ಬೆಂಗಳೂರು ಟೆಸ್ಟ್ ಸೋಲಿನ ಬೆನ್ನಲ್ಲೇ ಶುರುವಾಯ್ತು WTC ಫೈನಲ್ ಹೊಸ ಲೆಕ್ಕಾಚಾರ! ಭಾರತ ಇನ್ನೆಷ್ಟು ಪಂದ್ಯ ಗೆಲ್ಬೇಕು?
ಬೆಂಗಳೂರು ಟೆಸ್ಟ್ ಪಂದ್ಯ ಸೋಲುತ್ತಿದ್ದಂತೆಯೇ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಲೆಕ್ಕಾಚಾರದಲ್ಲಿ ಕೊಂಚ ಬದಲಾವಣೆಯಾಗಿದೆ
ದುಬೈ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವು 8 ವಿಕೆಟ್ ಅಂತರದ ಐತಿಹಾಸಿಕ ಗೆಲುವು ದಾಖಲಿಸಿದೆ. ಗೆಲ್ಲಲು 107 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಕಿವೀಸ್ ತಂಡವು ಅನಾಯಾಸವಾಗಿ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಬರೋಬ್ಬರಿ 36 ವರ್ಷಗಳ ಬಳಿಕ ಭಾರತದ ನೆಲದಲ್ಲಿ ಟೆಸ್ಟ್ ಗೆಲುವಿನ ನಗೆ ಬೀರುವಲ್ಲಿ ನ್ಯೂಜಿಲೆಂಡ್ ತಂಡವು ಯಶಸ್ವಿಯಾಗಿದೆ.
ಈ ಗೆಲುವಿನೊಂದಿಗೆ ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ 44.44% ಅಂಕಗಳನ್ನು ಕಲೆಹಾಕುವ ಮೂಲಕ ನ್ಯೂಜಿಲೆಂಡ್ ತಂಡವು 6ನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಬೆಂಗಳೂರು ಟೆಸ್ಟ್ ಪಂದ್ಯವನ್ನು ಸೋಲುತ್ತಿದ್ದಂತೆಯೇ 70.83%ನಿಂದ 68.06%ಗೆ ಜಾರಿದೆ. ಹೀಗಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿಯೇ ಮುಂದುವರೆದಿದೆ.
ಬೆಂಗಳೂರು ಟೆಸ್ಟ್ ಸೋಲಿನ ಬೆನ್ನಲ್ಲೇ ಖಡಕ್ ವಾರ್ನಿಂಗ್ ಕೊಟ್ಟ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ!
ಈ ಸೋಲು ಟೀಂ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್‌ಗೆ ತೊಡಕಾಗುವುದೇ ಎನ್ನುವ ಅನುಮಾನ ನಿಮ್ಮನ್ನು ಕಾಡುತ್ತಿರಬಹುದು. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ನಾವು ಮಾಡೋಣ ಬನ್ನಿ.
ಭಾರತ ತಂಡವು ಬೆಂಗಳೂರು ಟೆಸ್ಟ್ ಪಂದ್ಯದ ಸೋಲಿನ ಹೊರತಾಗಿಯೂ WTC ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಭಾರತ ತಂಡವು ತವರಿನಲ್ಲಿ ನ್ಯೂಜಿಲೆಂಡ್ ಎದುರು 2 ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿ 5 ಸೇರಿದಂತೆ ಒಟ್ಟು 7 ಟೆಸ್ಟ್ ಪಂದ್ಯಗಳನ್ನು ಆಡುವುದು ಬಾಕಿ ಇದೆ. ಭಾರತ ತಂಡವು ಮುಂದಿನ 7 ಟೆಸ್ಟ್ ಪಂದ್ಯಗಳ ಪೈಕಿ 4 ಪಂದ್ಯಗಳಲ್ಲಿ ಗೆಲುವು ಹಾಗೂ ಒಂದು/ಎರಡು ಪಂದ್ಯವನ್ನು ಡ್ರಾ ಮಾಡಿಕೊಂಡರೇ ಸಾಕು ಅನಾಯಾಸವಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲಿದೆ. ಇದರ ಜತೆಗೆ ಸತತ ಮೂರನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನಾಡಲು ಅರ್ಹತೆಗಿಟ್ಟಿಸಿಕೊಳ್ಳಲಿದೆ.
ಬೆಂಗಳೂರು ಟೆಸ್ಟ್: 36 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದ ನ್ಯೂಜಿಲೆಂಡ್
ಇನ್ನು ಆಸ್ಟ್ರೇಲಿಯಾ ತಂಡವು 7 ಟೆಸ್ಟ್ ಪಂದ್ಯಗಳನ್ನಾಡಲಿದ್ದು, ಈ ಪೈಕಿ 4 ಗೆಲುವು 2 ಡ್ರಾ ಹಾಗೂ ಒಂದು ಪಂದ್ಯ ಸೋತರೇ ಭಾರತವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗುವ ಅವಕಾಶ ಇದೆ.