ಟೆಸ್ಟ್ ಟೀಂ ಇಂಡಿಯಾ ಕೈವಶ

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ  79 ರನ್ ನೀಡಿ 9 ವಿಕೆಟ್ ಪಡೆದರೆ, ಮತ್ತೋರ್ವ ವೇಗಿ ಉಮೇಶ್ ಯಾದವ್ 82 ರನ್ ನೀಡಿ 8 ವಿಕೆಟ್ ಕಬಳಿಸಿದ್ದರು. ಈ ಮೂಲಕ ಟೀಂ ಇಂಡಿಯಾ ಇನಿಂಗ್ಸ್ ಗೆಲುವಿನಲ್ಲಿ ನೆರವಾಗಿದ್ದರು. 

ಭಾರತದ ಚೊಚ್ಚಲ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ನಾಯಕ ವಿರಾಟ್ ಕೊಹ್ಲಿ ಮೊದಲ ಶತಕ ಸಿಡಿಸಿದ್ದರು. ಹೀಗಾಗಿ ಎಲ್ಲರೂ ವಿರಾಟ್’ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಸಿಗಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಅದ್ಭುತ ಬೌಲಿಂಗ್ ಸಂಘಟಿಸಿದ್ದ ಇಶಾಂತ್ ಶರ್ಮಾಗೆ ಪಂದ್ಯಶ್ರೇಷ್ಠ ಹಾಗೆಯೇ ಸರಣಿ ಶ್ರೇಷ್ಠ ಗೌರವ ಒಲಿದು ಬಂದಿದೆ. 

ಭಾರತ ತಂಡವು ಇನ್ನು 2020ರ ಫೆಬ್ರವರಿ 21ರಂದು ವೆಲ್ಲಿಂಗ್ಟನ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲಿದೆ. ಅಲ್ಲಿಯವರೆಗೂ ಟೀಂ ಇಂಡಿಯಾ ಸೀಮಿತ ಓವರ್’ಗಳ ಪಂದ್ಯವನ್ನಷ್ಟೇ ಆಡಲಿದೆ. ಇದೀಗ ವಿರಾಟ್ ಪಡೆ ಡಿಸೆಂಬರ್ 06ರಿಂದ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿ ಆಡಲಿದೆ.