ಲಲಿತ್ ಮೋದಿ ಬಿಡುಗಡೆ ಮಾಡಿದ ಶ್ರೀಶಾಂತ್ ಹರ್ಭಜನ್ ಸಿಂಗ್ ಘಟನೆಯ ವಿಡಿಯೋ ಟೀಕೆಗೆ ಗುರಿಯಾಗಿದೆ. ಹರ್ಭಜನ್ ಸಿಂಗ್ ಈ ಘಟನೆಗೆ ಮತ್ತೊಮ್ಮೆ ವಿಷಾದ ವ್ಯಕ್ತಪಡಿಸಿದ್ದಾರೆ. ಶ್ರೀಶಾಂತ್ ಪತ್ನಿ ಲಲಿತ್ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಂಡೀಗಢ: ಐಪಿಎಲ್ ಪಂದ್ಯದ ವೇಳೆ ಶ್ರೀಶಾಂತ್‌ಗೆ ಹೊಡೆದ ವಿಡಿಯೋವನ್ನು ಲಲಿತ್ ಮೋದಿ ಬಿಡುಗಡೆ ಮಾಡಿರುವುದು ಸ್ವಾರ್ಥದಿಂದ ಕೂಡಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ. ವಿಡಿಯೋ ಬಿಡುಗಡೆ ಮಾಡಿರುವ ರೀತಿ ತಪ್ಪು. 18 ವರ್ಷಗಳ ಹಿಂದೆ ನಡೆದ ಘಟನೆಯನ್ನು ಮತ್ತೆ ವಿಡಿಯೋ ಬಿಡುಗಡೆ ಮಾಡುವ ಮೂಲಕ ಜನರಿಗೆ ನೆನಪಿಸುವುದು ಸ್ವಾರ್ಥದಿಂದ ಕೂಡಿದೆ ಎಂದು ಹರ್ಭಜನ್ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಆಗ ನಡೆದ ಘಟನೆಗೆ ನನಗೆ ತುಂಬಾ ಬೇಸರವಿದೆ. ನಾನು ಇನ್ನೂ ನಾಚಿಕೆಪಡುತ್ತೇನೆ. ನನ್ನಿಂದ ಆ ತಪ್ಪು ಆಗಬಾರದಿತ್ತು. ನಾನು ಹಲವು ಬಾರಿ ಶ್ರೀಶಾಂತ್‌ನಲ್ಲಿ ಕ್ಷಮೆ ಕೇಳಿದ್ದೇನೆ. ಮನುಷ್ಯರಾದ ಮೇಲೆ ತಪ್ಪುಗಳು ಆಗುತ್ತವೆ. ನಾನೂ ಕೂಡ ತಪ್ಪು ಮಾಡಿದ್ದೇನೆ. ಮುಂದೆ ತಪ್ಪುಗಳಾದರೆ ಗಣಪತಿಯಲ್ಲಿ ಕ್ಷಮೆ ಕೇಳಿದ್ದೇನೆ ಎಂದು ಹರ್ಭಜನ್ ಹೇಳಿದ್ದಾರೆ. ಶ್ರೀಶಾಂತ್-ಹರ್ಭಜನ್ ಸಿಂಗ್ ವಿಡಿಯೋ ಬಿಡುಗಡೆ ಮಾಡಿದ ಲಲಿತ್ ಮೋದಿ ಮತ್ತು ಮೈಕಲ್ ಕ್ಲಾರ್ಕ್ ವಿರುದ್ಧ ಶ್ರೀಶಾಂತ್ ಪತ್ನಿ ಭುವನೇಶ್ವರಿ ಕೂಡ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಆದರೆ ಶ್ರೀಶಾಂತ್ ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಲಜ್ಜೆಗೆಟ್ಟ ಲಲಿತ್ ಮೋದಿ ಹಾಗೂ ಮೈಕಲ್ ಕ್ಲಾರ್ಕ್ ನೀವು ಮನುಷ್ಯರಲ್ಲ. 2008ರ ಘಟನೆಯನ್ನು ನೀವು ಪ್ರಚಾರಕ್ಕಾಗಿ ಬಳಸುತ್ತಿದ್ದೀರ ಎಂದು ಎಸ್ ಶ್ರೀಶಾಂತ್ ಪತ್ನಿ ಭಯವನೇಶ್ವರಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. 2008ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಎಸ್ ಶ್ರೀಶಾಂತ್ ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್) ತಂಡದ ಆಟಗಾರರಾಗಿದ್ದರು. ಇನ್ನು ಅನುಭವಿ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದ ಸದಸ್ಯರಾಗಿದ್ದರು. ಉಭಯ ತಂಡಗಳು ಮುಖಾಮುಖಿಯಾದಾಗ ಯಾವುದೋ ವಿಚಾರಕ್ಕೆ ಭಜ್ಜಿ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದರು.

ಇನ್ನು ಈ ಹಿಂದೆ ಒಂದು ಸಂದರ್ಶನದಲ್ಲಿ ಹರ್ಭಜನ್ ಸಿಂಗ್ ಕೂಡಾ ಈ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿದ್ದರು. ನನ್ನ ಜೀವನದಲ್ಲಿ ಯಾವುದಾದರೂ ಒಂದು ಘಟನೆಯನ್ನು ಬದಲಾಯಿಸಬೇಕು ಅಂತಾದರೆ, ಅಥವಾ ಅಂತಹ ಅವಕಾಶ ಸಿಕ್ಕರೇ 2008ರಲ್ಲಿ ಶ್ರೀಶಾಂತ್‌ಗೆ ಕೆನ್ನೆಗೆ ಬಾರಿಸಿದ ಘಳಿಕೆಯನ್ನು ಬದಲಾಯಿಸಲು ಬಯಸುತ್ತೇನೆ ಎಂದು ಭಜ್ಜಿ ಹೇಳಿದ್ದರು. ಇದಷ್ಟೇ ಅಲ್ಲದೇ ಈ ಘಟನೆಯ ಕುರಿತಂತೆ ಶ್ರೀಶಾಂತ್ ಬಳಿ ಸಾಕಷ್ಟು ಬಾರಿ ತಾವು ಕ್ಷಮೆ ಕೋರಿರುವುದಾಗಿಯೂ ಹೇಳಿದ್ದಾರೆ.

2008ರ ಐಪಿಎಲ್‌ನಲ್ಲಿ ಹರ್ಭಜನ್ ಸಿಂಗ್ ಶ್ರೀಶಾಂತ್‌ಗೆ ಹೊಡೆದ ವಿಡಿಯೋವನ್ನು ಮೈಕಲ್ ಕ್ಲಾರ್ಕ್ ಜೊತೆಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಲಲಿತ್ ಮೋದಿ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋವನ್ನು ಯಾರೂ ನೋಡಿಲ್ಲ. ಆಗ ಬ್ರಾಡ್‌ಕಾಸ್ಟರ್‌ಗಳು ಇದನ್ನು ಚಿತ್ರೀಕರಿಸಿರಲಿಲ್ಲ. ಆದರೆ ನನ್ನ ಸ್ವಂತ ಸೆಕ್ಯುರಿಟಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಲಲಿತ್ ಮೋದಿ ಹೇಳಿದ್ದಾರೆ. ಈ ವಿಡಿಯೋವನ್ನು ಮೊದಲ ಬಾರಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.

ಈ ಘಟನೆಗೆ ಹರ್ಭಜನ್‌ ಸಿಂಗ್‌ಗೆ ಎಂಟು ಪಂದ್ಯಗಳ ನಿಷೇಧ ಹೇರಿದ್ದು ನಾನೇ. ಇದು ಆಗಬಾರದಿತ್ತು ಎಂದು ಲಲಿತ್ ಮೋದಿ ಆ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದರು. ಪಂದ್ಯದ ನಂತರ ಶ್ರೀಶಾಂತ್‌ಗೆ ಕೈ ಕೊಡಲು ಹೋದಾಗ ಹರ್ಭಜನ್ ಹೊಡೆದರು ಎಂದು ಅವರು ಹೇಳಿದ್ದಾರೆ. ಈ ಘಟನೆಯ ನಂತರ ಶ್ರೀಶಾಂತ್ ಅಳುತ್ತಿರುವುದನ್ನು ಮತ್ತು ಸಹ ಆಟಗಾರರು ಸಮಾಧಾನ ಮಾಡುತ್ತಿರುವುದನ್ನು ಅಭಿಮಾನಿಗಳು ನೋಡಿದ್ದರು. ಆದರೆ ಹರ್ಭಜನ್ ಹೊಡೆಯುವ ವಿಡಿಯೋವನ್ನು ಯಾರೂ ನೋಡಿರಲಿಲ್ಲ. ಐಪಿಎಲ್‌ನಲ್ಲಿ ಅಕ್ರಮ ನಡೆಸಿದ ಆರೋಪದ ಮೇರೆಗೆ ಲಲಿತ್ ಮೋದಿ ಭಾರತ ಬಿಟ್ಟು ಈಗ ಅಮೆರಿಕದಲ್ಲಿದ್ದಾರೆ.