ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಹತ್ವದ ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಹರ್ಮನ್‌ಪ್ರೀತ್ ಕೌರ್ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ, ಸ್ಮೃತಿ ಮಂದಾನ ಭಾರತ ಮಹಿಳಾ ಕ್ರಿಕೆಟ್ ತಂಡದ ಮುಂದಿನ ನಾಯಕಿಯಾಗುವ ನಿರೀಕ್ಷೆ ಮೂಡಿದೆ.

ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಹತ್ವದ ನಾಯಕತ್ವ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಹರ್ಮನ್‌ಪ್ರೀತ್ ಕೌರ್ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿದ ಬೆನ್ನಲ್ಲೇ, ಸ್ಮೃತಿ ಮಂದಾನ ಭಾರತ ಮಹಿಳಾ ಕ್ರಿಕೆಟ್ ತಂಡದ ಮುಂದಿನ ನಾಯಕಿಯಾಗುವ ನಿರೀಕ್ಷೆ ಮೂಡಿದೆ. ಹೊರನೋಟಕ್ಕೆ ಇದು ಸಾಮಾನ್ಯ ನಾಯಕತ್ವ ಬದಲಾವಣೆಯಂತೆ ಕಂಡರೂ, ತಂಡದೊಳಗಿನ ಪರಿಸ್ಥಿತಿ ಅಷ್ಟು ಸರಳವಾಗಿರಲಿಲ್ಲ ಎನ್ನಲಾಗುತ್ತಿದೆ. ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮೃತಿ ಮಂದಾನ ನಡುವಿನ ನಾಯಕತ್ವದ ಕುರಿತ ಭಿನ್ನಾಭಿಪ್ರಾಯಗಳು ಡ್ರೆಸ್ಸಿಂಗ್‌ ರೂಮ್‌ನ ವಾತಾವರಣದ ಮೇಲೂ ಪರಿಣಾಮ ಬೀರಿದ್ದವು ಎಂದು ವರದಿಯೊಂದು ತಿಳಿಸಿದೆ.

ನಾಯಕತ್ವವೇ ಇಬ್ಬರ ನಡುವೆ ಅಂತರಕ್ಕೆ ಕಾರಣ?

ಪಿಟಿಐ ವರದಿ ಪ್ರಕಾರ, ತಂಡದ ಮೂಲವೊಂದು ಇಬ್ಬರು ಹಿರಿಯ ಆಟಗಾರ್ತಿಯರ ನಡುವಿನ ಸಂಬಂಧದಲ್ಲಿ ಕೆಲವು ಸಮಯದಿಂದ ಬಿರುಕು ಕಾಣಿಸಿಕೊಂಡಿತ್ತು ಎಂದು ಹೇಳಿದೆ. ಇಬ್ಬರೂ ಪರಸ್ಪರ ಮುಖಾಮುಖಿಯಾಗದ ಪರಿಸ್ಥಿತಿ ಡ್ರೆಸ್ಸಿಂಗ್‌ ರೂಮ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಆದರೆ, ಈ ಕುರಿತು ಹರ್ಮನ್‌ಪ್ರೀತ್ ಕೌರ್ ಅಥವಾ ಸ್ಮೃತಿ ಮಂದಾನ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ ಎಂಬುದನ್ನೂ ಗಮನಿಸಬೇಕಿದೆ.

ಬಿಸಿಸಿಐ ಪರಿಶೀಲನಾ ಸಭೆಯ ಬಳಿಕ ಮಹತ್ವದ ನಿರ್ಧಾರ

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ನೇತೃತ್ವದಲ್ಲಿ ಗುವಾಹಟಿಯಲ್ಲಿ ನಡೆದ ಪರಿಶೀಲನಾ ಸಭೆಯ ಬಳಿಕ ನಾಯಕತ್ವ ಬದಲಾವಣೆಯ ಪ್ರಕ್ರಿಯೆ ವೇಗ ಪಡೆದುಕೊಂಡಿತು ಎನ್ನಲಾಗಿದೆ. 2016ರಲ್ಲಿ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ 37 ವರ್ಷದ ಹರ್ಮನ್‌ಪ್ರೀತ್, ಏಷ್ಯನ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಸತತ ಎರಡನೇ ಚಿನ್ನದ ಪದಕ ಗೆಲ್ಲಿಸಿಕೊಟ್ಟ ಬಳಿಕ ನಾಯಕತ್ವದ ಜವಾಬ್ದಾರಿಯಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಬಿಸಿಸಿಐನಿಂದ ಈ ಕುರಿತು ಅಧಿಕೃತ ಘೋಷಣೆ ಇನ್ನೂ ಹೊರಬಿದ್ದಿಲ್ಲ. ಆದರೆ ಸ್ಮೃತಿ ಮಂದಾನ ಮುಂದಿನ ನಾಯಕಿಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಸ್ಮೃತಿ ಮಂಧಾನಗೆ ಸಿಗುತ್ತಾ ನಾಯಕತ್ವದ ಹೊಣೆ?

2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸ್ಮೃತಿ ಮಂಧಾನ, ಈಗಾಗಲೇ ಭಾರತದ ಪ್ರಮುಖ ಬ್ಯಾಟರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10, 000ಕ್ಕೂ ಹೆಚ್ಚು ರನ್‌ ಗಳಿಸಿರುವ ಅನುಭವವೂ ಅವರಿಗಿದೆ. ಇದೀಗ ಬ್ಯಾಟಿಂಗ್ ಜವಾಬ್ದಾರಿಯ ಜೊತೆಗೆ ನಾಯಕತ್ವದ ಹೊಣೆಯೂ ಅವರ ಹೆಗಲೇರಲಿದೆ. ವಿಶೇಷವಾಗಿ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ಪ್ರದರ್ಶನದ ಮೇಲೆ ಹೆಚ್ಚಿನ ಗಮನವಿರುವ ಸಂದರ್ಭದಲ್ಲಿ ಮಂಧಾನ ಅವರ ನಾಯಕತ್ವಕ್ಕೆ ದೊಡ್ಡ ಸವಾಲು ಎದುರಾಗಲಿದೆ.

ನಾಯಕತ್ವದ ಬಗ್ಗೆ ಮಂಧಾನ ಹಿಂದೆಯೇ ಸೂಚನೆ ನೀಡಿದ್ದರು?

ಭಾರತ ಮಹಿಳಾ ತಂಡ ತವರಿನಲ್ಲಿ ಏಕದಿನ ವಿಶ್ವಕಪ್ ಗೆದ್ದು ಐಸಿಸಿ ಟ್ರೋಫಿಯ ದೀರ್ಘಕಾಲದ ಬರ ನೀಗಿಸಿದರೂ, ನಾಯಕತ್ವದ ಬದಲಾವಣೆಯ ಪ್ರಶ್ನೆ ಆಗಾಗ ಚರ್ಚೆಗೆ ಬಂದಿತ್ತು. ಸ್ಮೃತಿ ಮಂದಾನ ಕೂಡ ಭಾರತವನ್ನು ಮುನ್ನಡೆಸುವ ಸಿದ್ಧತೆಯ ಬಗ್ಗೆ ಈ ಹಿಂದೆ ಪರೋಕ್ಷವಾಗಿ ಮಾತನಾಡಿದ್ದರು ಎನ್ನಲಾಗಿದೆ. ಏಷ್ಯನ್ ಕ್ರೀಡಾಕೂಟದ ಯಶಸ್ಸಿನ ಬಳಿಕವೂ ಮುಂದಿನ ದೊಡ್ಡ ಟೂರ್ನಿಗಳತ್ತ ತಂಡ ಗಮನ ಹರಿಸಬೇಕಾದ ಅಗತ್ಯವನ್ನು ಅವರು ಒತ್ತಿ ಹೇಳಿದ್ದರು. ಇದರ ನಡುವೆ ಟಿ20 ಮಾದರಿಯಲ್ಲಿ ಭಾರತದ ಹಿನ್ನಡೆ ನಾಯಕತ್ವದ ಮೇಲಿನ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತ್ತು. ಸತತ ಟಿ20 ವಿಶ್ವಕಪ್‌ಗಳಲ್ಲಿ ನಿರೀಕ್ಷಿತ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ತಂಡದ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು.

ಮಿಥಾಲಿ ರಾಜ್ ಹೇಳಿದ್ದೇನು?

ನಾಯಕತ್ವ ಬದಲಾವಣೆಯ ಚರ್ಚೆ ಹೊಸದಲ್ಲ. ಮಾಜಿ ನಾಯಕಿ ಮಿಥಾಲಿ ರಾಜ್ ಈ ಹಿಂದೆ ಸ್ಮೃತಿ ಮಂದಾನನಗೆ ಇನ್ನಷ್ಟು ಮುಂಚೆಯೇ ಏಕದಿನ ನಾಯಕತ್ವ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದರು. ಅವರ ಪ್ರಕಾರ, ಮಂಧಾನಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವ ನೀಡಬಹುದು ಹಾಗೂ ಟಿ20 ನಾಯಕತ್ವವನ್ನು ಶಫಾಲಿ ವರ್ಮಾ ಅವರಂತಹ ಯುವ ಆಟಗಾರ್ತಿಗೆ ವಹಿಸಬಹುದು ಎಂಬ ಸಲಹೆ ನೀಡಿದ್ದರು.

ಹರ್ಮನ್‌ಪ್ರೀತ್ ಆಟಗಾರ್ತಿಯಾಗಿ ಮುಂದುವರಿಯುವ ಸಾಧ್ಯತೆ

ನಾಯಕತ್ವ ತ್ಯಜಿಸಿದರೂ ಹರ್ಮನ್‌ಪ್ರೀತ್ ಕೌರ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಸೂಚನೆ ಇಲ್ಲ. ಮುಂದಿನ ಎರಡು ಅಥವಾ ಮೂರು ವರ್ಷಗಳ ಕಾಲ ಅವರು ಆಟಗಾರ್ತಿಯಾಗಿ ಮುಂದುವರಿಯುವ ನಿರೀಕ್ಷೆಯಿದೆ. ನಾಯಕತ್ವದ ಒತ್ತಡ ಕಡಿಮೆಯಾಗಿರುವುದರಿಂದ ಇದೀಗ ಅವರ ಬ್ಯಾಟಿಂಗ್ ಮೇಲೂ ಹೆಚ್ಚಿನ ನಿರೀಕ್ಷೆ ಮೂಡಲಿದೆ. ಇತ್ತೀಚಿನ ಏಷ್ಯಾ ಕಪ್ ಮತ್ತು ಏಷ್ಯನ್ ಕ್ರೀಡಾಕೂಟಗಳಲ್ಲಿ ಅವರ ಬ್ಯಾಟಿಂಗ್ ಕೊಡುಗೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ ಎಂಬ ವಿಶ್ಲೇಷಣೆಗಳೂ ಕೇಳಿಬಂದಿವೆ.

ಸ್ಮೃತಿ ಮಂದಾನ ಮುಂದಿರುವ ದೊಡ್ಡ ಸವಾಲು

ಸ್ಮೃತಿ ಮಂದಾನಗೆ ನಾಯಕತ್ವ ಸಿಕ್ಕರೆ, ಕೇವಲ ನಾಯಕತ್ವದ ಜವಾಬ್ದಾರಿ ವಹಿಸುವುದಷ್ಟೇ ಅಲ್ಲದೆ, ತಂಡದೊಳಗಿನ ಹೊಸ ಸಮತೋಲನವನ್ನು ಕಾಯ್ದುಕೊಳ್ಳುವ ಸವಾಲೂ ಎದುರಾಗಲಿದೆ. ಹರ್ಮನ್‌ಪ್ರೀತ್ ಅವರಂತಹ ಅನುಭವಿ ಆಟಗಾರ್ತಿ ತಂಡದಲ್ಲೇ ಮುಂದುವರಿಯಲಿರುವುದರಿಂದ ಇಬ್ಬರ ನಡುವಿನ ವೃತ್ತಿಪರ ಸಂಬಂಧವೂ ಮಹತ್ವ ಪಡೆದುಕೊಳ್ಳಲಿದೆ. ಅಂತಿಮವಾಗಿ, ನಾಯಕತ್ವದ ಕುರಿತ ಭಿನ್ನಾಭಿಪ್ರಾಯಗಳ ವರದಿಗಳನ್ನು ಬದಿಗಿಟ್ಟು ಇಬ್ಬರೂ ತಂಡದ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡುತ್ತಾರೆಯೇ ಎಂಬುದು ಭಾರತೀಯ ಮಹಿಳಾ ಕ್ರಿಕೆಟ್‌ನ ಮುಂದಿನ ಅಧ್ಯಾಯದಲ್ಲಿ ಕುತೂಹಲ ಮೂಡಿಸಿರುವ ಪ್ರಮುಖ ಪ್ರಶ್ನೆಯಾಗಿದೆ.