ಬೆಂಗಳೂರು ಟೆಸ್ಟ್: 36 ವರ್ಷಗಳ ಬಳಿಕ ಭಾರತದಲ್ಲಿ ಟೆಸ್ಟ್ ಪಂದ್ಯ ಗೆದ್ದ ನ್ಯೂಜಿಲೆಂಡ್

ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 8 ವಿಕೆಟ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. 

New Zealand Register Historic test victory in Indian Soil in Bengaluru Test kvn

ಬೆಂಗಳೂರು: ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿದ ಪರಿಣಾಮ ಭಾರತ ಕ್ರಿಕೆಟ್ ತಂಡವು ಮೊದಲ ಟೆಸ್ಟ್ ಪಂದ್ಯವನ್ನು ಕೈಚೆಲ್ಲಿದೆ. ಭಾರತ ಎದುರು 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ನ್ಯೂಜಿಲೆಂಡ್ ತಂಡವು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇನ್ನು ಇದರೊಂದಿಗೆ ಬರೋಬ್ಬರಿ 36 ವರ್ಷಗಳ ಬಳಿಕ ನ್ಯೂಜಿಲೆಂಡ್ ತಂಡವು ಭಾರತದ ನೆಲದಲ್ಲಿ ಮೊದಲ ಟೆಸ್ಟ್ ಗೆಲುವಿನ ರುಚಿ ಕಂಡಿದೆ.

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಗೆಲ್ಲಲು 107 ರನ್‌ಗಳ ಸಾಧಾರಣ ಗುರಿ ಪಡದ ನ್ಯೂಜಿಲೆಂಡ್ ತಂಡವು ಮೊದಲ ಓವರ್‌ನಲ್ಲೇ ನಾಯಕ ಟಾಮ್ ಲೇಥಮ್ ವಿಕೆಟ್ ಕಳೆದುಕೊಂಡಿತು. ಜಸ್ಪ್ರೀತ್ ಬುಮ್ರಾ, ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ಲೇಥಮ್ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ಇನ್ನು ಮತ್ತೋರ್ವ ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ(17)ಯನ್ನು  ಬುಮ್ರಾ ಪೆವಿಲಿಯನ್‌ಗೆ ಅಟ್ಟಿದರು. ಆಗ ನ್ಯೂಜಿಲೆಂಡ್‌ ಸ್ಕೋರ್ 2 ವಿಕೆಟ್ ನಷ್ಟಕ್ಕೆ 35 ರನ್.

ರೋಹಿತ್ ಶರ್ಮಾ ತೆಗೆದುಕೊಂಡ ಆ ಒಂದು ಕೆಟ್ಟ ನಿರ್ಧಾರದಿಂದ 36 ವರ್ಷಗಳ ಬಳಿಕ ಭಾರತಕ್ಕೆ ಸೋಲಾಗುತ್ತಾ?

ಇದಾದ ಬಳಿಕ ಜತೆಯಾದ ರಚಿನ್ ರವೀಂದ್ರ ಹಾಗೂ ವಿಲ್ ಯಂಗ್ ಮೂರನೇ ವಿಕೆಟ್‌ಗೆ ಮುರಿಯದ 72 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಯಾವುದೇ ಅಪಾಯವಿಲ್ಲದೇ ಗೆಲುವಿನ ದಡ ಸೇರಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದ ರಚಿನ್ ರವೀಂದ್ರ ಅಮೂಲ್ಯ 39 ರನ್ ಬಾರಿಸಿದರೇ, ಮತ್ತೊಂದು ತುದಿಯಲ್ಲಿ ವಿಲ್ ಯಂಗ್ 45 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಧೋನಿ ಹೆಸರಲ್ಲಿದ್ದ ಅಪರೂಪದ ದಾಖಲೆ ಮುರಿದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್!

36 ವರ್ಷಗಳ ಬಳಿಕ ಮೊದಲ ಗೆಲುವು: ನ್ಯೂಜಿಲೆಂಡ್ ಕ್ರಿಕೆಟ್ ತಂಡವು 1988ರಲ್ಲಿ ಕೊನೆಯ ಬಾರಿಗೆ ಭಾರತ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿತ್ತು. ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಕಿವೀಸ್ ಪಡೆ ಭಾರತದ ಎದುರು ಕೊನೆಯ ಬಾರಿಗೆ ಭಾರತದ ನೆಲದಲ್ಲಿ ಟೆಸ್ಟ್ ಗೆಲುವು ಸಾಧಿಸಿತ್ತು.

Latest Videos
Follow Us:
Download App:
  • android
  • ios