ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವದಿಂದ ಹರ್ಮನ್‌ಪ್ರೀತ್‌ ಕೌರ್‌ ಕೆಳಗಿಳಿದಿದ್ದು, ಇನ್ನು ಮುಂದೆ ಕೇವಲ ಆಟಗಾರ್ತಿಯಾಗಿ ಮುಂದುವರಿಯಲಿದ್ದಾರೆ. ಅವರ ಸ್ಥಾನಕ್ಕೆ ಸ್ಮೃತಿ ಮಂಧನಾ ನೂತನ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮುಂಬರುವ ಜಿಂಬಾಬ್ವೆ ಸರಣಿಗೆ ಸ್ಮೃತಿ ಮಂಧನಾ ತಂಡವನ್ನು ಮುನ್ನಡೆಸಲಿದ್ದಾರೆ.

ನವದೆಹಲಿ: ದಶಕಗಳ ಕಾಲ ಭಾರತ ತಂಡವನ್ನು ಮುನ್ನಡೆಸಿದ್ದ, ದೇಶಕ್ಕೆ ಏಕೈಕ ಮಹಿಳಾ ವಿಶ್ವಕಪ್‌ ಗೆಲ್ಲಿಸಿಕೊಟ್ಟಿದ್ದ ಹರ್ಮನ್‌ಪ್ರೀತ್‌ ಕೌರ್‌ ನಾಯಕತ್ವವನ್ನು ತ್ಯಜಿಸಿದ್ದಾರೆ. ಭಾರತ ಮಹಿಳಾ ಟೆಸ್ಟ್‌, ಏಕದಿನ ಹಾಗೂ ಟಿ20 ನಾಯಕತ್ವದಿಂದ ಅವರು ಮಂಗಳವಾರ ಕೆಳಗಿಳಿದಿದ್ದು, ಇನ್ನು ಆಟಗಾರ್ತಿಯಾಗಿ ಮುಂದುವರಿಯಲಿದ್ದಾರೆ. ಅವರ ಬದಲು ಸ್ಮೃತಿ ಮಂಧನಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಗುವಾಹಟಿಯಲ್ಲಿ ಮಂಗಳವಾರ ಬಿಸಿಸಿಐ ಸಭೆ ನಡೆಯಿತು. ಇದರಲ್ಲಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ, ಹರ್ಮನ್‌ಪ್ರೀತ್‌ ಹಾಗೂ ಉಪನಾಯಕಿ ಸ್ಮೃತಿ ಮಂಧನಾ, ಮುಖ್ಯ ಕೋಚ್‌ ಅಮೋಲ್‌ ಮಜುಂದಾರ್‌ ಪಾಲ್ಗೊಂಡಿದ್ದರು.

ಹರ್ಮನ್‌ 2016ರಲ್ಲಿ ಭಾರತ ಟಿ20 ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದು, 2022ರಲ್ಲಿ ಏಕದಿನ, 2023ರಲ್ಲಿ ಟೆಸ್ಟ್‌ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಅವರ ನಾಯಕತ್ವದಲ್ಲೇ ಕಳೆದ ವರ್ಷ ಭಾರತ ಚೊಚ್ಚಲ ಏಕದಿನ ವಿಶ್ವಕಪ್‌ ಗೆದ್ದಿತ್ತು.

ಸ್ಮೃತಿ ಮಂಧನಾ ನೇಮಕ:

ಹರ್ಮನ್‌ ನಿರ್ಗಮನ ಬೆನ್ನಲ್ಲೇ ಸ್ಮೃತಿ ಮಂಧನಾ ಅವರನ್ನು ನಾಯಕಿಯಾಗಿ ನೇಮಿಸಲಾಗಿದೆ. ಜಿಂಬಾಬ್ವೆ ವಿರುದ್ಧ ಟಿ20, ಏಕದಿನ ಸರಣಿಗೆ ಸ್ಮೃತಿ ನಾಯಕತ್ವದ ತಂಡವನ್ನು ಪ್ರಕಟಿಸಲಾಗಿದೆ. ಟಿ20ಗೆ ಶಫಾಲಿ ವರ್ಮಾ, ಏಕದಿನಕ್ಕೆ ದೀಪ್ತಿ ಶರ್ಮಾ ಉಪನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಹರ್ಮನ್‌ಪ್ರೀತ್‌ ಕೂಡಾ ಇದ್ದಾರೆ.

ಐಸಿಸಿ ತಿಂಗಳ ಕ್ರಿಕೆಟರ್ ಪ್ರಶಸ್ತಿ ರೇಸ್‌ನಲ್ಲಿ ಶಫಾಲಿ ಅಭಿಷೇಕ್, ಗಿಲ್‌, ಚರಣಿ

ದುಬೈ: ಐಸಿಸಿ ನೀಡುವ ಸೆಪ್ಟೆಂಬರ್‌ ತಿಂಗಳ ಶ್ರೇಷ್ಠ ಕ್ರಿಕೆಟರ್‌ ಪ್ರಶಸ್ತಿ ರೇಸ್‌ನಲ್ಲಿ ಭಾರತದ ನಾಲ್ವರು ಆಟಗಾರರು ಇದ್ದಾರೆ. ಪುರುಷರ ವಿಭಾಗದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೆ ಬ್ಯಾಟರ್‌ಗಳಾದ ಅಭಿಷೇಕ್‌ ಶರ್ಮಾ, ಶುಭ್‌ಮನ್‌ ಗಿಲ್‌ ಹಾಗೂ ಸಿಕಂದರ್‌ ರಝಾ ನಾಮನಿರ್ದೇಶನಗೊಂಡಿದ್ದಾರೆ. ಈ ಪೈಕಿ ಗಿಲ್‌ ಈಗಾಗಲೇ 4 ಬಾರಿ ತಿಂಗಳ ಶ್ರೇಷ್ಠ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಶಫಾಲಿ ವರ್ಮಾ, ಸ್ಪಿನ್ನರ್‌ ಶ್ರೀ ಚರಣಿ ಹಾಗೂ ಶ್ರೀಲಂಕಾ ನಾಯಕಿ ಚಾಮರಿ ಅಟ್ಟಪಟ್ಟು ನಾಮನಿರ್ದೇಶನಗೊಂಡಿದ್ದಾರೆ.